ಕುಮಾರಸ್ವಾಮಿಯವರಷ್ಟು ಉದಾರತೆ ನನ್ನಲ್ಲಿಲ್ಲ, ಯಾಕಂದ್ರೆ ನಾನು ಸಿಎಂ ಅಲ್ಲ ಸಚಿವನಷ್ಟೇ

ಮೈಸೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಅವರು ನಡೆಸಿದ ಗ್ರಾಮ ವಾಸ್ತವ್ಯ ಇಂದಿಗೂ ಕೂಡ ಅವರ ಜನಪ್ರಿಯ ಕಾರ್ಯಕ್ರಮದಲ್ಲಿ ಒಂದಾಗಿದೆ. ಈ ಮೂಲಕ ಹಿಂದುಳಿದ ಗ್ರಾಮದ ಸಮಸ್ಯೆ ಆಲಿಸಿ ಅವರ ಸಮಸ್ಯೆ ಪರಿಹಾರ ಮಾಡುವ ಉದ್ದೇಶವಾಗಿತ್ತು. ಆದ್ರೆ ಈಗ ಸಚಿವ ಸಾ.ರಾ.ಮಹೇಶರವರ ಸರದಿ. ಯಾಕಂದ್ರೆ, ಇವ್ರು ಮಾತ್ರ ಗ್ರಾಮ ವಾಸ್ತವ್ಯದ ಬದಲು ಹೈಟೆಕ್ ಗ್ರಾಮ ವಾಸ್ತವ್ಯ ನಡೆಸಿದ್ದಾರೆ. ನಿನ್ನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಸಚಿವ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯ ನಡೆಸಿದ್ರು.
ಆದ್ರೆ ಗ್ರಾಮದಲ್ಲಿ ಮಾತ್ರ ಎಲ್ಲಾ ಮೂಲಭೂತ ಸೌಕರ್ಯಗಳಿದ್ದು, ಗ್ರಾಮದಲ್ಲಿ ಸುಸಜ್ಜಿತ ರಸ್ತೆ, ಎಟಿಎಂ ವ್ಯವಸ್ಥೆ, ಪಶು ಆರೋಗ್ಯ ಕೇಂದ್ರ, ಸಹಕಾರ ಪತ್ತಿನ ಸಂಘ, ಹಾಗೂ ಶಾಲಾ ಕಾಲೇಜಿನ ಸೌಕರ್ಯಗಳಿದೆ. ಈಗ ಈ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಪ್ರಯೋಜನವೇನು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಈ ಗ್ರಾಮ ಅಭಿವೃದ್ಧಿ ಮಾಡಿದ್ದೆ ನಾನೂ, ಈ ಗ್ರಾಮದ ಅಭಿವೃದ್ಧಿಗೆ ಕಾರಣ ನಾನೇ ಅಂದ್ರು. ಅಷ್ಟೇ ಅಲ್ಲದೆ ಹಿಂದುಳಿದ ಗ್ರಾಮದಲ್ಲಿ ಹಾಗೂ ಬಡವರ ಮನೆಯಲ್ಲಿ ಕುಮಾರಸ್ವಾಮಿಯವರಂತೆ ಉಳಿದು ಕೊಳ್ಳಲು ನಾನೂ ಮುಖ್ಯಮಂತ್ರಿಯಲ್ಲ, ನಾನೊಬ್ಬ ಸಚಿವನಷ್ಟೆ ಅದರಲ್ಲೂ ಕುಮಾರವಸ್ವಾಮಿಯವರಷ್ಟು ಉದಾರತೆ ನನ್ನಲಿಲ್ಲ ಎಂದ್ರು.
ಇನ್ನು ಸಚಿವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಸಚಿವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದ್ರು. ಸುಮಾರು 10 ಗಂಟೆಗೆ ಆಗಮಿಸಿದ ಸಚಿವರು ಗ್ರಾಮದ ಗ್ರಾ.ಪಂ ಕಾರ್ಯಾಲಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಈ ವೇಳೆ ಒಂದೊಂದು ಇಲಾಖೆಯ ಅಧಿಕಾರಿಗಳ ಹಾಜರಾತಿ ತೆಗೆದುಕೊಂಡು ಗೌಪ್ಯ ಸಭೆ ಮುಗಿಸಿದರು. ನಂತರ ಗ್ರಾಮದ ಮುಖಂಡ ವಿಜಯ್ ಕುಮಾರ್ ಎಂಬುವರ ಮನೆಯಲ್ಲಿ ಊಟ ಮಾಡಿದ್ರು. ನಂತರ ತಾವು ವಾಸ್ತವ ಮಾಡಲು ನಿಶ್ಚಯ ಮಾಡಿದ ಗ್ರಾಮದ ಅನಂತು ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಲು ಆಗಮಿಸಿದ್ರು. ಈ ವೇಳೆ ಮಧ್ಯರಾತ್ರಿ ಒಂದು ಗಂಟೆವರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ರು.
ಈ ವೇಳೆ ಮಾತನಾಡಿದ ಅನಂತು, ನಮ್ಮ ಮನೆಯಲ್ಲಿ ಸಚಿವರು ವಾಸ್ತವ್ಯ ಮಾಡುತ್ತಿರುವುದರ ಬಗ್ಗೆ ಸಂತಸ ಹಂಚಿಕೊಂಡ್ರು. ಅಷ್ಟೇ ಅಲ್ಲದೆ ಗ್ರಾಮದಲ್ಲಿ ಯಾವ ಸಮಸ್ಯೆಯು ಇಲ್ಲ ಎಲ್ಲಾ ಅಭಿವೃದ್ಧಿ ಕಾರ್ಯವನ್ನು ಸಚಿವರು ಮಾಡಿದ್ದಾರೆ ಎಂದು ತಿಳಿಸಿದ್ರು.
ಒಟ್ಟಾರೆ, ಅಧಿಕಾರಿಗಳೇ ಜನರ ಬಳಿಗೆ ತರುವ ಕಲ್ಪನೆ ಮೂಲಕ ಗ್ರಾಮವಾಸ್ತವ್ಯ ಕಾರ್ಯಕ್ರಮ ಮೆಚ್ಚುವ ಕೆಲಸವೇನೋ ಸರಿ. ಆದ್ರೆ ಎಲ್ಲಾ ಮೂಲಭೂತ ಸೌಕರ್ಯ ಇರುವ ಗ್ರಾಮದಲ್ಲಿ ಸಚಿವರ ಗ್ರಾಮ ವಾಸ್ತವ್ಯ ಮಾಡಿದರ ಪ್ರಯೋಜವಾದ್ರು ಏನು ಎಂಬುದೇ ಸದ್ಯಕ್ಕೆ ಅಧಿಕಾರಿಗಳು ಹಾಗೂ ಜನರಲ್ಲಿ ಉದ್ಭವಿಸಿರುವ ಪ್ರಶ್ನೆ.
ಸುರೇಶ್ Tv5 ಮೈಸೂರು