ಶೀಘ್ರದಲ್ಲೇ ಪ್ರಥಮ ದರ್ಜೆ ಕಾಲೇಜುಗಳ 13,616 ಹುದ್ದೆಗಳಿಗೆ ನೇಮಕಾತಿ : ಜಿಟಿಡಿ

ಬೆಂಗಳೂರು : ರಾಜ್ಯದಲ್ಲಿ ಬೋಧಕ ಹಾಗೂ ಬೋಧಕೇತರ 13 ಸಾವಿರದ 616 ಹುದ್ದೆಗಳಿಗೆ ನೇಮಕಾತಿಗೆ ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಈ ಕುರಿತು ಇಂದು ವಿಧಾನಸಭೆಯಲ್ಲಿ ಕೆ.ಪ್ರತಾಪಚಂದ್ರ ಶೆಟ್ಟಿ ಪ್ರಶ್ನೆಯನ್ನು ಎತ್ತಿದರು. ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧಕ ಹಾಗೂ ಬೋಧಕೇತರ ಹುದ್ದಿಗಳಿಗೆ ನೇಮಕಾತಿಯೇ ನಡೆದಿಲ್ಲ. ಹೀಗಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಕುಂಠಿತ ಕಾಣುವಂತಾಗಿದೆ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಕೆ.ಪ್ರತಾಪಚಂದ್ರ ಶೆಟ್ಟಿ ಎತ್ತಿದ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇಂತಹ ಕಾಲೇಜುಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ 13 ಸಾವಿರದ 616 ಹುದ್ದೆಗಳು ಖಾಲಿ ಇವೆ. ಇಂತಹ ಹುದ್ದೆಗಳಿಗೆ ನೇಮಕಾತಿ ಶೀಘ್ರವೇ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.
ಇನ್ನೂ ಮುಂದುವರೆದೆ ಮಾತನಾಡಿದ ಅವರು, ಗ್ರೇಡ್ 1 ಪ್ರಾಂಶುಪಾಲರ ಹುದ್ದೆ 372, ಗ್ರೇಡ್ 2 ಪ್ರಾಂಶುಪಾಲರ ಹುದ್ದೆ 38 ಸೇರಿದಂತೆ ಒಟ್ಟು 13 ಸಾವಿರದ 616 ಹುದ್ದೆಗಳ ನೇಮಕಾತಿಗಾಗಿ ಹಣಕಾಸು ಇಲಾಖೆಯ ಅನುಮತಿಗಾಗಿ ಕಳುಹಿಸಿ ಕೊಡಲಾಗಿದೆ. ಹಣಕಾಸು ಇಲಾಖೆಯಿಂದ ಒಪ್ಪಿಗೆ ಬಂದ ತಕ್ಷಣ ಶೀಘ್ರದಲ್ಲೇ ನೇಮಕಾತಿಗೆ ಆದೇಶ ಹೊರಡಿಸಲಾಗುತ್ತದೆ ಎಂದರು.