Top

ಹೇ.. ಬಾಯಿ ಮುಚ್ಕೊಂಡು ಕೆಲಸಕ್ಕೆ ನಡೀರಿ : ಪೌರಕಾರ್ಮಿಕರಿಗೆ ನಗರಸಭೆ ಕಮೀಷನರ್ ಅವಾಜ್‌.!!

ಹೇ.. ಬಾಯಿ ಮುಚ್ಕೊಂಡು ಕೆಲಸಕ್ಕೆ ನಡೀರಿ : ಪೌರಕಾರ್ಮಿಕರಿಗೆ ನಗರಸಭೆ ಕಮೀಷನರ್ ಅವಾಜ್‌.!!
X

ಚೆನ್ನಪಟ್ಟಣ : ಬೊಂಬೆನಗರಿ ಈಗ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಸ್ವಕ್ಷೇತ್ರ. ಆದರೆ ಇಲ್ಲೇ ನಗರಸಭೆಯ ಪೌರಕಾರ್ಮಿಕರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲವೆಂದು ಸುಮಾರು ೫೫ ಜನ ಪೌರಕಾರ್ಮಿಕರು ಇಂದು ಬೆಳಗ್ಗೆಯಿಂದ ನಗರಸಭೆಯ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು. ಇನ್ನು ವಿಷಯ ತಿಳಿದ ಪೌರಾಯುಕ್ತ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವುದನ್ನ ಬಿಟ್ಟು ಹೇ..ಬಾಯಿ ಮುಚ್ಕೊಂಡು ಕೆಲಸಕ್ಕೆ ನಡೀರಿ ಎಂದು ಅವಾಜ್ ಹಾಕಿದ್ದಾರೆ. ಇನ್ನು ಇದನ್ನ ಚಿತ್ರೀಕರಿಸಲು ಮುಂದಾದ ಮಾಧ್ಯಮದವರಿಗೂ ಹೇ ಯಾರಪ್ಪ ನೀವು ಅಂತಾರೆ ಮಾನ್ಯ ಕಮೀಷನರ್ ಸಾಹೇಬರು.

ಹೌದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ನಗರಸಭೆ ಆಡಳಿತದ ವೈಖರಿ ಇದು. ಸುಮಾರು ೯೫ ಜನ ಪೌರಕಾರ್ಮಿಕರು ಕಾರ್ಯನಿರ್ವಹಿಸುವ ಚನ್ನಪಟ್ಟಣ ನಗರಸಭೆಯಲ್ಲಿ 40 ಜನರು ಸರ್ಕಾರಿ ಕಾರ್ಮಿಕರು, ಇನ್ನುಳಿದ 55 ಜನರು ಗುತ್ತಿಗೆ ಕಾರ್ಮಿಕರು. ಆದರೆ ಸರ್ಕಾರಿ ಕಾರ್ಮಿಕರಿಗೆ ಬೇರೆ ನ್ಯಾಯ, ಗುತ್ತಿಗೆ ಕಾರ್ಮಿಕರಿಗೆ ಬೇರೆ ನ್ಯಾಯ ಈ ನಗರಸಭೆಯಲ್ಲಿ. ಗುತ್ತಿಗೆ ಕಾರ್ಮಿಕರು ಸುಮಾರು ೫೫ ಜನರಿದ್ದು ಇವರಿಗೆಲ್ಲ ಸುಮಾರು ಮೂರು ತಿಂಗಳಿನಿಂದ ಸಂಬಳವೇ ಇಲ್ಲ.

14,230 ರೂಪಾಯಿ ಸಂಬಲ ನಿಗಧಿಯಾಗಿದ್ದು, ಪಿ.ಎಫ್ ಕಟ್ ಆಗಿ ಕೈಗೆ ಸುಮಾರು 12 ಸಾವಿರ ಚಿಲ್ಲರೆ ಸಿಗುತ್ತದೆ. ಆದರೆ ಆ ಸಂಬಳವೂ ಕೂಡ ಇವರಿಗೆ ಸಿಗುತ್ತಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಸಾಲ ಮಾಡಿಕೊಂಡು ಕುಟುಂಬವನ್ನ ಸಾಕುತ್ತಿದ್ದೇವೆ. ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದರು ಕೂಡ ನಮಗೆ ಕೊಡಬೇಕಾದ ಸಂಬಳವನ್ನ ಕೊಡಲು ನಗರಸಭೆಯ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆಂದು ನೊಂದ ಪೌರಕಾರ್ಮಿಕರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಚನ್ನಪಟ್ಟಣ ನಗರಸಭೆಯಲ್ಲಿ ಪೌರಕಾರ್ಮಿಕರನ್ನ ನಾಯಿಗಳ ರೀತಿ ನಡೆಸಿಕೊಳ್ತಾರೆ, ನಮಗೆ ಗೌರವವೇ ಕೊಡಲ್ಲವೆಂದು ಕಣ್ಣೀರಾಕಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ನಗರಸಭಾ ಪೌರಾಯುಕ್ತ ಆನಂದ್ ಸಿ ಕಲ್ಲೋಳಿಕರ್ ಏಕಾಏಕಿ ಬಂದು ಪೌರಕಾರ್ಮಿಕರ ವಿರುದ್ಧ ಅವಾಜ್ ಹಾಕಿದರು. ಹೇ ಬಾಯಿ ಮುಚ್ಕೊಂಡ್ ಕೆಲಸಕ್ಕೆ ನಡೀರಿ ಇಲ್ಲಂದ್ರೆ ನೋಡಿ ಆಮೇಲೆ ಎಂದು ಗದರಿದರು. ಇನ್ನು ಇವರ ದರ್ಪ, ದೌರ್ಜನ್ಯದ ನಾಟಕವನ್ನ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರ ಮೇಲೂ ಅವಾಜ್ ಹಾಕಿದ ಈ ಅಧಿಕಾರಿ ಹೇ ಯಾರಪ್ಪ ನೀವು ಅಂತಾ ಬೆದರಿಸಲು ಮುಂದಾದರು. ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಕಮೀಷನರ್, ನಾವು ಯಾರಿಗೂ ಸಂಬಳವನ್ನ ಕಡಿತಗೊಳಿಸಿಲ್ಲ, ಬಯೋಮೆಟ್ರಿಕ್ ವ್ಯವಸ್ಥೆ ಇದೇ. ಅದರ ಪ್ರಕಾರ ಸರಿಯಾಗಿ ಕೆಲಸಕ್ಕೆ ಬಾರದ ಪೌರಕಾರ್ಮಿಕರ ಸಂಬಳವನ್ನ ಕಡಿತಗೊಳಿಸಿದ್ದೇವೆಂದು ಬೇಜಾಬ್ದಾರಿ ಉತ್ತರ ಕೊಡ್ತಾರೆ. ಹಾಗೇ ನಾವು ಯಾರನ್ನು ಕೀಳಾಗಿ ನೋಡುವುದಿಲ್ಲ ಎಂದು ಹೇಳುತ್ತಾರೆ.

ಒಟ್ಟಾರೆ ಸರ್ಕಾರಿ ಅಧಿಕಾರಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಇರೋದು ಕಾಮನ್. ಆದರೆ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ದುಡಿಯುವ ಗುತ್ತಿಗೆ ಪೌರಕಾರ್ಮಿಕರಿಗೂ ಬಯೋಮೆಟ್ರಿಕ್ ಸಿಸ್ಟಮ್ ನೆಪದಲ್ಲಿ ಅವರ ತಿಂಗಳ ಸಂಬಳಕ್ಕೆ ಕತ್ತರಿಹಾಕಿರುವುದು ಎಷ್ಟು ಸರಿ ಎನ್ನುವುದೇ ಒಂದು ಯಕ್ಷ ಪ್ರಶ್ನೆ.

ವರದಿ : ನಟರಾಜ್ ಬೆಳಕವಾಡಿ, ಟಿವಿ5 ರಾಮನಗರ

Next Story

RELATED STORIES