Top

ಕಂದಾಯ ಅಧಿಕಾರಿಗಳ ಕಾರುಬಾರು : ಗೋಮಾಳ ಗೋಲ್ ಮಾಲ್ ಜೋರು.!

ಕಂದಾಯ ಅಧಿಕಾರಿಗಳ ಕಾರುಬಾರು : ಗೋಮಾಳ ಗೋಲ್ ಮಾಲ್ ಜೋರು.!
X

ತುಮಕೂರು : ರಾಜ್ಯದ ಉಪಮುಖ್ಯಮಂತ್ರಿಗಳ ಸ್ವಕ್ಷೇತ್ರ. ಇಲ್ಲಿ ಕಂದಾಯ ಅಧಿಕಾರಿಗಳದ್ದೇ ಕಾರುಬಾರು. ನೀವು ಅಲ್ಲಿ ಹೊಲ ಉಳುಮೆ ಮಾಡೋದೇ ಬೇಡ. ಸ್ವಲ್ಪ ಲಂಚ ತಳ್ಳಿದ್ರೇ ಸಾಕು ಹತ್ತಾರು ಎಕರೆ ಗೋಮಾಳ ಜಾಗ ನಿಮ್ಮದಾಗುತ್ತೆ. ಸಾಗುವಳಿ ಪತ್ರ ಪಡೆದ ಮೇಲೇ ಆ ಜಾಗದಲ್ಲಿ ನೀವು ಉಳುಮೆ ಮಾಡಬಹುದು. ಅರೆ ಇದ್ದೆಂತಾ ಕಾನೂನು ಅಂತಾ ಆಶ್ಚರ್ಯ ಪಡ್ತೀರಾ? ಮುಂದೆ ಸುದ್ದಿ ಓದಿ..

ಹೌದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ವಕ್ಷೇತ್ರದಲ್ಲಿ ಭೂಗಳ್ಳರ ಹಾವಳಿ ಹದ್ದುಮೀರಿದೆ. ಗೋಮಾಳ ಜಾಗದಲ್ಲಿ ಸಾಗುವಳಿ ನಡೆಸುವ ಮುನ್ನವೇ ಸಾಗುವಳಿ ಪತ್ರ ನೀಡಿ ಜಮೀನು ಮಂಜೂರು ಮಾಡಿಕೊಟ್ಟಿದ್ದಾರೆ. ಕೊರಟಗೆರೆ ತಾಲ್ಲೂಕಿನ ಪಣ್ಣೇನಹಳ್ಳಿ ಗ್ರಾಮದ ಸರ್ವೇ ನಂ 24 ರಲ್ಲಿರುವ 103 ಎಕರೆ ಗೋಮಾಳ ಜಾಗವನ್ನ ಸಾಗುವಳಿಯೇ ಮಾಡದಾ 15 ಮಂದಿಗೆ ಹಿಂದಿನ ತಹಶೀಲ್ದಾರ್ ರಾಜಣ್ಣ, ಕಂದಾಯ ಅಧಿಕಾರಿ ಗುರುಪ್ರಸಾದ್ ಮಂಜೂರು ಮಾಡಿದ್ದಾರೆ. 103 ಎಕರೆ ಗೋಮಾಳ ಜಾಗಕ್ಕೆ 180 ಜನ ಅರ್ಹ ಫಲಾನುಭವಿಗಳು 1998-99 ರಲ್ಲಿ ಅರ್ಜಿ ಹಾಕಿದ್ದು, ಅವರನೆಲ್ಲಾ ಕಡೆಗಣಿಸಿ, ಕೇವಲ 15 ಜನರಿಂದ ದುಡ್ಡು ಪಡೆದು ಸುಳ್ಳು ದಾಖಲೆ ಸೃಷ್ಟಿಸಿ ಸಾಗುವಳಿ ಚೀಟಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಂದಿನ ಶಾಸಕ ಸುಧಾಕರ್ ಲಾಲ್ ನೇತೃತ್ವದಲ್ಲೇ ಸಾಗುವಳಿ ಪತ್ರ ವಿತರಿಸಿದ್ದು, ಭೂಗಳ್ಳರ ಪರವಾಗಿ ಸುಧಾಕರ್ ಲಾಲ್ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಗುವಳಿ ಪತ್ರ ಪಡೆದ ಬಳಿಕ ಜೂನ್ 26 ರಂದು ರಾತ್ರೋರಾತ್ರಿ ಗ್ರಾಮದಲ್ಲಿ ನಾಟಕ ನಡೆಯುತ್ತಿದ್ದ ವೇಳೆ 103 ಎಕರೆ ಗೋಮಾಳದಲ್ಲಿದ್ದ 7 ಸಾವಿರ ಹೊಂಗೆ ಸಸಿಯನ್ನ ಏಕಾಏಕಿ ನೆಲಸಮ ಮಾಡಿಸಿದ ಭೂಗಳ್ಳರು ತಮ್ಮ ಜಾಗಗಳಲ್ಲಿ ಮೊದಲ ಬಾರಿಗೆ ಉಳುಮೆ ಮಾಡಿಸಿದ್ದಾರೆ. ಡಿಸಿಎಂ ಕ್ಷೇತ್ರದಲ್ಲೇ ಈ ಮಟ್ಟದಲ್ಲಿ ಅಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸಿ ಭೂಕಬಳಿಸುತ್ತಿದ್ರೂ ಹೇಳೋರು,ಕೇಳೋರು ಯಾರೂ ಇಲ್ಲದಂತಾಗಿದೆ.

ಈ ರೀತಿ ಸುಳ್ಳು ದಾಖಲೆ ನೀಡಿ ಅರ್ಹ ಫಲಾನುಭವಿಗಳನ್ನ ಕಡೆಗಣಿಸಿರೋದು ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಡಿಸಿಎಂ ಪರಮೇಶ್ವರ್, ತಮ್ಮ ಕ್ಷೇತ್ರದಲ್ಲೇ ಈ ರೀತಿಯ ಅಧಿಕಾರಿಗಳನ್ನ ಮೇಯಲು ಬಿಟ್ಟರೇ, ಇನ್ನೂ ರಾಜ್ಯದಲ್ಲಿ ಯಾವ ರೀತಿ ಆಡಳಿತ ನಡೆಸುತ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿದೆ.

ವರದಿ : ಟಿ.ಯೋಗಿಶ್, ಟಿವಿ5, ತುಮಕೂರು

Next Story

RELATED STORIES