Top

ಮಾನವೀಯತೆ ಮೆರೆದ ಖಾಸಗೀ ಅಂಬುಲೈನ್ಸ್ ಚಾಲಕ

ಮಾನವೀಯತೆ ಮೆರೆದ ಖಾಸಗೀ ಅಂಬುಲೈನ್ಸ್ ಚಾಲಕ
X

ಚಿಕ್ಕಮಗಳೂರು : ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅನೇಕರು ಮಾನವೀಯತೆಯನ್ನೇ ಮರೆಯುತ್ತಾರೆ. ಈ ಬಗ್ಗೆ ಅನೇಕ ಪ್ರಕರಣಗಳು ಸಾಕ್ಷಿಯಾಗಿವೆ. ಇನ್ನೂ ಕೆಲವು ಘಟನೆಗಳು ಹಸಿ ಹಸಿಯಾಗಿ ನಮ್ಮ-ನಿಮ್ಮ ಸ್ಮೃತಿ ಪಟದಲ್ಲಿವೆ. ಇಂತಹ ಘಟನೆಯ ನಡುವೆಯೂ ಆ್ಯಂಬುಲೆನ್ಸ್‌ ಚಾಲಕನೊಬ್ಬ ಮಾನವೀಯತೆ ಮೆರೆದಿದ್ದಾನೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಹೌದು ಇಂತಹ ಘಟನೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಮಿನಿ ಬಸ್‌ವೊಂದು ಅಪಘಾತಕ್ಕೆ ಈಡಾಗಿತ್ತು. ಇದರಿಂದಾಗಿ ಬಸ್‌ನಲ್ಲಿದ್ದ ಐವರು ಗಾಯಗೊಂಡು ರಸ್ತೆ ಮಡುವಿನಲ್ಲಿ ಬಿದ್ದಿದ್ದರು. ಇದೇ ಮಾರ್ಗವಾಗಿ ಬರುತ್ತಿದ್ದ ರೋಗಿಯೊಬ್ಬರನ್ನು ಖಾಸಗೀ ಆ್ಯಂಬುಲೆನ್ಸ್‌ ಚಾಲಕ ಕರೆದೊಯ್ಯುತ್ತಿದ್ದರು. ಇಂತಹ ದೃಶ್ಯ ಕಂಡಿದ್ದೇ ತಡ, ತನ್ನ ಆ್ಯಂಬುಲೆನ್ಸ್‌ ನಿಲ್ಲಿಸಿ, ಅಪಘಾತದಲ್ಲಿ ಗಾಯಗೊಂಡಿದ್ದ ಐದು ಜನರನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ, ಮಾನವೀಯತೆ ಮೆರೆದಿದ್ದಾರೆ.

ಅಂದಹಾಗೇ ಹೀಗೆ ಮಾನವೀಯತೆ ಮೆರೆದ ಖಾಸಗೀ ಆ್ಯಂಬುಲೆನ್ಸ್‌ ಚಾಲಕನೇ ಚಿಕ್ಕಮಗಳೂರು ಜಿಲ್ಲೆಯ ಉಪ್ಪಳ್ಳಿ ನಿವಾಸ ಜಿಶಾನ್‌ ಅಸಾದ್‌. ಖಾಸಗೀ ಆ್ಯಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡ್ತಾ ಇರುವ ಜಿಶಾನ್ ಅಸಾದ್‌, ಚಿಕ್ಕಮಗಳೂರಿನಿಂದ ರೋಗಿಯೊಬ್ಬರನ್ನು ಹಾಸನದ ಕಡೆಗೆ ಕರೆದೊಯ್ಯುತ್ತಿದ್ದರು. ಇದೇ ಮಾರ್ಗಮಧ್ಯೆ ಹಾಸನದ ಕುಪ್ಪಳ್ಳಿ ಬಳಿ ಮಿನಿ ಬಸ್‌ವೊಂದು ಅಪಘಾತ ಸಂಭವಿಸಿ, ಅದರಲ್ಲಿದ್ದವರು ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರು.

ಇದನ್ನು ಗಮನಿಸಿದ ಖಾಸಗೀ ಆ್ಯಂಬುಲೆನ್ಸ್‌ ಚಾಲಕ ಜಿಶಾನ್‌ ಅಸಾದ್‌, ಅಪಘಾತದಿಂದ ನರಳಾಡುತ್ತಿದ್ದವರನ್ನು ತನ್ನ ಆ್ಯಂಬುಲೆನ್ಸ್‌ನಲ್ಲಿ ರೋಗಿಯ ಜೊತೆಗೆ ಸಾಗಿಸಿದ್ದಾರೆ. ಹಾಸನ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಿ, ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ, ಪ್ರಾಣಾಪಾಯದಿಂದ ದೂರ ಮಾಡಿದ್ದಾರೆ. ಗಾಯಾಳುಗಳನ್ನು ಸಾಗಿಸಿದ್ದಕ್ಕೆ ಜಿಶಾನ್‌ ಅಸಾದ್‌ ಬಿಡಿಗಾಸು ಕೂಡ ಪಡೆದಿಲ್ಲವಂತೆ.

ಇವರ ನಿಸ್ವಾರ್ಥ ಸೇವೆಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ರೋಗಿಯೊಬ್ಬರನ್ನು ಮಾತ್ರ ಕರೆದೊಯ್ಯಬಲ್ಲ ಆ್ಯಂಬುಲೆನ್ಸ್‌ನಲ್ಲಿ ಮತ್ತೆ ಐದು ಜನರನ್ನು ಏನನ್ನು ಲೆಕ್ಕಿಸದೇ ತಕ್ಷಣ ಕರೆದೊಯ್ದು ಸಕಾಲದಲ್ಲಿ ಚಿಕಿತ್ಸೆ ನೀಡಿಸಿದ್ದಕ್ಕೆ ಹ್ಯಾಟ್ಸ್‌ ಅಪ್ ಹೇಳುತ್ತಿದ್ದಾರೆ. ನಿಜಕ್ಕೂ ಇದೊಂದು ಶ್ಲಾಘನೀಯ ಕಾರ್ಯವೇ ಸರಿ. ಇಂತಹ ಕಾರ್ಯ ಮಾಡಿ, ಮಾನವೀಯತೆ ಮೆರೆದ ಜಿಶಾನ್‌ ಅಸಾದ್‌ ಅವರಿಗೆ ನಮ್ಮದೂ ಒಂದು ಸಲಾಂ.

ವರದಿ : ಪ್ರವೀಣ್ ಕುಮಾರ್, ಟಿವಿ5 ಚಿಕ್ಕಮಗಳೂರು

Next Story

RELATED STORIES