Top

ದೇವೇಗೌಡರ ಕುಟುಂಬದ ವಿರುದ್ಧ ಎ.ಮಂಜು ಗರಂ

ದೇವೇಗೌಡರ ಕುಟುಂಬದ ವಿರುದ್ಧ ಎ.ಮಂಜು ಗರಂ
X

ಬೆಂಗಳೂರು : ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ, ರಾಜಕೀಯ ಚದುರಂಗದಾಟ ಗರಿಗೆದರಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಉಭಯ ಪಕ್ಷಗಳ ನಾಯಕರುಗಳ ತಯಾರಿ ಬಿರುಸುಗೊಂಡಿದೆ. ಬಿಜೆಪಿಯನ್ನು ಎದುರಿಸುವ ಸಲುವಾಗಿ ತಂತ್ರ ಪ್ರತಿತಂತ್ರಗಾರಿಕೆಯಲ್ಲಿ ರಾಜಕೀಯ ಮುಖಂಡರು ನಿರತರಾಗಿದ್ದಾರೆ. ಈ ನಡುವೆ ಇಂದು ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣಾ ತಯಾರಿ ಚುರುಕು ಗೊಂಡಿದೆ. ಸೋತ ಅಭ್ಯರ್ಥಿಗಳ ಸಭೆ ಕರೆದು ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್‌ ಅಭಿಪ್ರಾಯ ಸಂಗ್ರಹಿಸಿದರು.

ನಗರದ ಶಾಸಕರ ಭವದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಕಾಂಗ್ರೆಸ್‌ ಸೋತ ಶಾಸಕರ ಸಭೆಯಲ್ಲಿ, ಲೋಕಸಭೆ ಚುನಾವಣೆಗೆ ಕೈ ನಾಯಕರು ತಯಾರಿ ನಡೆಸಿದರು. ಅಲ್ಲದೇ ಅವಧಿಗೂ ಮುನ್ನವೇ ಚುನಾವಣೆ ಸಾಧ್ಯತೆ ಹಿನ್ನೆಲೆ ಈ ಸಭೆಯಲ್ಲಿ ಚುನಾವಣಾ ಪೂರ್ವ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೂಡ ಭಾಗವಹಿಸಿದ್ದರು. ಆನಂತ್ರ ವಿಧಾನಸಭೆ ಕಲಾಪಕ್ಕೆ ತೆರಳಿದರು.

ಇದೇ ವೇಳೆ ಪರಾಭವಗೊಂಡವರನ್ನ ಪಕ್ಷದಲ್ಲಿ ಬಳಸಿಕೊಳ್ಳಲು ಚಿಂತನೆ ಕೂಡ ನಡೆಸಲಾಯಿತು. ಅಲ್ಲದೇ ಚುನಾವಣೆಗೆ ಎಲ್ಲರನ್ನ ಒಟ್ಟುಗೂಡಿಸಲು ಸಿದ್ದು ಪ್ಲಾನ್‌ ಮಾಡಿದರು. ಜೊತೆಗೆ ಜೆಡಿಎಸ್ ಮೈತ್ರಿ ಕುರಿತಂತೆ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಎಲ್ಲರ ಅಭಿಪ್ರಾಯ ಪಡೆದ ನಾಯಕರು, ಸಭೆಯಲ್ಲಿ ನಿಗಮ ಮಂಡಳಿ ವಿಚಾರದ ಬಗ್ಗೆ ಪ್ರಸ್ತಾಪ ನಡೆಸಿದರು. ಸೋತವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವಂತೆ ಕೆಲ ಸೋತ ನಾಯಕರು ಮನವಿ ಮಾಡಿದರು ಎನ್ನಲಾಗಿದೆ.

ಈ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರ ಹಿರಿಯ ಸದಸ್ಯ ಬಿ.ಆರ್.ಯಾವಗಲ್ ನಿಗಮ ಮಂಡಳಿಯ ಸ್ಥಾನಗಳನ್ನು ನಮಗೆ ನೀಡಿದರೆ ಪಕ್ಷ ಕಟ್ಟಲು ಸಹಾಯವಾಗಲಿದೆ. ಪ್ರಮುಖ ನಿಗಮ ಮಂಡಳಿಗೆ ನಮ್ಮನ್ನ ಪರಿಗಣಿಸಿಬೇಕು ಎಂದು ತಮ್ಮ ಬೇಡಿಕೆಯನ್ನು ಕೈ ನಾಯಕರ ಮುಂದಿಟ್ಟ ಮುಂದಿಟ್ಟರು.

ಇನ್ನೂ ಇದೇ ವೇಳೆ ಮಾತನಾಡಿದ ಎ.ಮಂಜು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಕುಟುಂಬದ ವಿರುದ್ಧ ಗರಂ ಆಗಿದ್ದರು. ಚರ್ಚೆಯ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಎ.ಮಂಜು, ದೇವೇಗೌಡರು, ತಾವು ಬೆಳೆಯಲು ನಮ್ಮನ್ನ ಬಳಸಿಕೊಳ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರು. ಫಲಿತಾಂಶ ಬಂದ ತಕ್ಷಣ ಅವರಿಗೆ ಉಲ್ಟಾ ಹೊಡೆದ್ರು. 37 ಶಾಸಕ ಸ್ಥಾನ ಬಂದ ಪಕ್ಷಕ್ಕೆ ಸಿಎಂ ಸ್ಥಾನ ಬಿಟ್ಟು ಕೊಟ್ರಿ. 78 ಸ್ಥಾನ ಪಡೆದ ಕಾಂಗ್ರೆಸ್‌ ಪಕ್ಷ ಅವರ ಮುಂದೆ ಕೈಕಟ್ಟಿ ಕೂರುವುದು ಸರಿಯಲ್ಲ. ಅವರದ್ದು ಬರೀ ಕುಟುಂಬ ರಾಜಕಾರಣವಾಗಿದೆ. ಮುಂದೆ ಲೋಕಸಭಾ ಚುನಾವಣೆಯಲ್ಲಿ ಹಾಸನ, ತುಮಕೂರು, ಮಂಡ್ಯ ದಿಂದ ಅವರೇ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತಿದೆ. ಇಂತಹ ಪಕ್ಷದ ಜೊತೆ ಕೆಲಸ ಮಾಡಿದ್ರೆ ನಾವು ಪಕ್ಷ ಉಳಿಸೋಕೆ ಸಾಧ್ಯವೇ ಎಂದು ಪ್ರಶ್ನೆ ಎತ್ತಿದರು.

ಅಲ್ಲದೇ ಮುಂದುವರೆದು ಮಾತನಾಡಿದ ಎ.ಮಂಜು, ನ್ಯಾಯವಾಗಿ ಓಟು ಕೊಡಿ ಅಂತ ಕುಮಾರಸ್ವಾಮಿ ಕೇಳಲಿಲ್ಲ. ನಾನು ಈ ಬಾರಿ ಸಿಎಂ ಆಗದಿದ್ರೆ ಸತ್ತು ಹೋಗುತ್ತೇನೆಂದು ಸುಳ್ಳು ಹೇಳಿ ಮತ ಗಿಟ್ಟಿಸಿಕೊಂಡರು. ಕೆಎಂಎಫ್ ನೇಮಕದಲ್ಲಿ ನಮನ್ನ ಪರಿಗಣಿಸುತ್ತಿಲ್ಲ. ಈಗಾದ್ರೆ ಪಕ್ಷ ಉಳಿಸುವುದು ಕಷ್ಟ ಎಂದರು. ಜೊತೆಗೆ, ನಮಗೆ ಜಿಲ್ಲೆಗಳಲ್ಲಿ ಅನ್ಯಾಯ ವಾದ್ರೆ ಸಹಿಸಲ್ಲ. ನಮ್ಮ ಉಳಿವಿಗಾಗಿ ಪಕ್ಷದ ಉಳಿವಿಗೆ ನಮ್ಮ ಹೋರಾಟ ನಡೆಯಲಿದೆ. ಸಿದ್ದರಾಮಯ್ಯ ನಮ್ಮ ಬೆಂಬಲಕ್ಕೆ ಈ ವಿಚಾರದಲ್ಲಿ ನಿಲ್ಲಬೇಕು ಎಂದು ಒತ್ತಾಯ ಮಾಡಿದರು.

ಇನ್ನೂ ಇದೇ ವೇಳೆ ಉತ್ತರ ಕರ್ನಾಟಕ ಶಾಸಕರ ಮಾತನಾಡಿ, ಕಾಂಗ್ರೆಸ್‌ ಉತ್ತರಕರ್ನಾಟದಲ್ಲಿ ಸೋಲಲು ಲಿಂಗಾಯತರು ಕಾರಣ. ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದೇ ಕಾಂಗ್ರೆಸ್‌ ಪಕ್ಷ ಸೋಲಲು ಕಾರಣವಾಯಿತು. ಕಳೆದಬಾರಿ ಮತ ಹಾಕಿದ್ದ ಎಲ್ಲಾ ಲಿಂಗಾಯತರು ಈ ಬಾರಿ ಬಿಜೆಪಿಗೆ ಹಾಕಿದ್ದಾರೆ. ಪ್ರತ್ಯೇಕ ಧರ್ಮ ಮಾಡಲು ಹೋಗಬಾರದಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರುವುದೇ ಸೋಲಿಗೆ ಕಾರಣಗಳಲ್ಲಿ ಒಂದು ಎಂದು ಪಕ್ಷದಲ್ಲಿನ ಅಸಮಾಧಾನವನ್ನು ಹೊರಹಾಕಿದರು. ನಾವು ಉತ್ತಮ ಆಡಳಿತ ನೀಡಿದ್ದೇವೆ. ಆದರೂ ಜನ ಯಾಕೆ ಮತ ಹಾಕಲಿಲ್ಲ? ಮತೀಯ ಸಂಘರ್ಷ ಮಾಡುವ ಬಿಜೆಪಿಗೆ ಯಾಕೆ ಮತ ಹಾಕಿದ್ದಾರೆ ಎಂದು ಪ್ರಶ್ನಿಸಿದರು.

Next Story

RELATED STORIES