Top

ಅಲೆಗಳ ಹೊಡೆತಕ್ಕೆ ಕೊಚ್ಚಿಹೋದ ಕಡಲ ಮಕ್ಕಳ ಬದುಕು

ಅಲೆಗಳ ಹೊಡೆತಕ್ಕೆ ಕೊಚ್ಚಿಹೋದ ಕಡಲ ಮಕ್ಕಳ ಬದುಕು
X

ಮಂಗಳೂರು : ಅಬ್ಬರಿಸಿ ದಡಕ್ಕೆ ವೇಗವಾಗಿ ಅಪ್ಪಳಿಸೋ ಅಲೆಗಳು. ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗ್ತಿವೆ ಮನೆಗಳು. ಭಯದ ವಾತಾವರಣದಲ್ಲೇ ಹಗಲು ರಾತ್ರಿ ದಿನ ಕಳೆಯುತ್ತಿದ್ದಾರೆ ಜನರು. ಇದು ಮಂಗಳೂರು ಉಳ್ಳಾಲ ಕಡಲ ತೀರದ ಪರಿಸ್ಥಿತಿ. ಕಡಲಕೊರೆತ ತೀರದ ಜನರ ಬದುಕನ್ನು ಹೇಗೆ ನಾಶ ಮಾಡಿದೆ ಅಂತ ಮುಂದೆ ಓದಿ...

ಅಲೆಗಳ ಹೊಡೆತಕ್ಕೆ ಎಲ್ಲವೂ ನುಚ್ಚುನೂರು : ಕಣ್ಣೆದುರಿಗೆ ಸಮುದ್ರ ಪಾಲಾಯಿತು ಮನೆ...!

ಇದು ಕಳೆದ ಮೂರ್ನಾಲ್ಕು ದಿನಗಳಿಂದ ಮಂಗಳೂರಿನ ಉಳ್ಳಾಲ ತೀರ ನಿವಾಸಿಗಳು ಅನುಭವಿಸುತ್ತಿರೋ ಪಾಡು. ಮಳೆಗಾಲದ ಈ ಅವಧಿಯಲ್ಲಿ ಪ್ರಕ್ಷುಬ್ಧಗೊಂಡಿರೋ ಸಮುದ್ರ ತೀರದ ಜನರ ಬದುಕನ್ನೇ ನಾಶ ಮಾಡ್ತಿದೆ. ಭಾರೀ ಅಲೆಗಳು ತೀರಕ್ಕೆ ಶರವೇಗದಲ್ಲಿ ಅಪ್ಪಳಿಸುತ್ತಿದ್ದು ಅಲೆಗಳ ಹೊಡೆತಕ್ಕೆ ಸಿಕ್ಕಿ ಹಲವು ಮನೆಗಳು ಸಮುದ್ರ ಪಾಲಾಗ್ತಿವೆ.

ಉಳ್ಳಾಲದ ಕಿರಿನಗರ, ಕೈಕೋ ಮುಕ್ಕಚ್ಚೇರಿ ಪ್ರದೇಶದಲ್ಲಿ ಕಡಲಕೊರೆತ ವಿಪರೀತ ಹಂತಕ್ಕೆ ಬಂದು ತಲುಪಿದ್ದು ಈಗಾಗಲೇ ಸುಮಾರು ಆರೇಳು ಮನೆಗಳು ಸಮುದ್ರದ ಪಾಲಾಗಿವೆ. ಅಷ್ಟೇ ಅಲ್ಲ ಹಲವಾರು ಮನೆಗಳು ಇನ್ನೇನು ಸಮುದ್ರದ ಪಾಲಾಗೋ ಅಪಾಯದಲ್ಲಿದೆ.ಈ ಪ್ರದೇಶದ ಸುಮಾರು ನೂರಕ್ಕೂ ಅಧಿಕ ಕುಟುಂಬಗಳು ನಿತ್ಯ ಭಯ ಆತಂಕದಲ್ಲೇ ಹಗಲೂ ರಾತ್ರಿ ಕಳೆಯೋ ಪರಿಸ್ಥಿತಿಯಲ್ಲಿದ್ದಾರೆ. ಯಾವಾಗ ಅವರ ಮನೆಮಠ ಸಮುದ್ರದ ರೌದ್ರಾವತಾರಕ್ಕೆ ತುತ್ತಾಗುತ್ತೋ ಎಂಬ ಆತಂಕದಲ್ಲಿದ್ದಾರೆ.

ಕಡಲು ಕೊರೆತ ಈ ಭಾಗದ ಜನರಿಗೆ ಹೊಸೆತೇನಲ್ಲ. ಹಲವು ವರ್ಷಗಳಿಂದ ಜನರು ಈ ಸಮಸ್ಯೆಯನ್ನು ಅನುಭವಿಸುತ್ತಾ ಬಂದಿದ್ದಾರೆ. ಪ್ರತಿ ಬಾರಿ ಕಡಲುಕೊರೆತ ಉಂಟಾದಾಗ ಸ್ಥಳಕ್ಕೆ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಹಾರದ ಭರವಸೆ ಕೊಡ್ತಾರೆ. ಭಾರೀ ಗಾತ್ರದ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡ್ತಾರೆ. ಆದರೆ ಇದರಿಂದ ಸಮಸ್ಯೆ ಏನೂ ಕಡಿಮೆಯಾಗ್ತಿಲ್ಲ.

ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸೋ ಕೆಲಸ ಇದುವರೆಗೂ ನಡೆದಿಲ್ಲ. ಜನಪ್ರತಿನಿಧಿಗಳು ಚುನಾವಣಾ ಸಂದರ್ಭದಲ್ಲಿ ಕಡಲಕೊರೆತಕ್ಕೆ ಶಾಶ್ವತ ಪರಿಹಾರದ ಭರವಸೆ ನೀಡ್ತಾರೆ. ಆದ್ರೆ ಆ ಬಳಿಕ ಎಲ್ಲವೂ ಮರೆತುಹೋಗುತ್ತೆ. ಮತ್ತೆ ಮಳೆಗಾಲ ಬಂದಾಗ ಜನರು ಕಡಲ ರೌದ್ರಾವತಾರಕ್ಕೆ ಮತ್ತೊಮ್ಮೊ ಸಿಕ್ಕಿಹಾಕಿಕೊಂಡು ನಮ್ಮ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾತ್ಕಾಲಿಕ ಪರಿಹಾರ ಕೊಡುವ ಬದಲಾಗಿ ಬೇರೆಲ್ಲಾದರೂ ಸ್ಥಳಾಂತರ ಮಾಡಿ‌ ಶಾಶ್ವತ ಪರಿಹಾರವನ್ನು ಒದಗಿಸಿ ಕೊಡಿ ಎಂಬುವುದು ಈ ಭಾಗದ ನಿವಾಸಿಗಳ ಒತ್ತಾಯ.

ಒಟ್ಟಿನಲ್ಲಿ ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ. ಅಗತ್ಯವಿದ್ದಲ್ಲಿ ಬ್ರೇಕ್ ವಾಟರ್ ಹಾಗೂ ತಡೆಗೋಡೆ ನಿರ್ಮಿಸಬೇಕಾಗಿದೆ. ಇದು ಸಾಧ್ಯವಿಲ್ಲ ಎಂದಾದರೆ ಈ ಪ್ರದೇಶದ ಜನರಿಗೆ ಬೇರೆಲ್ಲಾದರೂ ಮನೆ ನಿರ್ಮಾಣದ ಜಮೀನು ನೀಡಿ ಅಲ್ಲಿ ಅವರನ್ನು ಸ್ಥಳಾಂತರ ಮಾಡಬೇಕಾಗಿದೆ. ಇಲ್ಲಾ ಅಂದ್ರೆ ಪ್ರತಿವರ್ಷ ಈ ಸಮಸ್ಯೆಗೆ ಸಿಕ್ಕಿ ಜನರು ನರಳೋದು ತಪ್ಪೋದಿಲ್ಲ.

ವರದಿ : ಪ್ರಜ್ವಲ್‌ ಅಮಿನ್‌, Tv5 ಮಂಗಳೂರು

Next Story

RELATED STORIES