ಬಡರೈತನ ಮಗಳೀಗ ಇಡೀ ಭಾರತಕ್ಕೆ ಹೆಮ್ಮೆಯ ಪುತ್ರಿ

ಐಎಎಎಫ್ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿರುವ ಹಿಮಾ ದಾಸ್ ಪದಕ ವಿತರಣೆ ವೇಳೆ ಭಾರತ ರಾಷ್ಟ್ರಗೀತೆ ಕೇಳಿ ಭಾವುಕರಾಗಿರುವುದಾಗಿ ಹೇಳಿದ್ದಾರೆ.
ಫಿನ್ಲೆಂಡ್ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಹಿಮಾ 400 ಮೀಟರ್ ಓಟದ ಸ್ಪರ್ಧೆಯನ್ನು ಕೇವಲ 51.46 ಸೆಕೆಂಡ್ನಲ್ಲಿ ಮುಗಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಇನ್ನು ಅಸ್ಸಾಂನ ಅಥ್ಲೀಟ್ ಹಿಮಾ ಸಾಧನೆಯನ್ನ ಕಂಡು ಪ್ರಧಾನಿ ಮೋದಿ ಕೂಡಾ ಹೊಗಳಿದ್ದಾರೆ. ಸ್ಪರ್ಧೆಯ ನಂತರ ಚಿನ್ನದ ಪದಕ ಕೊರಳಿಗೇರಿಸಿಕೊಂಡ ಹಿಮಾ ಆ ನಂತರ ಕೇಳಿಬಂದ ಭಾರತದ ರಾಷ್ಟ್ರಗೀತೆ ಕೇಳಿ ಆನಂದದಿಂದ ಕಣ್ಣೀರು ಹಾಕಿದರು. 'ಭಾರತದ ರಾಷ್ಟ್ರಗೀತೆ ನನ್ನಿಂದ ಬೇರೆ ನೆಲದಲ್ಲಿ ಮೊಳಗಬೇಕು ಎಂಬುದು ನನ್ನ ಕನಸಾಗಿತ್ತು ಅದಿಂದು ಸಾರ್ಥಕಗೊಂಡಿದೆ' ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.
'ನನ್ನ ಪೋಷಕರಿಗೆ, ಕೋಚ್ಗೆ ಹಾಗೂ ಬೆಂಬಲ ನೀಡಿದ ಎಲ್ಲಾ ಕ್ರೀಡಾಪ್ರೇಮಿಗಳಿಗೆ ಧನ್ಯವಾದ ಅರ್ಪಿಸಿರುವ ಹಿಮಾ ದಾಸ್, ಮುಂದಿನ ಏಷ್ಯನ್ ಗೇಮ್ನಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದೇನೆ, ನಾನು ಪದಕದ ಹಿಂದೆ ಓಡುವುದಿಲ್ಲ, ಸಮಯದ ಹಿಂದೆ ಓಡುತ್ತೇನೆ' ಎಂದು ಅವರು ಹೇಳಿದ್ದಾರೆ.
ಹಿಮಾ ದಾಸ್ ಅವರ ಸಾಧನೆಯನ್ನು ದೇಶವೇ ಕೊಮಡಾಡುತ್ತಿದ್ದು, ನರೇಂದ್ರ ಮೋದಿ ಅವರು ಸಹ ಹಿಮಾ ಅವರ ಸಾಧನೆಗೆ ಅಭಿನಂಧನೆ ಸಲ್ಲಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚ್ಚನ್, ರೋಹಿತ್ ಶರ್ಮಾ, ಸುನಿಲ್ ಚೆಟ್ರಿ ಇನ್ನೂ ಹಲವು ಖ್ಯಾತನಾಮರು ಹಿಮಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.