Top

ಉತ್ತರ ಕನ್ನಡ ಜಿಲ್ಲೆಯಲ್ಲಿವೆ ಅಪಾಯಕಾರಿ ತೂಗುಸೇತುವೆಗಳು.!!

ಉತ್ತರ ಕನ್ನಡ ಜಿಲ್ಲೆಯಲ್ಲಿವೆ ಅಪಾಯಕಾರಿ ತೂಗುಸೇತುವೆಗಳು.!!
X

ಉತ್ತರಕನ್ನಡ : ನಗರಗಳು ಬೆಳೆಯಬೇಕು ಅಂದ್ರೆ ಹಳ್ಳಿಗಳು ಸಹಾ ಅಭಿವೃದ್ಧಿ ಆಗಲೇಬೇಕು. ನಗರ ಮತ್ತು ಹಳ್ಳಿಗಳ ಸಂಪರ್ಕ ಉತ್ತಮವಾಗಿದ್ದಲ್ಲಿ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎನ್ನುವುದನ್ನ ಎಲ್ಲರೂ ಒಪ್ಪುವ ಮಾತು. ಆದರೆ ಇಂದಿನ ಹೈಟೆಕ್ ಯುಗದಲ್ಲೂ ಅದೆಷ್ಟೋ ಹಳ್ಳಿಗಳು ಇಂದಿಗೂ ನಗರದಿಂದ ದೂರಾನೆ ಉಳಿದಿವೆ. ಉತ್ತರ ಕನ್ನಡ ಜಿಲ್ಲೆಯಂತ ಮಲೆನಾಡಿನ ಗುಡ್ಡಗಾಡು ಪ್ರದೇಶಗಳ ಹಳ್ಳಿಗಳಿಗೆ ರಸ್ತೆ ಇರಲಿ ಸರಿಯಾದ ಸಂಪರ್ಕ ಸೇತುವೆಗಳೂ ಇಲ್ಲ. ಬಿದಿರಿನ ತೂಗು ಸಂಕಗಳೇ ಅವರ ಸಂಪರ್ಕ ಸೇತುವೆ. ಜೀವ ಕೈಲಿ ಹಿಡಿದಿಟ್ಟು ನಡೆವ ಜನರ ಅಪಾಯಕಾರಿ ಸಂಚಾರ ಹೇಗಿದೆ ಮುಂದೆ ಓದಿ...

ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ ತಾಲೂಕುಗಳಲ್ಲಿ ಅನೇಕ ಹಳ್ಳಿಗಳಿಗೆ ಇಂದಿಗೂ ಸಂಪರ್ಕ ಸೇತುವೆಗಳೇ ಇಲ್ಲ. ಮಳೆಗಾಲದಲ್ಲಿ ನಗರ ಪ್ರದೇಶಕ್ಕೆ ಬರುವ ನಾಗರಿಕರ ಪರದಾಟ ಹೇಳತೀರದು. ಇದು ಶಿರಸಿ ತಾಲೂಕಿನ ಬಾಳೂರು ಗ್ರಾಮದಲ್ಲಿರುವ ಕಾಲುಸಂಕ. ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಈ ತೂಗು ಸೇತುವೆ ಕೆಂದಿಗೆತೋಟ ಹಾಗೂ ಅಂಚಳ್ಳಿ ಎನ್ನುವ ಊರನ್ನು ಸಂಪರ್ಕಿಸುತ್ತದೆ.

ಇಲ್ಲಿ 40ಕ್ಕೂ ಹೆಚ್ಚು ಕುಟುಂಬ ವಾಸವಿದ್ದು, 200ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. ಮಳೆಗಾಲ ಬಂತೆಂದರೆ ಇವರೆಲ್ಲ ನಗರಕ್ಕೆ ಬರಲು ಈ ತೂಗುಸೇತುವೆಯನ್ನ ಅವಲಂಬಿಸಲೇಬೇಕು. ಅಡಿಕೆ ದಬ್ಬೆಯಿಂದ ಈ ಸೇತುವೆಯನ್ನ ಗ್ರಾಮಸ್ತರೇ ನಿರ್ಮಿಸಿಕೊಳ್ಳುತ್ತಾರೆ. ಅವರ ಮೇಲೆ 80 ವರ್ಷದ ಹಿರಿಯಜ್ಜನಿಂದ ಹಿಡಿದು, ಅಂಗನವಾಡಿಗೆ ಹೋಗುವ ಚಿಕ್ಕ ಮಕ್ಕಳೂ ಪ್ರತಿನಿತ್ಯ ಓಡಾಟ ಮಾಡುತ್ತಾರೆ.

ಇದು ತೀರಾ ಅಪಾಯಕಾರಿ ನಡಿಗೆ. ಉಯ್ಯಾಲೆಯಂತೆ ತೂಗುವ ಸೇತುವೆ ಮೇಲೆ ತುಂಬಿ ಹರಿಯುವ ಹೊಳೆಯನ್ನು ಲೆಕ್ಕಿಸದೆ ಹೊಳೆದಾಟುವ ಅನಿವಾರ್ಯತೆ ಅವರದ್ದು. ಚೂರು ಕಾಲು ಜಾರಿದರೂ ಅನಾಹುತ ಗ್ಯಾರಂಟಿ . ಮನೆಯಿಂದ ಸಮೀಪದ ಶಾಲೆ, ಪಂಚಾಯಿತಿ,ಪಟ್ಟಣಕ್ಕೆ ಹೋಗಬೇಕೆಂದರೆ ಇಂತಹಾ ಮರದ ಸಂಕಗಳನ್ನು ದಾಟಿಯೇ ಹೋಗುವ ಸ್ಥತಿ ಇದೆ. ಹಳ್ಳಿಗಳ ಅಭಿವೃದ್ಧಿಯೇ ನಮ್ಮ ಗುರಿ ಎಂದು ಉದ್ದುದ್ದ ಭಾಷಣ ಮಾಡುವ ನಮ್ಮ ರಾಜಕಾರಣಿಗಳು ಇತ್ತ ಗಮನ ನೀಡಬೇಕಷ್ಟೆ.

ವರದಿ : ವಿನಾಯಕ್ ಹೆಗಡೆ, ಟಿವಿ5 ಶಿರಸಿ

Next Story

RELATED STORIES