Top

ಎಂಟು ವರ್ಷ ಕಳೆದರು ಮುಗಿಯದ ಫ್ಲೈ ಓವರ್ ನಿರ್ಮಾಣ ಕಾಮಗಾರಿ

ಎಂಟು ವರ್ಷ ಕಳೆದರು ಮುಗಿಯದ ಫ್ಲೈ ಓವರ್ ನಿರ್ಮಾಣ ಕಾಮಗಾರಿ
X

ಮಂಗಳೂರು : ಕಡಲ ತಡಿ ಮಂಗಳೂರು ಪ್ರಧಾನ ಮಂತ್ರಿಯವರ ಸ್ಮಾರ್ಟ್ ಸಿಟಿ ಲಿಸ್ಟ್ ನಲ್ಲಿರುವ ನಗರ. ಹೀಗಾಗಿಯೇ ಅಭಿವೃದ್ಧಿ ಅನ್ನೋದು ವೇಗವಾಗಿ ನಡೆದರೆ ಮಾತ್ರ ಮಂಗಳೂರು ಸ್ಮಾರ್ಟ್ ಸಿಟಿ ಅನ್ನಿಸಿಕೊಳ್ಳಲು ಸಾಧ್ಯ. ಆದರೆ ಮಂಗಳೂರಿನಲ್ಲಿ ನಡೆಯುತ್ತಿರುವ ಕಾಮಗಾರಿಯೊಂದು ಕರಾವಳಿಗೆ ಕಪ್ಪು ಚುಕ್ಕೆಯ ಜೊತೆಗೆ ಜನರನ್ನು ಕೂಡ ಸಂಕಷ್ಟಕ್ಕೆ ತಳ್ಳಿದೆ.

ಹೌದು ನಗರದ ರಾಷ್ಟ್ರೀಯ ಹೆದ್ದಾರಿಯ ಪಂಪ್ವೆಲ್ ಬಳಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿ ಕಳೆದ ಎಂಟು ವರ್ಷವಾದರೂ ಇನ್ನೂ ಮುಕ್ತಾಯ ಕಂಡಿಲ್ಲ. ಈ ವಿಳಂಬ ಕಾಮಗಾರಿಯಿಂದಾಗಿ ಮಳೆಗಾಲ ಅಷ್ಟೇ ಅಲ್ಲದೆ ವರ್ಷದುದ್ದಕ್ಕೂ ಜನರು ಸಂಕಷ್ಟ ಪಡುವಂತಾಗಿದೆ. ಇನ್ನು ವಾಹನ ಸವಾರರಂತೂ ಈ ಹೆದ್ದಾರಿಯಲ್ಲಿ ಸಂಚರಿಸುವುದಕ್ಕೆ ಯಾತನೆ ಪಡುತ್ತಿದ್ದು, ಸಮಸ್ಯೆಗಳನ್ನು ಕೇಳೋರೇ ಇಲ್ಲವಾಗಿದೆ. ಕರ್ನಾಟಕದಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿಯ ಪಂಪ್ ವೃತ್ತ ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ವೃತ್ತವಾಗಿದೆ.

ಇನ್ನು ಈ ಫ್ಲೈ ಓವರ್ ಗಾಗಿ ವೃತ್ತವನ್ನು ಕಿತ್ತು ಎಂಟು ವರ್ಷಗಳೇ ಕಳೆದರೂ ಇನ್ನೂ ಸಮಸ್ಯೆಗೆ ಇತಿಶ್ರೀ ಮಾತ್ರ ಹಾಡಿಲ್ಲ. ಹೀಗಾಗಿ ಇಲ್ಲಿ ವಾಹನ ಸವಾರರು ಸಂಚಾರಿ ಸೋಕು ಪರದಾಟ ಪಡುವಂತಾಗಿದೆ. ಟ್ರಾಫಿಕ್ ಸಮಸ್ಯೆಯನ್ನು ನೀಗಿಸುವ ಉದ್ದೇಶದಿಂದ ಈ ಫ್ಲೈಓವರ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದರೂ ಹೆದ್ದಾರಿ ಇಲಾಖೆಯ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಇಲ್ಲಿ ನಿತ್ಯ ಅವಘಡಗಳು ಅಪಘಾತಗಳು ನಡೀತಾ ಇದ್ದು ಜನರು ಜೀವಭಯದಿಂದಲೇ ಸಂಚರಿಸುವಂತಹ ಪರಿಸ್ಥಿತಿ ಉದ್ಭವಿಸಿದೆ.

ಈ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಸಂಪೂರ್ಣವಾಗಿ ನೀರು ತುಂಬಿಕೊಂಡು ಇಡೀ ಪಂಪ್ವೆಲ್ ವೃತ್ತವೇ ಮುಳುಗಡೆಯಾಗುತ್ತಿದ್ದು, ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಮೊನ್ನೆ ಮಂಗಳೂರಿನಲ್ಲಿ ಸುರಿದ ಮಹಾಮಳೆಗೆ ಇದೇ ಪಂಪ್ ವೆಲ್ ನಲ್ಲಿ ಫ್ಲೈ ಓವರ್ ಕಾಮಗಾರಿಯಿಂದಾಗಿ ಚರಂಡಿ ನೀರು ಹೊರ ಬಂದ ಪರಿಣಾಮ ಮನೆಗಳಿಗೆ ನುಗ್ಗಿ ಸಮಸ್ಯೆ ಎದುರಿಸುವಂತಾಯಿತು. ಈ ಫ್ಲೈಓವರ್ ನಿಂದಾಗಿ ಗ್ರಾಮೀಣ ಭಾಗಗಳಿಂದ ಮಂಗಳೂರಿಗೆ ಬರುವ ಅದೇಷ್ಟೋ ಜನರು ಟ್ರಾಫಿಕ್ ನಲ್ಲಿ ಸಿಲುಕಿ ಹಾಕಿಕೊಳ್ಳುವ ಪರಿಸ್ಥಿತಿ ಇದೆ. ಹೀಗಾಗಿ ಸಮಯ ವ್ಯರ್ಥದ ಜತೆಗೆ ಜೀವ ಭಯವೂ ಜನರನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಇಷ್ಟಾದರೂ ಜನಪ್ರತಿನಿಧಿಗಳಾಗಲಿ ಅಥವಾ ಇಲ್ಲಿನ ಸ್ಥಳೀಯ ಆಡಳಿತವಾಗಲಿ ಇನ್ನೂ ಎಚ್ಚೆತ್ತುಕೊಂಡಿಲ್ಲ ಅನ್ನೋ ಎನ್ನುವುದೇ ಇಲ್ಲಿನ ಜನರ ಆಕ್ರೋಶ.

ಉಡುಪಿ ಜಿಲ್ಲೆಯ ಕುಂದಾಪುರದಿಂದ ಮಂಗಳೂರಿನ ತಲಪಾಡಿ ವರೆಗಿನ ತೊಂಬತ್ತು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ಈ ಫ್ಲೈ ಓವರ್ ಕೂಡ ಒಂದು. ಹೀಗಾಗಿ ಪಂಪ್ ವೆಲ್ ನಲ್ಲಿ 600 ಮೀಟರ್ ಉದ್ದದ ಫ್ಲೈ ಓವರ್ ನಿರ್ಮಿಸಲು 2010ರಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಹೀಗೆ 2010ರಲ್ಲಿ ಆರಂಭಗೊಂಡ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಯಂತೆ 2013ರಲ್ಲಿ ಕೊನೆಯಾಗಬೇಕಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ಮತ್ತು ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಬೇಜವಾಬ್ದಾರಿಯಿಂದಾಗಿ ಎಂಟು ವರ್ಷವಾದರೂ ಕಾಮಗಾರಿ ಮುಕ್ತಾಯ ಕಂಡಿಲ್ಲ.

ಡೆಡ್ಲೈನ್ ಮುಗಿದರೂ ಪ್ರತಿ ವರ್ಷ ಅವಧಿ ವಿಸ್ತರಣೆ ಮಾಡಿದ್ದನ್ನು ಬಿಟ್ಟರೆ ಕಾಮಗಾರಿಯಲ್ಲಿ ಮಾತ್ರ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಇನ್ನು ದಕ್ಷಿಣ ಕನ್ನಡ ಲೋಕಸಭೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಕಾಮಗಾರಿಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದಂತೆ ತೋರುತ್ತಿಲ್ಲ. ಹೀಗಾಗಿ ಕಾಮಗಾರಿಯ ಗುತ್ತಿಗೆ ಪಡೆದ ನವಯುಗ ಕಂಪೆನಿ ಕೂಡ ಈ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿದ್ದು ಫ್ಲೈ ಓವರ್ ಮುಗಿಯುವ ಹಂತಕ್ಕೆ ಬಂದಿಲ್ಲ. ಕಳೆದ ಎಂಟು ವರ್ಷಗಳಿಂದಲೂ ಒಂದೆರಡು ಕ್ರೇನ್ ಒಂದೆರಡು ಯಂತ್ರಗಳನ್ನು ಹೊರತುಪಡಿಸಿ ನಾಲ್ಕೈದು ಕಾರ್ಮಿಕರು ಮಾತ್ರ ಈ ಕಾಮಗಾರಿಯನ್ನು ನಡೆಸುತ್ತಿದ್ದಾರೆ.

ಆದರೆ ಸದ್ಯದ ಕಾಮಗಾರಿಯನ್ನು ಗಮನಿಸುವಾಗ ನಾಲ್ಕೈದು ವರ್ಷ ಹೋದರೂ ಈ ಫ್ಲೈ ಓವರ್ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಆದ್ರೆ ಇದೀಗ ಲೋಕಸಭೆ ಚುನಾವಣೆ ಬರ್ತಾ ಇದ್ದಂತೆ ಸಂಸದ ನಳಿನ್ ಫೀಲ್ಡಿಗಿಳಿದು ಹೆದ್ದಾರಿ ಕಾಮಗಾರಿ ವೀಕ್ಷಿಸಿ ಹೆದ್ದಾರಿ ಅಧಿಕಾರಿಗಳು ಮತ್ತು ನವಯುಗ ಕಂಪೆನಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಈ ಕಾಮಗಾರಿ ವಿಳಂಬ ಮಾಡಿದ ಕಂಪನಿಗೆ 1.5ಕೋಟಿ ದಂಡ ಕೂಡ ವಿಧಿಸಲಾಗಿದೆ. ಹೀಗಾಗಿ ಆದಷ್ಟು ಬೇಗ ಕಾಮಗಾರಿ ಮುಗಿಸದೇ ಇದ್ರೆ ಟೋಲ್ ರದ್ದು ಮಾಡೋ ಎಚ್ಚರಿಕೆಯನ್ನ ಸಂಸದರು ನೀಡಿದ್ದಾರೆ.

ಒಟ್ಟಾರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಗರದ ಹೃದಯ ಭಾಗದಲ್ಲೇ ಕಾಮಗಾರಿಯೊಂದು ಹಳ್ಳ ಹಿಡಿದಿದೆ. ಇದರಿಂದಾಗಿ ಜನ ಕೂಡ ಸಂಕಷ್ಟಕ್ಕೆ ಸಿಲುಕಿದ್ದು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಬಹುಶಃ ಇದು ಜಿಲ್ಲೆಯ ಮಟ್ಡಿಗೆ ನಡೆದ ಅತೀ ಸುಧೀರ್ಘ ಅವಧಿಯ ಕಾಮಗಾರಿ ಅನ್ನೋದು ದುರಂತ.

ವರದಿ : ಪ್ರಜ್ವಲ್ ಅಮಿನ್, Tv5 ಮಂಗಳೂರು

Next Story

RELATED STORIES