Top

ಮಂಡ್ಯ ಲೋಕಸಭೆಗೆ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಗಳ ಹುಟುಕಾಟ.?

ಮಂಡ್ಯ ಲೋಕಸಭೆಗೆ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಗಳ ಹುಟುಕಾಟ.?
X

ಮಂಡ್ಯ : ಲೋಕಸಭೆ ಚುನಾವಣೆಗೆ ಇನ್ನು ಹಲವು ದಿನಗಳು ಬಾಕಿ ಇರುವಾಗಲೇ ರಾಜ್ಯದಲ್ಲಿ ಬಿಜೆಪಿ ಅಧಿಕ ಸ್ಥಾನ ಗೆಲ್ಲಬೇಕೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯತಂತ್ರ ಆರಂಭಿಸಿದ್ದು, ಸಕ್ಕರೆ ನಾಡು ಮಂಡ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇರೋದ್ರಿಂದ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಹುಡುಕಾಟ ಆರಂಭಿಸಿದೆ.

ಹೌದು ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಇದೆ. ಅದ್ರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರವೂ ಖಾಲಿ ಇರೋದ್ರಿಂದ ಕೆಲ ದಿನಗಳಲ್ಲಿ ಉಪಚುನಾವಣೆ ನಡೆದ್ರೂ ಅಚ್ಚರಿ ಇಲ್ಲ. ಈಗಾಗಲೇ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಇದುವರೆಗೂ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು. ಇನ್ನು ಲೋಕಸಭಾ ಚುನಾವಣೆಯಲ್ಲೂ ಎರಡು ಪಕ್ಷಗಳು ಪ್ರಬಲ ಪೈಪೋಟಿ ನೀಡುತ್ತಾ ಬಂದಿದ್ದು, ಬಿಜೆಪಿ ಮತ ಸಂಖ್ಯೆ ಮಾತ್ರ ಹೇಳತೀರದ್ದಾಗಿತ್ತು. ಆದ್ರೆ ಈ ಬಾರಿ ಪರಿಸ್ಥಿತಿ ಬೇರೆ ಇದೆ. ಕಾಂಗ್ರೆಸ್ - ಜೆಡಿಎಸ್ ಮಂಡ್ಯದಲ್ಲಿ ಇಷ್ಟು ದಿನ ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು.

ಆದ್ರೆ ಈಗ ಮಾತ್ರ ಇಬ್ಬರು ಲೋಕಸಭಾ ಚುನಾವಣೆಗೆ ಒಂದೇ ಅಭ್ಯರ್ಥಿಯನ್ನ ಕಣಕ್ಕಿಳಿಸಲಿದ್ದು, ಹಾಗಾದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಹಾಗೂ ಮಾಜಿ ಎಂ.ಎಲ್.ಸಿ. ಅಶ್ವತ್ಥ್ ನಾರಾಯಣ್ ಹೆಸ್ರು ಪ್ರಬಲವಾಗಿ ಕೇಳಿ ಬರುತ್ತಿದ್ದು, ಅದ್ರಲ್ಲೂ ಆರ್.ಅಶೋಕ್ ಅವ್ರನ್ನೇ ಅಭ್ಯರ್ಥಿ ಮಾಡಬೇಕೆಂದು ಸ್ಥಳೀಯ ಬಿಜೆಪಿ ಮುಖಂಡರು ರಾಜ್ಯ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ರಾಜ್ಯ ನಾಯಕರು ಸಹ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಒಂದು ವೇಳೆ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದ್ರೆ ಕಾಂಗ್ರೆಸ್ ಅನಿವಾರ್ಯವಾಗಿ ಅಭ್ಯರ್ಥಿ ಹಾಕಲ್ಲ. ಆಗ ಕಾಂಗ್ರೆಸ್ ವಿರುದ್ಧ ದಶಕಗಳಿಂದ ಚುನಾವಣೆ ಮಾಡಿಕೊಂಡು ಬಂದಿರುವ ಸ್ಥಳೀಯ ನಾಯಕರು ಸುತರಾಂ ಜೆಡಿಎಸ್ ಒಪ್ಪಲ್ಲ. ಆಗ ಪ್ರಬಲ ಬಿಜೆಪಿ ಅಭ್ಯರ್ಥಿ ಅಖಾಡದಲ್ಲಿದ್ದರೆ ಗೆಲುವಿಗೆ ಪ್ರಯತ್ನಿಸಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಈ ನಿಟ್ಟಿನಲ್ಲಿ ಪ್ರಬಲ ಒಕ್ಕಲಿಗ ನಾಯಕ ಅಶೋಕ್ ಹೆಸ್ರು ಮುಂಚೂಣಿಯಲ್ಲಿದೆ.

ಜೊತೆಗೆ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕನಾಗಿ ಬೆಳೆಯುತ್ತಿರುವ ಯೋಗೀಶ್ವರ್ ಮತ್ತು ಮಂಡ್ಯದವರೇ ಆದ ಮಾಜಿ ಎಂಎಲ್ ಸಿ ಅಶ್ವತ್ ನಾರಾಯಣ್ ಹೆಸ್ರು ಸಹ ಕೇಳಿ ಬರುತ್ತಿದೆ. ಒಂದು ವೇಳೆ ಇವರು ಯಾರು ಒಪ್ಪಲಿಲ್ಲ ಎಂದ್ರೆ, ಮಂಡ್ಯದಲ್ಲಿ ಐದು ರೂ. ವೈದ್ಯ ಎಂದೇ ಖ್ಯಾತಿ ಪಡೆದಿರುವ ಡಾ.ಶಂಕರೇಗೌಡ ಮತ್ತು ಬಿಜೆಪಿ ಮುಖಂಡ ಹಾಗೂ ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಹೆಸ್ರನ್ನು ಅಂತಿಮಗೊಳಿಸಲು ರಾಜ್ಯ ನಾಯಕರು ಚಿಂತಿಸಿದ್ದಾರಂತೆ.

ಇದರ ಜೊತೆ ಒಂದು ಹೆಜ್ಜೆ ಮುಂದೆ ಹೋಗಿ ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯಗೆ ಗಾಳ ಹಾಕಲು ಸಹ ಬಿಜೆಪಿ ಚಿಂತನೆ ನಡೆಸಿದೆ. ಮೇಲುಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲ ಪಡೆದು ಸ್ವರಾಜ್ ಇಂಡಿಯಾ ದಿಂದ ಕಣಕ್ಕಿಳಿದಿದ್ದ ದರ್ಶನ್ ಹಾಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜುಗೆ ಪ್ರಬಲ ಪೈಪೋಟಿ ಕೊಟ್ಟು 74 ಸಾವಿರ ಮತ ಪಡೆದಿದ್ರು. ಈ ನಿಟ್ಟಿನಲ್ಲಿ ರೈತರ ಮತ ಸೆಳೆದು ಪುಟ್ಟಣ್ಣಯ್ಯ ಮೇಲಿನ ಅನುಕಂಪ ವರ್ಕೌಟ್ ಮಾಡಲು ದರ್ಶನ್ ರನ್ನು ಬಿಜೆಪಿ ಗೆ ಸೆಳೆಯಲು ಚಿಂತನೆ ನಡೆಸಿದೆ. ಇದಕ್ಕೆ ದರ್ಶನ್ ಪ್ರತಿನಿಧಿಸುವ ರೈತ ಸಂಘ ಮಾತ್ರ ಒಪ್ಪಿಗೆ ಸೂಚಿಸಿಲ್ಲ.

ಒಟ್ಟಾರೆ ಮಂಡ್ಯದಲ್ಲಿ ಪ್ರಬಲ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಿಲ್ಲೆಯವ್ರೇ ಆದ ಮಾಜಿ ಸಿಎಂ ಯಡಿಯೂರಪ್ಪ ತಲಾಷ್ ನಡೆಸ್ತಿದ್ದು, ಲೋಕಸಭೆಗೆ ಮಂಡ್ಯದಿಂದ ಯಾರು ಬಿಜೆಪಿ ಅಭ್ಯರ್ಥಿ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ಎಂ.ಕೆ.ಮೋಹನ್ ರಾಜ್, ಟಿವಿ5 ಮಂಡ್ಯ

Next Story

RELATED STORIES