ಐಸಿಸಿ ರ್ಯಾಂಕಿಂಗ್ನಲ್ಲಿ ಕೆ.ಎಲ್. ರಾಹುಲ್ ಬಡ್ತಿ, ಕೊಹ್ಲಿಗೆ ಹಿಂಬಡ್ತಿ

ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯನ್ನು 2-1ರಿಂದ ವಶಪಡಿಸಿಕೊಂಡು ಬೀಗುತ್ತಿರುವ ಭಾರತ ತಂಡದ ಆಟಗಾರರು ಐಸಿಸಿ ರ್ಯಾಂಕಿಂಗ್ನಲ್ಲೂ ಏರಿಕೆ ಕಂಡಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ 4 ಸ್ಥಾನ ಕುಸಿತ ಅನುಭವಿಸಿದ್ದಾರೆ.
ಸೋಮವಾರ ಬಿಡುಗಡೆಯಾದ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಕರ್ನಾಟಕದ ಯುವ ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ 9 ಸ್ಥಾನ ಬಡ್ತಿ ಪಡೆದು 3ನೇ ಸ್ಥಾನ ಪಡೆದಿದ್ದಾರೆ. ರಾಹುಲ್ 70 ಹಾಗೂ 101 ರನ್ ಕಲೆ ಹಾಕಿದ್ದರು.
ನಾಯಕ ಕೊಹ್ಲಿ 4 ಸ್ಥಾನ ಕುಸಿದು 12ನೇ ಸ್ಥಾನ ಗಳಿಸಿದ್ದಾರೆ. ಇನ್ನು ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರೋಹಿತ್ ಶರ್ಮ 2 ಸ್ಥಾನ ಜಿಗಿದು 12ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಏರಾನ್ ಫಿಂಚ್ ಅಗ್ರಸ್ಥಾನ ಉಳಿಸಿಕೊಂಡಿದ್ದೂ ಅಲ್ಲದೇ 900 ಅಂಕ ದಾಟಿದ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಜಿಂಬಾಬ್ವೆ ವಿರುದ್ಧ 172 ರನ್ ಸಿಡಿಸಿದ ದಾಖಲೆಯನ್ನು ಫಿಂಚ್ ಬರೆದಿದ್ದರು.
ಬೌಲಿಂಗ್ ವಿಭಾಗದಲ್ಲಿ ಆಫ್ಘಾನಿಸ್ತಾನದ ರಶೀದ್ ಖಾನ್ ಅಗ್ರಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಭಾರತೀಯರು ಅಂತಹ ಯಾವುದೇ ಮಹತ್ವದ ಸ್ಥಾನ ಬದಲಾವಣೆ ಆಗಿಲ್ಲ.
ಪಾಕಿಸ್ತಾನ ತಂಡ ಅಗ್ರ ತಂಡವಾಗಿ ಸ್ಥಾನ ಉಳಿಸಿಕೊಂಡಿದೆ. ಆಸ್ಟ್ರೇಲಿಯಾವನ್ನು ಹಿಂದಿಕ್ಕಿದ ಭಾರತ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.