Top

ಬಹುಪ್ರತಿಭೆಯ ಸಾಹಿತಿ ವ್ಯಾಸರಾವ್ ಇನ್ನಿಲ್ಲ

ಬಹುಪ್ರತಿಭೆಯ ಸಾಹಿತಿ ವ್ಯಾಸರಾವ್ ಇನ್ನಿಲ್ಲ
X

ಬೆಂಗಳೂರು: ಗೀತರಚನಕಾರ, ಕವಿ, ಕಥೆಗಾರ, ಕಾದಂಬರಿಕಾರರಾದ ಎಂ.ಎನ್​.ವ್ಯಾಸ​ರಾವ್ ಹೃದಯಾಘಾತದಿಂದ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕನ್ನಡದ ಹಲವು ಚಿತ್ರಗಳಿಗೆ ಸಾಹಿತ್ಯ ಬರೆದಿದ್ದ ವ್ಯಾಸರಾವ್ ಸಾಹಿತ್ಯ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಅವರ ಕಿರು ಪರಿಚಯ ಇಲ್ಲಿದೆ.

ಎಂ.ಎನ್. ವ್ಯಾಸರಾವ್ 27-11945ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ನರಸಿಂಗರಾವ್, ತಾಯಿ ಸುಶೀಲಮ್ಮ. ಪ್ರಾಥಮಿಕ ಶಿಕ್ಷಣ ಮೈಸೂರು. ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ. ಪದವಿ. ಡ್ರಾಮ್ಯಾಟಿಕ್ಸ್‌ನಲ್ಲಿ ಡಿಪ್ಲೊಮ. ಉದ್ಯೋಗಕ್ಕಾಗಿ ಬೆಂಗಳೂರು- ಯುನೈಟೆಡ್ ಕಮರ್ಶಿಯಲ್ ಬ್ಯಾಂಕ್. 34 ವರ್ಷ ಸೇವೆಯ ನಂತರ ಸ್ವಯಂ ನಿವೃತ್ತಿ. ನಿರಂತರ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರು.

ಸಿನಿಮಾ ಸಾಹಿತ್ಯದ ಬರಹದ ಒತ್ತಡಕ್ಕೆ ಸಿಕ್ಕಿಬಿದ್ದದ್ದೇ ಹೆಚ್ಚು. ಬೆಳ್ಳಿ ಮೂಡುವ ಮುನ್ನ-ಕವನ ಸಂಕಲನ ; ಮಳೆಯಲ್ಲಿ ನೆನೆದ ಮರಗಳು-ಕಥಾಸಂಕಲನ; ಉತ್ತರ ಮುಖಿ-ಮೂರು ನೀಳ್ಗತೆಗಳ ಸಂಕಲನ. ಸ್ಕಾಟ್ ಡಬಲ್ ಎಕ್ಸ್, ಅಖಲಾ ಮೈ ಡಾರ್ಲಿಂಗ್ ಮುಂತಾದ ಪತ್ತೇದಾರಿ ಕಾದಂಬರಿಗಳು. ನಿರೋಷ, ನದಿಮೂಲ ಮೊದಲಾದ ಸೃಜನಶೀಲ ಕಾದಂಬರಿ. ನಾಟಕ-ಕತ್ತಲಲ್ಲಿ ಬಂದವರು ಪ್ರಕಟಿತ ಕೃತಿಗಳು. ಹಲವಾರು ಕಥೆಗಳು ತೆಲುಗು, ಹಿಂದಿ, ಬಂಗಾಳಿ, ಸಿಂಧಿ, ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ.

ಚೀನಿ, ಇಂಗ್ಲಿಷ್, ಐರಿಶ್, ಫ್ರೆಂಚ್, ಉರ್ದು, ಸಿಂಧಿ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಿ.ಸಿ. ರಾಮಚಂದ್ರಶರ್ಮ, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಡಾ. ರಾಜಕುಮಾರ್, ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಸುಮತೀಂದ್ರ ನಾಡಿಗ್, ಎಚ್.ಎಸ್. ವೆಂಕಟೇಶಮೂರ್ತಿ, ಸಿ. ಅಶ್ವತ್ಥ್ ಮೊದಲಾದವರ ಸಂದರ್ಶನ-ಲೇಖನಗಳು ಪ್ರಕಟಿತವಾಗಿದೆ.

ಕೆ.ಎಸ್. ಅಶ್ವತ್ಥ್‌ ಅವರ ಆತ್ಮಕಥನ ಸುಧಾ ಪತ್ರಿಕೆಯಲ್ಲಿ ನಿರೂಪಣೆ ಪ್ರಕಟವಾಗಿದೆ. ಶ್ರವಣ ಮತ್ತು ದೃಶ್ಯಮಾಧ್ಯಮದಲ್ಲಿ ಅನೇಕ ಕಾರ‍್ಯಕ್ರಮ ನೀಡಿದ ಅನುಭವ. ಇತರರ ಕವನ, ಕಥೆ, ಹಾಸ್ಯ ಸಂಕಲನಗಳಿಗೆ ಮುನ್ನುಡಿ, ಬೆನ್ನುಡಿಯ ಹಾರೈಕೆ. ೧೫ ಕ್ಯಾಸೆಟ್ಟುಗಳಿಗೆ ಹಾಡುಗಳು, ೩೫ಕ್ಕೂ ಮಿಕ್ಕು ಧಾರಾವಾಹಿಗಳಿಗೆ ಸಾಹಿತ್ಯ ರಚನೆ. ನೂರು ಚಲನಚಿತ್ರಗೀತೆ ರಚನೆ. ಇವರ ಸಾಹಿತ್ಯದ ಮೈಸೂರು ಮಲ್ಲಿಗೆ, ಆಸ್ಫೋಟ, ದಂಗೆ ಎದ್ದ ಮಕ್ಕಳು, ವಾತ್ಸಲ್ಯ ಪಥ ಪ್ರಶಸ್ತಿ ಪಡೆದ ಚಲನಚಿತ್ರಗಳು. ಸಂದ ಪ್ರಶಸ್ತಿಗಳು- ಬರ್ಕಲೀ ತರಂಗಿಣಿ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಜೇಸೀ ಪ್ರಶಸ್ತಿ, ಸ್ವರಮಂದಾರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮುಖ್ಯವಾದುವು.

‘ಮಳೆಯಲ್ಲಿ ನೆನೆದ ಮರಗಳು’ ಕಥಾ ಸಂಕಲನಕ್ಕೆ ಸಾಹಿತ್ಯ ಅಕಾಡಮಿ ಬಹುಮಾನ. ಸಾಹಿತ್ಯ ಸಮ್ಮೇಳನ, ದಸರಾ ಕವಿ ಸಮ್ಮೇಳನ, ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗಿ ಮತ್ತು ೨೦೧೧ರಲ್ಲಿ ಯಳಂದೂರಿನಲ್ಲಿ ನಡೆದ ಯಳಂದೂರು ತಾಲೂಕು ಸಾಹಿತ್ಯ ಸಮ್ಮೇಳನದ ಆಧ್ಯಕ್ಷತೆಯ ಗೌರವ ಮುಂತಾದವುಗಳು. ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು… ಯಾರು ತಾನೆ ಕೇಳಿಲ್ಲ ಈ ಹಾಡು. ಇದೀಗ ನಿರಂತರ ಅಧ್ಯಯನ, ಬರವಣಿಗೆಯಲ್ಲಿ ನಿರತರು.

Next Story

RELATED STORIES