ಮಹದಾಯಿ ಹೋರಾಟಕ್ಕೆ ನಾಲ್ಕು ವರ್ಷ : ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

ಹುಬ್ಬಳ್ಳಿ : ನೀರು ಕೊಡಿ ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ.. ಇದು ಮೂರು ವರ್ಷ ಪೂರೈಸಿದ ಮಹದಾಯಿ ರೈತರ ಆಕ್ರೋಶದ ನುಡಿ... ನೀರಿಗಾಗಿ ರೈತರ ದೇಶದ ಐತಿಹಾಸಿಕ ಹೋರಾಟ...ಸಾವಿರಾರು ಜನ್ರಿಂದ ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ... ರಾಜಕೀಯ ಪಕ್ಷಗಳ ಮೌನದ ಬಗ್ಗೆ ಹೋರಾಟಗಾರರ ಕಿಡಿ...
ಹೌದು, ಇದು ಬಂಡಾಯದ ನಾಡಿನ ರೈತರ ಆಕ್ರೋಶದ ಕಿಚ್ಚು. ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತರು ಹೋರಾಟ ಆರಂಭಿಸಿದ್ದಾರೆ. ಜುಲೈ 16 2015 ರಂದು ಆರಂಭವಾದ ಹೋರಾಟದ ಕಿಚ್ಚು, ಮೂರು ವರ್ಷ ಮುಗಿದು ನಾಲ್ಕನೇ ವರ್ಷಕ್ಕೆ ಕಾಲಿಟ್ರೂ ಹೋರಾಟ ಕಿಚ್ಚು ಆರಿಲ್ಲ. ಆರಂಭದಲ್ಲಿ ಉಗ್ರ ಸ್ವರೂಪ ತಾಳಿದ ಹೋರಾಟ ಇನ್ನೂ ಮುಂದುವರೆದಿದೆ. ರೈತರ ಹೋರಾಟಕ್ಕೆ ಉತ್ತರ ಕರ್ನಾಟಕ ಎನ್ನೋ ಬೇಧ ಭಾವ ಇಲ್ಲದೇ ಇಡೀ ರಾಜ್ಯವೇ ರೈತರಿಗೆ ಬೆಂಬಲ ಸೂಚಿಸಿದ್ರು. ಹೀಗಾಗಿ ಹೋರಾಟ ಆಂದೋಲನವಾಗಿ ಮಾರ್ಪಟ್ಟಿತು. ಆಗ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿ ತುಪ್ಪವಾಗಿತ್ತು.
ಆದ್ರೆ ಮೂರು ವರ್ಷ ಪೂರೈಸಿದ್ರು ರಾಜಕೀಯ ಪಕ್ಷಗಳು ಮಾತ್ರ ಮೌನಕ್ಕೆ ಜಾರಿವೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆ ವೇಳೆ ಅಬ್ಬರಿಸಿ ಬೊಬ್ಬಿರಿದ ನಾಯಕರು ಈಗ ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ನಾಲ್ಕು ದಶಕದಿಂದ ಮಹದಾಯಿ ಯೋಜನೆಯನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ಯಶಸ್ಸು ಸಾಧಿಸಿದ ಜನಪ್ರತಿನಿಧಿಗಳಿಗೆ ರೈತರು ಉಗಿಯುತ್ತಿದ್ದಾರೆ. ಹೀಗಾಗಿ ಸರ್ಕಾರ, ಜನಪ್ರತಿನಿಧಿಗಳ ಸಹವಾಸವೇ ಬೇಡ ಅಂತ ರೈತರು ರಾಷ್ಟ್ರಪತಿಗಳ ಮೊರೆ ಹೋಗಿದ್ದಾರೆ. ಮಹದಾಯಿ ವಿಷಯದಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಬೇಕು ಅಂತ ರೈತರು ಒತ್ತಾಯಿಸಿದ್ದಾರೆ.
ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಇಂದು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. "ನೀರು ಕೊಡಿ ಇಲ್ಲವೇ ದಯಾಮರಣ ಅವಕಾಶ ಕೊಡಿ" ಅಂತ ಎಲ್ಲಾ ಹೋರಾಟಗಾರರು ಒಕ್ಕೂರಲಿನ ಕೂಗು ಹಾಕಿದ್ರು. ನರಗುಂದ ಪಟ್ಟಣದ ವೇದಿಕೆಯಲ್ಲಿ ನಾಲ್ಕು ಮಠಾಧೀಶರು, ರಾಜ್ಯ ವೈದ್ಯರ ಸಂಘದ ಅಧ್ಯಕ್ಷ ರವೀಂದ್ರ ಸೇರಿದಂತೆ ಸಾವಿರಾರು ರೈತರು, ವಿವಿಧ ಸಂಘಟನೆಗಳ ಮುಖಂಡರು ಸ್ವಯಂ ಪ್ರೇರಿತವಾಗಿ ವೇದಿಕೆಗೆ ಆಗಮಿಸಿ ಸಾಮೂಹಿಕ ದಯಾಮರಣ ಚಳುವಳಿಯಲ್ಲಿ ಭಾಗಿಯಾಗಿ ರಾಷ್ಟ್ರಪತಿಗಳಿಗೆ ದಯಾಮರಣ ಪತ್ರ ಬರೆದಿದ್ದಾರೆ. ಹೋರಾಟದ ಪಕ್ಕದಲ್ಲೇ ಇರೋ ಅಂಚೆ ಕಚೇರಿಗೆ ಹೋಗಿ ಅಂಚೆ ಬಾಕ್ಸ್ ನಲ್ಲಿ ಹಾಕುವ ಮೂಲಕ ರಾಷ್ಟ್ರಪತಿಗಳಿಗೆ ಒತ್ತಾಯಿಸಿದ್ದಾರೆ.
ಸರ್ಕಾರಗಳು ರೈತರ ಆತ್ಮಹತ್ಯೆ ತಡಿಯೋಕೆ ಏನ್ ಮಾಡಬೇಕು ಅಂತ ಪ್ರಶ್ನೆ ಮಾಡ್ತಿವೆ. ಆದ್ರೆ ರೈತರು ಬೇಡೋದು ನೀರು. ನೀರು ಸಿಕ್ರೆ ನಮ್ಮ ಬಾಳು ಬಂಗಾರ ಮಾಡಿಕೊಳ್ತೀವಿ ಅಂತಿದ್ದಾರೆ. ಏನೇ ಆಗಲಿ ರೈತರ ಚಿತ್ತ ಈಗ ಆಗಸ್ಟ್ನಲ್ಲಿ ಬರುವ ನ್ಯಾಯಾಧೀಕರಣ ತೀರ್ಪಿನತ್ತ ಇದೆ. ನ್ಯಾಯಾಧೀಕರಣ ತೀರ್ಪು ವ್ಯತಿರಿಕ್ತವಾಗಿ ಬಂದ್ರೆ ಮತ್ತೆ ರೈತರ ಆಕ್ರೋಶದ ಕಟ್ಟೆ ಒಡೆಯುವುದು ಮಾತ್ರ ಗ್ಯಾರಂಟಿ..
ವರದಿ : ಯಲ್ಲಪ್ಪ ಸೋಲಾರಗೊಪ್ಪ, TV5 ಹುಬ್ಬಳ್ಳಿ.