Top

ದಿಢೀರ್ ಕುಸಿದ ಮನೆ : ಸಿನಿಮೀಯ ರೀತಿಯಲ್ಲಿ ಮನೆಯಲ್ಲಿದ್ದವರು ಪಾರು.!!

ದಿಢೀರ್ ಕುಸಿದ ಮನೆ :  ಸಿನಿಮೀಯ ರೀತಿಯಲ್ಲಿ ಮನೆಯಲ್ಲಿದ್ದವರು ಪಾರು.!!
X

ಮೈಸೂರು : ರಾಜ್ಯದಲ್ಲಿ ವರುಣ ಆರ್ಭಟಕ್ಕೆ, ಅನೇಕ ಅವಾಂತರಗಳೇ ಸೃಷ್ಠಿಯಾಗಿವೆ. ಅನೇಕ ಗ್ರಾಮಗಳು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ. ಕೆಲವೊಮ್ಮೆ ಮನೆ ಕುಸಿದು, ಇಡೀ ಕುಟುಂಬಸ್ಥರು ಸಾವನ್ನಪ್ಪಿದ ಘಟನೆ ಅನೇಕ ಕಡೆಯಲ್ಲಿ ನಡೆದಿವೆ. ಆದ್ರೇ ಮೈಸೂರಿನಲ್ಲಿ ರಾತ್ರಿ ನಿದ್ದೆಯಲ್ಲಿದ್ದವರ ಮೇಲೆ ದಿಢೀರ್ ಮನೆ ಕುಸಿದರೂ, ಮನೆಯಲ್ಲಿದ್ದವರೆಲ್ಲಾ ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ.

ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೋರನಕಟ್ಟೆ ಗಿರಿಜನರ ಹಾಡಿಯಲ್ಲಿ ಮನೆಯೊಂದು ಕುಸಿದು ಬಿದ್ದಿರುವ ಘಟನೆ ನಡೆದಿದೆ. ಬೋರನಕಟ್ಟೆ ಗಿರಿಜನರ ಹಾಡಿಯಲ್ಲಿ ಸುಭಾಷಿನಿ ಮತ್ತು ಪತಿ, ಇಬ್ಬರು ಮಕ್ಕಳು ವಾಸವಾಗಿದ್ದರು. ಕಳೆದ 3 ವಾರಗಳ ಹಿಂದೆ ಸುರಿದ ಮಳೆಗೆ ರಾತ್ರಿ ಮನೆ ದಿಢೀರ್ ಕುಸಿದು ಬಿದ್ದಿದೆ. ಅಡುಗೆ ಮನೆ ಮೊದಲು ಹೀಗೆ ಕುಸಿದು ಬಿದ್ದ ಪರಿಣಾಮ, ಮನೆಯಲ್ಲಿದ್ದ ನಾಲ್ವರು ಎಚ್ಚರಗೊಂಡು ಹೊರಗೆ ಓಡಿ ಬಂದಿದ್ದಾರೆ. ನಂತ್ರ ಇಡೀ ಮನೆ ಕುಸಿದು ಬಿದ್ದು, ಇದೀಗ ಕುಟುಂಬಸ್ಥರು ಬೀದಿಗೆ ಬಿದ್ದಿದ್ದಾರೆ. ಇರಲು ಮನೆಯಿಲ್ಲದೇ ಪಕ್ಕದ ಮನೆಯಲ್ಲಿ ದಯನೀಯ ಸ್ಥಿತಿಯಲ್ಲಿ ಇಡೀ ಕುಟುಂಬ ಸದ್ಯ ಇದೀಗ ವಾಸಿಸುತ್ತಿದೆ.

ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರೂ, ನಿತ್ಯವೂ ಅಡುಗೇ, ದಿನನಿತ್ಯ ಕಾರ್ಯ ಮುರಿದ ಮನೆಯಲ್ಲೇ ನಡೆಸುತ್ತಿರುವ ಸುಭಾಷಿನಿ ಕುಟುಂಬದ ಗೋಳು ಹೇಳತೀರದಾಗಿದೆ. ಈ ಮೂಲಕ ನಿತ್ಯ ನರಕಯಾತನೆಯನ್ನು ಅನುಭವಿಸುತ್ತಿರುವ ಕುಟುಂಬ, ಮುರಿದ ಮನೆಯ ಮರು ನಿರ್ಮಾಣಕ್ಕಾಗಿ ದುಂಬಾಲು ಬೀಳುತ್ತಿದ್ದಾರೆ. ಜನಪ್ರತಿನಿಧಿಗಳು, ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ, ಮನೆ ಕಟ್ಟಿಸಿಕೊಡುತ್ತಾರಾ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಅಂದಹಾಗೇ ಬೋರನಕಟ್ಟೆ ಗಿರಿಜನರ ಹಾಡಿಯಲ್ಲಿ 90 ಕುಟುಂಬಗಳ ಸುಮಾರು 400 ಗಿರಿಜನರು ವಾಸಿಸುತ್ತಿದ್ದಾರೆ. ಸುಭಾಷಿನಿ ಕುಟುಂಬದ ಮನೆ ಕುಸಿದ ರೀತಿಯಲ್ಲಿಯೇ ಇಲ್ಲಿನ ಅನೇಕ ಮನೆಗಳು ಕುಸಿಯುವ ಹಂತವನ್ನು ತಲುಪಿವೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಮೂಲ ಸೌಕರ್ಯ ಕಲ್ಪಿಸುವಂತೆ ಹಾಡಿಯ ಗಿರಿಜನರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ನಿತ್ಯವೂ ಇಲ್ಲಿನ ಗಿರಿಜನರು ಸಾವಿನ ಮೇಲೆ ಸವಾರಿ ಮಾಡಿದಂತೆ ಜೀವನ ನಡೆಸುತ್ತಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಿರುವ ಹಾಡಿಯ ಮಹಿಳೆಯರು, ಚುನಾವಣೆಗೆ ಓಟು ಕೇಳೋಕೆ ಮಾತ್ರ ಬರ್ತೀರಿ, ಮೂಲ ಸೌಕರ್ಯ ಕಲ್ಪಿಸಿ ಅಂತ ಯಾರನ್ನೇ ಈಗ ಕೇಳಿದರೂ ಕ್ಯಾರೇ ಅನ್ನೋದಿಲ್ಲ. ದಿನೇ ದಿನೇ ಹೀಗೆ ಮನೆಗಳು ಗಿರಿಜನರ ಹಾಡಿಯಲ್ಲಿ ಕುಸಿಯುತ್ತಾ ಇದ್ದರೇ, ಬೇರೆಯವರ ಮನೆಯಲ್ಲಿ ಎಷ್ಟು ದಿನ ಇರಬೇಕು.? ನಮ್ಮ ಕಷ್ಟಕ್ಕೆ ಸ್ಪಂದಿಸಿ ಎಂದು ಗೋಳಾಡುತ್ತಿದ್ದಾರೆ.

Next Story

RELATED STORIES