Top

ವೀಕೆಂಡ್ ಮಸ್ತಿ ಮಾಡ್ಬೇಕಾ? ಹಾಗಾದ್ರೆ ಬನ್ನಿ ಅಂಬೋಲಿ ಫಾಲ್ಸ್‌ಗೆ

ವೀಕೆಂಡ್ ಮಸ್ತಿ ಮಾಡ್ಬೇಕಾ? ಹಾಗಾದ್ರೆ ಬನ್ನಿ ಅಂಬೋಲಿ ಫಾಲ್ಸ್‌ಗೆ
X

ಜಿಟಿ ಜಿಟಿ ಮಳೆ. ಒದ್ದೆ ಮೈ. ಚಿಕ್ಕದೊಂದು ಭಜ್ಜಿ ಶಾಪ್​. ಹೆಚ್ಚು ಆಯ್ಕೆಗಳಿಲ್ಲ. ಅಲ್ಲಿದ್ದ ಬಿಸಿಬಿಸಿ ಭಜ್ಜಿಗೆ ಸಖತ್​ ಡಿಮ್ಯಾಂಡ್​. ಚೆನ್ನಾಗಿಲ್ಲ ಬೇಡ ಅಂತ ಬಿಟ್ರೆ ಹೊಟ್ಟೆಗೆ ತಣ್ಣೀರು ಬಟ್ಟೆಯಷ್ಟೇ ಗತಿ. ಇದೆಲ್ಲಾ ಫೀಲ್​ ಆಗೋದು ಬೆಳಗಾವಿ ಬಳಿ ಇರುವ ಅಂಬೋಲಿ ಜಲಪಾತದ ಸಮೀಪ. ಮಳೆಗಾಲದಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ತಾಕತ್ತು ಈ ಜಲಪಾತಕ್ಕಿದೆ. ಅಪಾಯ ಕೊಂಚ ಕಡಿಮೆ. ನೀರಿನ ರಭಸವೂ ಕಡಿಮೆ. ಆದರೆ ಮನಸ್ಸಿಗೆ ಖುಷಿಯಾಗುವಷ್ಟು ಎಂಜಾಯ್​ಮೆಂಟ್​​ ಈ ಫಾಲ್ಸ್​ನಲ್ಲಿದೆ.

https://www.youtube.com/watch?v=qcX3Kr74waQ

ಎಲ್ಲಿದೆ ಅಂಬೋಲಿ ಫಾಲ್ಸ್​..?

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿದೆ ಅಂಬೋಲಿ ಜಲಪಾತ. ಅಂಬೋಲಿ ಜಲಪಾತ ಮಹಾರಾಷ್ಟ್ರ ರಾಜ್ಯದ ಸಿಂಧುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಅಂಬೋಲಿ ಗ್ರಾಮದಲ್ಲಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಮೋಹಕ ಚೆಲುವೆ ಲಕ್ಷಾಂತರ ಪ್ರವಾಸಿಗರ ಪಾಲಿಗೆ ಹಾಟ್​ ಸ್ಪಾಟ್​.

ತಲುಪುದು ಹೇಗೆ..?

ಅಂಬೋಲಿ ಫಾಲ್ಸ್​​ ಎಂಜಾಯ್​ ಮಾಡಬೇಕು ಅಂದ್ರೆ ರಸ್ತೆ ಮೂಲಕವೇ ಸಾಗಬೇಕು. ಬೆಳಗಾವಿಯಿಂದ ಸರಿ ಸುಮಾರು 72 ಕಿಲೋಮೀಟರ್​ ಇದೆ. ಅಂದಾಜು 2 ಗಂಟೆಗಳ ಪ್ರಯಾಣ. ಬೆಂಗಳೂರಿನಿಂದ 576 ಕಿಲೋಮೀಟರ್​ ದೂರ. ಸುಮಾರು 10 ಗಂಟೆಗಳ ಜರ್ನಿ. ಬೆಂಗಳೂರಿನಿಂದ ಬೆಳಗಾವಿಗೆ ಸಾಕಷ್ಟು ವಾಹನಗಳ ವ್ಯವಸ್ಥೆ ಇದೆ. ಬೆಳಗಾವಿಯಿಂದಲೂ ಅಂಬೋಲಿ ತಲುಪಲು ಸುಲಭಕ್ಕೆ ಸಿಗುವ ವ್ಯವಸ್ಥೆ ಇದೆ. ಪ್ರವಾಸಿಗರು ಬೆಳಗಾವಿ ರಸ್ತೆ ಮಾರ್ಗ, ರೈಲು ಮಾರ್ಗ ಮತ್ತು ವಿಮಾನದ ಮೂಲಕ ಆಗಮಿಸಿ, ಬೆಳಗಾವಿಯಿಂದ 65 ಕೀ.ಮೀಟರ್ ರಸ್ತೆ ಮಾರ್ಗವಾಗಿ ಅಂಬೋಲಿ ತಲುಪಬಹುದು. ಇನ್ನು ಬೇರೆ ರಾಜ್ಯದ ಪ್ರವಾಸಿಗರು ಗೋವಾ ಮತ್ತು ಸಾವಂತವಾಡಿ ಮೂಲಕ ಬಸ್, ವಿಮಾನ ಮತ್ತು ರೈಲಿನಲ್ಲಿ ಅಂಬೋಲಿಯನ್ನು ತಲುಪಬಹುದು. ಗೋವಾ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಅಲ್ಲಿಂದ ಅಂಬೋಲಿ ಸುಮಾರು 70 ಕಿಮೀ.ದೂರದಲ್ಲಿದೆ. ಸಾವಂತವಾಡಿ ಹತ್ತಿರದ ರೈಲು ನಿಲ್ದಾಣ. ಅಲ್ಲಿಂದ ಟ್ಯಾಕ್ಸಿ, ಕ್ಯಾಬ್ ಮೂಲಕ ಅಂಬೋಲಿ ತಲುಪಬಹುದು.

ವಿಶೇಷತೆ ಏನು..?

ಅಂಬೋಲಿ ಜಲಪಾತ ವಿಶೇಷವೆಂದ್ರೆ ಅದು ರಸ್ತೆಗೆ ಅಂಟಿಕೊಂಡಂತಿದೆ. ಸುಮಾರು 40 ಅಡಿ ಎತ್ತರ ಬೆಟ್ಟದಿಂದ ಜಲದಾರೆ ಭೂಮಿಯನ್ನ ಸ್ಪರ್ಶಿಸುವ ದೃಶ್ಯವೇ ಇಲ್ಲಿ ಮನಮೋಹಕ. ಎತ್ತರದ ಬೆಟ್ಟದಿಂದ ಶುದ್ಧ ಹಾಲು ಬೀಳುತಿರುವಂತೆ ಭಾಸವಾಗುತ್ತದೆ. ಜಲಪಾತ ವೀಕ್ಷಣೆಗೆಂದು ಮಾಡಿರುವ ಮೆಟ್ಟಿಲುಗಳ ಮೇಲೆ ನೀರು ಹರಿಯುವುದು, ಪ್ರವಾಸಿಗರಿಗೆ ಸ್ವರ್ಗಕ್ಕೆ ಹತ್ತಿರವಾದ ಅನುಭವವನ್ನು ಕೊಡುತ್ತದೆ.

ಯಾವಾಗ ಹೋಗ್ಬೇಕು..?

ಅಂಬೋಲಿ ಜಲಪಾತ ಕೇವಲ ಮಳೆಗಾಲದಲ್ಲಿ ಮಾತ್ರ ನೋಡಲು ಆಕರ್ಷಣಿಯವಾಗಿರುತ್ತದೆ. ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆಗೂ ಅಂಬೋಲಿ ಜಲಪಾತದ ವೈಯಾರ ಎಂತಹವರನ್ನ ಕೂಡ ಮಂತ್ರ ಮುಗ್ಧಗೊಳಿಸುತ್ತದೆ. ಯಾಕೆಂದ್ರೆ ಒಂದೆಡೆ ಎಡೆಬಿಡದೇ ಸುರಿಯು ಮಳೆ. ಮತ್ತೊಂದೆಡೆ ಎಲ್ಲಿ ನೋಡಿದ್ರೂ ಹಚ್ಚ ಹಸಿರು ಸೌಂದರ್ಯ. ಆಗಾಗ ಮಳೆಗೆ ಬಿಡುವು ಕೊಟ್ಟಾಗ ಮಂಜು ಕವಿಯುವುದು. ಹೀಗೆ ಈ ಮೂರು ಪ್ರಕ್ರಿಯೆಗಳು ಪ್ರತಿ ಗಂಟೆಗೊಮ್ಮೆ ನಡೆಯುವುದೇ ಇಲ್ಲಿನ ವಿಶೇಷ.

ವೀಕೆಂಡ್​​ಗೆ ಮಸ್ತ್​ ಪ್ಲೇಸ್​​..!

ಭೂ ಲೋಕದ ಸುಂದರಿಯನ್ನು ನೋಡಲು ವೀಕೆಂಡ್​​ ಬೆಸ್ಟ್​ ಟೈಂ. ಶನಿವಾರ ಮತ್ತು ಭಾನುವಾರದ ರಜಾವನ್ನು ಕಳೆಯಲು ಇದು ಹೇಳಿ ಮಾಡಿಸಿದ ಪ್ರವಾಸಿ ತಾಣ. ಅಂಬೋಲಿಯ ಮಾದಕ ಸೌಂದರ್ಯವನ್ನ ಕಣ್ಣತುಂಬಿಕೊಳ್ಳಲು ಕರ್ನಾಟಕ, ಮಹಾರಾಷ್ಟ್ರ, ಗೋವಾ ಹೀಗೆ ದೇಶದ ನಾನಾಕಡೆಯಿಂದ ಪ್ರವಾಸಿಗರು ಬರ್ತಾರೆ.

Next Story

RELATED STORIES