ರೈತನ ಬೆಳೆ ಕಾಯುತ್ತಿದ್ದಾರೆ ಮೋದಿ, ಅಮಿತ್ ಶಾ: ಆಶ್ಚರ್ಯನಾ.? ಈ ಸುದ್ದಿ ಓದಿ.!!

ಚಿಕ್ಕಮಗಳೂರು : ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ಸುತ್ತುವ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ, ರಾಜ್ಯ ಸುತ್ತುವ ಬಿ ಎಸ್ ಯಡಿಯೂರಪ್ಪ ಈಗ ಧಾರಕಾರ ಮಳೆ, ಮೈ ಕೊರೆವ ಚಳಿ, ಶರವೇಗದಲ್ಲಿ ನುಗ್ಗಿಬರುವ ಗಾಳಿಯನ್ನು ತಡೆದುಕೊಂಡು ಹಗಲಿರುಳೆನ್ನದೇ ರೈತರ ಹೊಲ ಗದ್ದೆ ಕಾಯುತ್ತಿದ್ದಾರೆ.
ಅಯ್ಯೋ ಇದೇನಪ್ಪಾ ಅಂತಾ ಹುಬ್ಬೇರಿಸಬೇಡಿ ಈ ಘಟಾನುಘಟಿ ನಾಯಕರೆಲ್ಲ ಹೊಲ ಗದ್ದೆ ಕಾಯುತ್ತಿರುವುದು ನಿಜ. ಇಂತಹ ದಿಟ್ಟ ನಾಯಕರನ್ನೆಲ್ಲಾ ತಲೆ ಹೆಗಲ ಮೇಲೆ ಹೊತ್ತುತಂದ ರೈತರು ತಮ್ಮ ಹೊಲಗದ್ದೆ ಕಾಯುವ ಕೆಲಸ ಕೊಟ್ಟು ನಿಲ್ಲಿಸಿದ್ದಾರೆ.
ಚುನಾವಣೆ ಪ್ರಚಾರಕ್ಕೆ ಬಂದ ರೈತರು ಸುಮ್ಮನೆ ಹೋಗುವುದಿಲ್ಲ. ಅವರು ಅಲ್ಲಿನ ಬ್ಯಾನರ್ ಕಟೌಟ್ ಗಳನ್ನು ಹೊತ್ತೊಯ್ಯುತ್ತಾರೆ. ಅದೇ ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಬಳಸಲಾಗಿದ್ದ ಮೋದಿ ಅಮಿತ್ ಶಾ ಬಿಎಸ್ ವೈ ಕಟೌಟ್ ಗಳು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯ ರೈತರ ಜಮೀನಿನಲ್ಲಿ ನಿಲ್ಲಿಸಲಾಗುದೆ.
ಭತ್ತದ ಗದ್ದೆಗೆ ಬರುವ ಪ್ರಾಣಿ, ಪಕ್ಷಿಗಳನ್ನು ಬೆದರಿಸಲು ಈ ಕಟೌಟ್ ಗಳನ್ನು ಬಳಸಲಾಗಿದ್ದು ಸಾರ್ವಜನಿಕರಿಗೆ ಒಂದು ರೀತಿಯ ಮನರಂಜನೆ ನೀಡುತ್ತಿದೆ. ಅದೇನೆ ಆಗಲಿ ರೈತರು ಮತ ಯಾರಿಗೆ ಹಾಕಿದ್ರೋ ಬಿಟ್ರೊ, ಪ್ರಚಾರಕ್ಕೆ ಯಾವ ಕಾರಣಕ್ಕೆ ಬಂದಿದ್ರೋ ಏನೋ, ಗೆದ್ದ ಪಕ್ಷ ಅಥವಾ ನಾಯಕರು ರೈತರಿಗೆ ಸಹಾಯ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಪ್ರಚಾರಕ್ಕೆ ಬಂದಿದ್ದಕ್ಕೆ ರೈತರಿಗೆ ನಮ್ಮ ನಾಯಕರು ಈ ರೀತಿಯಾದ್ರು ಉಪಯೋಗವಾಗುತ್ತಿದ್ದಾರೆ ಎಂಬುದಕ್ಕಾದ್ರು ಖುಷಿಪಡ್ಬೇಕು.