Top

ಒಳ್ಳೆಯದಲ್ಲ ಅನ್ನುವ ಈ 'ಆಹಾರ' ಎಷ್ಟು ಒಳ್ಳೆಯದು ಗೊತ್ತಾ?

ಒಳ್ಳೆಯದಲ್ಲ ಅನ್ನುವ ಈ ಆಹಾರ ಎಷ್ಟು ಒಳ್ಳೆಯದು ಗೊತ್ತಾ?
X

ನಾವು ಆರೋಗ್ಯವಾಗಿರಬೇಕು ಅಂತ ಏನೆಲ್ಲಾ ಮಾಡುತ್ತೇವೆ. ಅದನ್ನು ತಿಂದರೆ ಚೆನ್ನಾಗಿರುತ್ತೇವೆ. ಇದನ್ನು ತಿನ್ನದಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ... ಹೀಗೆ ಯೋಚನೆ ಮಾಡುತ್ತಲೇ ಇರುತ್ತವೆ. ಆದರೆ ಕೆಲವು ಬಾರಿ ನಾವು ಇದು ಒಳ್ಳೆಯದಲ್ಲ ಅಂತ ತಿನ್ನದೇ ಇರುವ ಆಹಾರದಲ್ಲೂ ಒಳ್ಳೆಯ ಅಂಶಗಳು ಇರುತ್ತವೆ ಗೊತ್ತಾ? ಅಂತಹ ಆಹಾರಗಳು ಅದರ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

ಮೊಟ್ಟೆಯ ಹಳದಿ ಭಾಗ

ಮೊಟ್ಟೆ ಬಿಳಿ ಭಾಗ ಮಾತ್ರ ತಿನ್ನಬೇಕು, ಹಳದಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ವಾಡಿಕೆ. ಯಾಕೆಂದರೆ ಮೊಟ್ಟೆಯ ಹಳದಿಯಲ್ಲಿರುವ ಕೊಬ್ಬು ನಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ. ಆದರೆ ಇದೇ ಮೊಟ್ಟೆಯ ಹಳದಿ ಭಾಗ (ಬಿಳಿ ಭಾಗದ ಜೊತೆ) ದಿನಕ್ಕೆ ಒಂದು ಅಥವಾ 2 ತಿಂದರೆ ಆರೋಗ್ಯಕ್ಕೆ ಒಳ್ಳೆಯದು.ಇದರಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯ ವೃದ್ಧಿಸುತ್ತದೆ. ಮೊಟ್ಟೆಯಲ್ಲಿರುವ ಬೀಟೈನ್ (betaine) ಎಂಬ ಅಂಶ ದೇಹದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇನ್ನು ಹಳದಿಯಲ್ಲಿ ಕೋಲೀನ್ (choline) ಎಂಬ ಪೋಷಕಾಂಶ ಅಧಿಕ ಪ್ರಮಾಣದಲ್ಲಿರುತ್ತದೆ. ‘ಬಿ’ ಸಮೂಹಕ್ಕೆ ಸೇರಿದ ಒಂದು ಬಗೆಯ ವಿಟಮಿನ್ ಅನ್ನು ಕೊಲೀನ್ ಎನ್ನುತ್ತಾರೆ. ಇದು ಅಸೆಟೈಲ್ಕೋಲಿನ್ (acetylcholine) ಎಂಬ ರಾಸಾಯನಿಕವನ್ನು ಉತ್ಪತ್ತಿ ಮಾಡುತ್ತದೆ. ಇದು ಮೆದುಳಿನ ನರಸಂವಾಹಕಗಳ ಕಾರ್ಯವನ್ನು ಸರಾಗವಾಗಿ ಮಾಡಲು ಸಹಾಯ ಮಾಡುತ್ತದೆ.

ನೆಲ ಕಡಲೆ-ಬಟರ್

ನೆಲಕಡಲೆಕಾಯಿಯ ಪೇಸ್ಟ್ ಅಥವಾ ಬೆಣ್ಣೆ ಅನಾರೋಗ್ಯಕರ ಎಂಬ ಕಾರಣಕ್ಕೆ ತಿನ್ನಲು ನಾವು ಹಿಂಜರಿಯುತ್ತೇವೆ. ನೆಲಗಡಲೆಯಲ್ಲಿರುವ ಪಿ-ಕೊಮಾರಿಕ್ (p-coumaric) ಎನ್ನುವ ಆ್ಯಸಿಡ್ ಹೃದಯ ರಕ್ತನಾಳಗಳಿಗೆ ಸಂಬಂಧಿಸಿದ ಖಾಯಿಲೆಯನ್ನು ಉಂಟುಮಾಡುವ ರೋಗಾಣುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಹೊಟ್ಟೆಯ ಕ್ಯಾನ್ಸರ್ ಬರುವುದನ್ನು ತಡೆಗಟ್ಟುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಇರುವ ನಿಯಾಸಿನ್ ಎಂಬ ಅಂಶ ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳಾದ ಉಂಟು ಮಾಡುವ ರೋಗಾಣಗಳನ್ನು ತಡೆಯುತ್ತವೆ.

ಕಾಫಿ

ಕಾಫಿಯಲ್ಲಿರುವ ಕೆಫೀನ್ ಅಂಶ ಕಾಫಿ ಹೆಚ್ಚು ಸೇವನೆ ನಿರ್ಬಂಧಿಸಲಾಗುತ್ತದೆ. ಆದರೆ ಈ ಪೇಯ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಅಷ್ಟು ಹಾನಿಯುಂಟು ಮಾಡುವುದಿಲ್ಲ. ಕಾಫಿಯಲ್ಲಿ ಮೆಗ್ನಿಶಿಯಂ ಮತ್ತು ಕ್ರೋಮಿಯಂ ಖನಿಜಗಳು ಉತ್ತಮ ಪ್ರಮಾಣದಲ್ಲಿದ್ದು, ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡಿ, ದೇಹದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಆದರೆ ಸಕ್ಕರೆ, ಹಾಲು ಹಾಕಿದ ಕಾಫಿಗಿಂತ ಬೆಲ್ಲ ಮತ್ತು ನೀರಿನಿಂದ ಮಾಡಿದ ಕರಿ ಕಾಫಿ ಒಳ್ಳೆಯ ಪರಿಣಾಮ ಬೀರುತ್ತದೆ.

ತುಪ್ಪ

ಸರಳವಾಗಿ ಜೀರ್ಣವಾಗುವ ಕೊಬ್ಬು ಅಂದರೆ ತುಪ್ಪ. ಇದು ಜೀರ್ಣಕ್ರೀಯೆಯನ್ನು ಸರಾಗವಾಗುವಂತೆ ಮಾಡಿ, ಮಲಬದ್ಧತೆಯನ್ನು ನಿವಾರಿಸುತ್ತದೆ. ಇದರಿಂದ ದೇಹದ ಒಳಗಿರುವ ಕಲ್ಮಶಗಳು ಸುಲಭವಾಗಿ ಹೊರಹೋಗುತ್ತವೆ. ಅಲ್ಲದೆ, ಇದು ಇಮ್ಮ್ಯುನಿಟಿಯನ್ನು ಉತ್ತಮಪಡಿಸಿ, ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ಎಣ್ಣೆಯನ್ನು ಉಪಯೋಗಿಸುವುದಕ್ಕಿಂತ ನಮ್ಮ ಪ್ರತಿದಿನದ ಆಹಾರದಲ್ಲಿ ಸ್ವಲ್ಪ ತುಪ್ಪ ಸೇರಿದರೆ ಆರೋಗ್ಯ ಸಮತೋಲನದಲ್ಲಿರುತ್ತದೆ.

ಆಲೂಗಡ್ಡೆ

ಆಲೂಗಡ್ಡೆ ಎಂದರೆ ಗ್ಯಾಸ್ಟ್ರಿಕ್​, ಅಸಿಡಿಟಿಗೆ ಕಾರಣ ಎಂದೇ ಎಲ್ಲರೂ ಭಾವಿಸಿದ್ದರೆ. ಆದರೆ ಇದನ್ನು ಹಿತಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಎಣ್ಣೆಯಲ್ಲಿ ಕರಿದ ಯಾವುದೇ ಆಹಾರ ದೇಹಕ್ಕೆ ಹಾನಿಕರ. ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಕರಿಯದೆ ಆರೋಗ್ಯಕರ ರೀತಿಯಲ್ಲಿ ಬೇಯಿಸಿ ತಿಂದರೆ ಅದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆಲೂಗಡ್ಡೆಯಲ್ಲಿ ದೇಹಕ್ಕೆ ಶಕ್ತಿಯನ್ನು ನೀಡುವ ಕಾರ್ಬೋಹೈಡ್ರೇಟ್ ಶ್ರೀಮಂತವಾಗಿದ್ದು, ಸ್ವಲ್ಪ ಕೊಬ್ಬಿನಂಶವಿದೆ. ಅಲ್ಲದೆ, ಇದರಲ್ಲಿ ವಿಟಮಿನ್ ಸಿ ಕೂಡ ಹೇರಳವಾಗಿದ್ದು, ವಿಟಮಿನ್ ಬಿ ಮತ್ತು ಪೊಟ್ಯಾಶಿಯಂ ಕೂಡ ಅಧಿಕ ಪ್ರಮಾಣದಲ್ಲಿದೆ. ಆಲೂಗಡ್ಡೆಯ ಸಿಪ್ಪೆಯಲ್ಲೂ ನಾರಿನಂಶವಿದೆ.

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಕ್ಯಾಲೋರಿ ಅಧಿಕ ಪ್ರಮಾಣದಲ್ಲಿರುವುದರಿಂದ ಇದರಿಂದ ದೂರವಿರಬೇಕೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಇದರಲ್ಲಿ ನಾರಿನಂಶ ಶ್ರೀಮಂತವಾಗಿದ್ದು, ಹೃದಯದ ಆರೋಗ್ಯಕ್ಕೆ ಅವಶ್ಯಕವಾಗಿದೆ. ಇದರಲ್ಲಿ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ಸ್ ಮತ್ತು ಖನಿಜಾಂಶಗಳಿವೆ. ಪೊಟ್ಯಾಶಿಯಂ, ಮೆಗ್ನೆಶಿಯಂ, ಮ್ಯಾಂಗನೀಸ್, ಕ್ಯಾಲ್ಶಿಯಂ, ಕಬ್ಬಿಣಾಂಶ, ಫೋಲೇಟ್, ನಿಯಾಸಿನ್, ರಿಬೋಫ್ಲೇವಿನ್ ಮತ್ತು ಬಿ6 ಖನಿಜಾಂಶಗಳು ಹೇರಳವಾಗಿವೆ. ಇದು ಮೆಟಾಬಾಲಿಸಂ ಹೆಚ್ಚಿಸಿ ಜೀರ್ಣಕ್ರೀಯೆಯನ್ನು ಸುಗಮಗೊಳಿಸುತ್ತದೆ.

Next Story

RELATED STORIES