ಉತ್ತರ ಕನ್ನಡದಲ್ಲೊಂದು ಶಾಕ್ ಹೊಡೆಯೋ ಶಾಲೆ : ಆಶ್ಚರ್ಯನಾ.? ಈ ಸುದ್ದಿ ಓದಿ..

ಉತ್ತರಕನ್ನಡ : ಈ ಶಾಲೆಯಲ್ಲಿ ಮಕ್ಕಳಿಗೆ ಎಲ್ಲಿ ಶಾಕ್ ಹೊಡೆಯುತ್ತೋ ಎನ್ನೋ ಭಯ. ಶಿಕ್ಷಕರು ಹೊಡೆಯುವುದಕ್ಕಿಂತ ಕರೆಂಟ್ ಶಾಕ್ ಹೊಡೆಯುದೇ ಹೆಚ್ಚು. ಕೊಠಡಿಯಲ್ಲಿ ಕುಳಿತು ಪಾಠ ಕೇಳೋದು ಅಂದ್ರೆ ಈ ಮಕ್ಕಳಿಗೆ ಎಲ್ಲಿಲ್ಲದ ಭಯ. ಕಳಪೆ ಕಾಮಗಾರಿಯಿಂದ ನಿರ್ಮಾಣಗೊಂಡ ಶಾಲೆಯಲ್ಲಿ ಮಕ್ಕಳು ಜೀವ ಭಯದಲ್ಲೆ ಪಾಠ ಕೇಳಬೇಕಾಗಿದೆ. ಅಷ್ಟಕ್ಕೂ ಈ ಶಾಲೆ ಯಾವುದು, ಅಂತದ್ದೇನು ಸಮಸ್ಯೆ ಅಂತೀರಾ.? ಮುಂದೆ ಓದಿ..
ಒಂದೆಡೆ ಮಳೆಯಲ್ಲಿ ಸೋರುತ್ತಿರುವ ಕೊಠಡಿ, ಇನ್ನೊಂದೆಡೆ ಮಳೆಯ ನೀರು ಸುರಿದು ಕೊಠಡಿಯ ಗೋಡೆಗಳಲ್ಲಿ ವಿದ್ಯುತ್ ಪ್ರವಹಿಸಿ ಭಯದಲ್ಲೇ ಪಾಠ ಕೇಳುತ್ತಿರೋ ಮಕ್ಕಳು. ಈ ದೃಶ್ಯ ಕಂಡುಬರೋದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಪುರಲಕ್ಕಿಬೇಣ ಎಂಬ ಊರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ.
ಕಳೆದ ನಾಲ್ಕು ವರ್ಷಗಳಿಂದ ಈ ಶಾಲೆಯ ಕೊಠಡಿಗಳು ಮಳೆಗಾಲದಲ್ಲಿ ಚಾವಣಿಯಿಂದ ಮಳೆ ನೀರು ಸೋರುತ್ತಿದೆ. ಗೋಡೆಗಳು ಇದರಿಂದ ಒದ್ದೆಯಾಗಿದೆ. ಇದರಿಂದಾಗಿ ವಿದ್ಯುತ್ ಸ್ವಿಚ್ ಬಾಕ್ಸ್ನಿಂದ ಗೋಡೆಗಳಲ್ಲಿ ವಿದ್ಯುತ್ ಹರಿಯುತಿದ್ದು ಕೊಠಡಿಯಲ್ಲಿ ಕೂರುವ ಮಕ್ಕಳು ಪ್ರತಿ ಬಾರಿ ಶಾಕ್ ಹೊಡೆಸಿಕೊಳ್ಳುತಿದ್ದು ಇದರಿಂದ ಹೆದರಿ ಕೆಲವು ಮಕ್ಕಳು ಶಾಲೆಗೆ ಚಕ್ಕರ್ ಹಾಕಿದ್ರೆ,ಮಕ್ಕಳನ್ನು ರಕ್ಷಿಸಲು ಶಿಕ್ಷಕರು ಕೊಠಡಿಗಳಿಗೆ ಬೀಗ ಹಾಕಿ ಹೊರಭಾಗದಲ್ಲಿ ಪಾಠ ಮಾಡುತಿದ್ದಾರೆ.
ಅಂಕೋಲದ ಪುರಲಕ್ಕಿಬೇಣದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ 43 ವಿದ್ಯಾರ್ಥಿಗಳಿದ್ದಾರೆ. ಶೇ.90 ರಷ್ಟು ವಿದ್ಯಾರ್ಥಿಗಳು ಪರಿಶಿಷ್ಟಜಾತಿಗೆ ಸೇರಿದವರು. ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಮನವಿ ಮಾಡಿದ್ರೂ ಈ ವರೆಗೂ ಶಿಕ್ಷಣ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಅಸಡ್ಡೆ ತೋರಿದೆ.
ಹೀಗಾಗಿ ಶಿಕ್ಷಕರು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದು, ಮಳೆ ಪ್ರಾರಂಭವಾದ್ರೆ ಶಾಲೆಯ ಆವರಣದಲ್ಲಿ ಪಾಠ ಮಾಡುತ್ತಾರೆ. ಇನ್ನು ಇಡೀ ಶಾಲೆಯ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿರುವ ಶಿಕ್ಷಕರು ಎಲ್ಲಾ ಕೊಠಡಿಗೆ ಬೀಗ ಜಡಿದು ಮಕ್ಕಳನ್ನು ರಕ್ಷಿಸುತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಈ ಶಾಲೆಯ ಶಿಕ್ಷಕರು, ಪೋಷಕರು ತಮ್ಮ ಮಕ್ಕಳ ಸುರಕ್ಷತೆಗಾಗಿ ಹಾಗೂ ಕೊಠಡಿಗಳನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದುಂಬಾಲು ಬೀಳುತಿದ್ದಾರೆ. ಆದರೇ ಇದರ ಬಗ್ಗೆ ಗಮನ ವಹಿಸಿದಬೇಕಾದ ಅಧಿಕಾರಿಗಳೇ ದಿವ್ಯ ಮೌನ ವಹಿಸಿದ್ದಾರೆ. ಇದರಿಂದಾಗಿ, ಈ ಶಾಲೆಯ ಮಕ್ಕಳು ದಿನಂಪ್ರತಿ ಭಯದಿಂದಲೇ ಶಾಲಾ ದಿನಗಳನ್ನು ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು, ವಿದ್ಯಾರ್ಥಿಗಳ ಕಾಳಜಿಗೆ ಕ್ರಮ ವಹಿಸುವರೇ ಎಂದು ಕಾದು ನೋಡಬೇಕಿದೆ.
ವರದಿ : ಪ್ರಶಾಂತ ಮಹಾಲೆ, ಟಿವಿ5 ಕಾರವಾರ