ಇಂಗ್ಲೆಂಡ್ಗೆ ಗೆಲುವಿನ 'ರೂಟ್': ಏಕದಿನ ಸರಣಿ ಸಮ

ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್ ಸಿಡಿಸಿದ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ 2ನೇ ಏಕದಿನ ಪಂದ್ಯವನ್ನು 86 ರನ್ ಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ಪ್ರವಾಸಿ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ 1-1ರಿಂದ ಸಮಬಲಗೊಂಡಿದ್ದು, ಅಂತಿಮ ಪಂದ್ಯ ಕುತೂಹಲ ಹೆಚ್ಚಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 7 ವಿಕೆಟ್ಗೆ 322 ರನ್ ಕಲೆ ಹಾಕಿತು. ಕಠಿಣ ಗುರಿ ಬೆಂಬತ್ತಿದ ಭಾರತ 50 ಓವರ್ ಗಳಲ್ಲಿ 236 ರನ್ ಗಳಿಗೆ ಆಲೌಟಾಯಿತು.
ಭಾರತ ಯಾವುದೇ ಹಂತದಲ್ಲೂ ಗುರಿ ಮುಟ್ಟುವ ಸೂಚನೆ ನೀಡಲಿಲ್ಲ. ನಾಯಕ ವಿರಾಟ್ ಕೊಹ್ಲಿ (46), ಸುರೇಶ್ ರೈನಾ (45) ಮತ್ತು ಧೋನಿ (37) ಹೊರತುಪಡಿಸಿದರೆ ಉಳಿದವರು ನಿಂತು ಆಡುವಲ್ಲಿ ವಿಫಲರಾದರು. ಫ್ಲಂಕಿಟ್ 4 ವಿಕೆಟ್ ಪಡೆದು ಭಾರತದ ಬ್ಯಾಟ್ಸ್ ಮನ್ಗಳನ್ನು ಕಟ್ಟಿ ಹಾಕಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಇಂಗ್ಲೆಂಡ್ ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ಬೃಹತ್ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು. ಜೋ ರೂಟ್ 116 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 113 ರನ್ ಸಿಡಿಸಿದರು. ನಾಯಕ ಇಯಾನ್ ಮಾರ್ಗನ್ (53) ಮತ್ತು ಡೇವಿಸ್ ವಿಲ್ಲಿ (50) ಅರ್ಧಶತಕಗಳನ್ನು ಬಾರಿಸಿ ತಂಡವನ್ನು ಮುನ್ನಡೆಸಿದರು.