Top

ಇದೊಂದು ಹೃದಯ ವಿದ್ರಾವಕ ಘಟನೆ : ಅಷ್ಟೇ ಕಣ್ಣೀರು ತರಿಸುವ ಕತೆ.!!

ಇದೊಂದು ಹೃದಯ ವಿದ್ರಾವಕ ಘಟನೆ : ಅಷ್ಟೇ ಕಣ್ಣೀರು ತರಿಸುವ ಕತೆ.!!
X

ಚಿತ್ರದುರ್ಗ : ಹನ್ನೆರಡು ವರ್ಷದ ನಂತರ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ಪ್ರಸವ ಆಗಲಿ ಅಂದ್ಕೊಂಡು ಆಸ್ಪತ್ರೆಗೆ ಸೇರಿಸಿದರು. ಅಂದ್ಕೊಂಡಹಾಗೆ ಆಗಿದ್ರೆ ಆಕೆ ಮುದ್ದಾದ ಮಗುವಿಗೆ ಜನ್ಮ ನೀಡಬೇಕಿತ್ತು. ಆದ್ರೆ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಬೇಕಿದ್ದ ವೈದ್ಯರು, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸಲುವಾಗಿ ಆಕೆಯನ್ನ ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಹಾಕಿದ್ರು. ಹೀಗಾಗಿ ಗರ್ಭದಿಂದ ಅರೆಬರೆ ಹೊರಬಂದ ಮಗು ಸೇರಿದಂತೆ ತಾಯಿ ಕೂಡ ಮೃತಪಟ್ಟಿರೋ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಕೋಟೆನಾಡು ಚಿತ್ರದುರ್ಗ ತಾಲೂಕು ಹೊಸಕಲ್ಲಹಳ್ಳಿ ನಿವಾಸಿ ಪಾಪಣ್ಣ ಅವರ ಪತ್ನಿ ಸುಶೀಲ ಮದುವೆಯಾಗಿ ಹನ್ನೆರಡು ವರ್ಷದ ಬಳಿಕ ಎರಡನೇ ಬಾರಿಗೆ ಗರ್ಭಿಣಿ ಆಗಿದ್ರು. ಪೋಷಕರ ಆಸೆಯಂತೆ ಹೆರಿಗೆ ಆಗಲಿ ಅಂದ್ಕೊಂಡು ತವರು ಮನೆ ಸೇರಿದ್ದ ಸುಶೀಲ, ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಾಗ ಚಳ್ಳಕೆರೆ ತಾಲೂಕಿನ ತನ್ನ ತವರೂರು ಪರಶುರಾಮಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ರು.

ಆದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ತಜ್ಞ ವೈದ್ಯರ ಲಭ್ಯತೆ ಇಲ್ಲದ ಕಾರಣ ಹೇಳಿದ ಅಲ್ಲಿನ ಸಿಬ್ಬಂದಿಗಳು, ಗರ್ಭಿಣಿ ಮಹಿಳೆಯನ್ನ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ ಮೂಲಕ ಚಳ್ಳಕೆರೆ ಆಸ್ಪತ್ರೆಗೆ ಬಂದು ದಾಖಲಾದ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗುತ್ತಿದ್ದಂತೆ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ.

ಈ ವೇಳೆ ತಾಯಿಯ ಗರ್ಭದಿಂದ ಮೊದಲಿಗೆ ಮಗುವಿನ ಕಾಲು ಹೊರಬಂದಿದ್ದನ್ನು ಕಂಡು ಗಾಭರಿಯಾದ ಅಲ್ಲಿನ ವೈದ್ಯರು, ಇಲ್ಲಿ ಹೆರಿಗೆ ಮಾಡಿಸಲು ಆಗೋದಿಲ್ಲ, ನೀವು ಜಿಲ್ಲಾಸ್ಪತ್ರೆಗೆ ಹೋಗಿ ಅಂತ ಹೇಳಿದ್ದಾರೆ. ಹೀಗಾಗಿ ಮತ್ತೆ ಅಲ್ಲಿಂದ ತಾಯಿಯ ಗರ್ಭದಿಂದ ಅರೆಬರೆ ಹೊರಬಂದಿದ್ದ ಮಗುವಿನೊಂದಿಗೆ ತಾಯಿಯನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ. ಈ ಮೂಲಕ ಹೃದಯ ವಿದ್ರಾವಕ ಘಟನೆಗೆ, ತಾಯಿ-ಮಗುವಿನ ಸಾವಿಗೇ, ವೈದ್ಯರ ನಿರ್ಲಕ್ಷವೇ ಕಾರಣವಾಗಿಬಿಟ್ಟಿದೆ.

ಇನ್ನೂ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಮತ್ತು ಮಗು ಸಾವನ್ನಪ್ಪಿದ ಬಗ್ಗೆ ವಿಚಾರ ತಿಳಿದ ಗರ್ಭಿಣಿ ಮಹಿಳೆ ಸುಶೀಲ ಅವರ ಪೋಷಕರು ಮತ್ತು ಗ್ರಾಮಸ್ಥರು, ಇಂದು ಪರಶುರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಜಮಾಯಿಷಿ, ವೈದ್ಯರ ವಿರುದ್ದ ಪ್ರತಿಭಟನಾ ಧರಣಿ ನಡೆಸಿದ್ರು. ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಪರಶುರಾಮಪುರ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಿ, ಅಗತ್ಯ ತಜ್ಞ ವೈದ್ಯರುಗಳನ್ನ ನೇಮಿಸಬೇಕು ಎಂದು ಒತ್ತಾಯಿಸಿದರು.

ವೈದ್ಯರ ನಿರ್ಲಕ್ಷ್ಯ ಖಂಡಿಸಿ ಗರ್ಭಿಣಿ ಮಹಿಳೆಯ ಪೋಷಕರು ಮತ್ತು ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರುವ ಹಿರಿಯ ವೈದ್ಯಾಧಿಕಾರಿಗಳು, ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದರು. ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡುವುದಾಗಿ ಭರವಸೆಯನ್ನೇನೋ ನೀಡಿದ್ದಾರೆ, ಆದ್ರೆ ವೈದ್ಯರ ಬೇಜವ್ದಾರಿತನ ಮತ್ತು ನಿರ್ಲಕ್ಷ್ಯದಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದ ಕಾರಣಕ್ಕೆ ತಾಯಿ ಮಗು ಬಲಿಯಾಗಿದ್ದಾರೆ.

ಇನ್ನಾದ್ರೂ ಸಂಬಂಧಪಟ್ಟವರು ಎಚ್ಚೆತ್ತು, ಜಿಲ್ಲಾ ಕೇಂದ್ರಗಳಿಂದ ದೂರ ಇರುವ ಪ್ರದೇಶಗಳಲ್ಲಿರುವ ಆಸ್ಪತ್ರೆಗಳಿಗೆ ತಜ್ಞ ವೈದ್ಯರುಗಳನ್ನ ನೇಮಿಸಲಿ. ಈ ಮೂಲಕ ಮುಂದಾಗಬಹುದಾದ ಮತ್ತಷ್ಟು ಅನಾಹುತಗಳಿಗೆ ಕಡಿವಾಣ ಹಾಕಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ : ವೀರೇಶ್ ವಿ ಚಳ್ಳಕೆರೆ, ಟಿವಿ5 ಚಿತ್ರದುರ್ಗ

Next Story

RELATED STORIES