ಇಂದು ಉಭಯ ಸದನಗಳಲ್ಲಿ ಬಜೆಟ್ ಮೇಲಿನ ಚರ್ಚೆ
ಬೆಂಗಳೂರು : ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಕಳೆದ ನಿನ್ನೆ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಚೊಚ್ಚಲ ಬಜೆಟ್ನನ್ನು 2 ಲಕ್ಷದ ವರೆಗಿನ ಸಾಲಾಮನ್ನಾ ಘೋಷಣೆಯ ಮೂಲಕ ಮಂಡಿಸಿದರು.
ಈ ಬಜೆಟ್ ಮೇಲಿನ ಚರ್ಚೆ ಇಂದು ಉಭಯ ಸದನಗಳಲ್ಲೂ ನಡೆಯಲಿದೆ. ಈ ವಿಷಯವನ್ನು ಪ್ರಸ್ತಾಪಿಸಲಿರುವ ಪ್ರತಿಪಕ್ಷವಾದ ಬಿಜೆಪಿ, ಇಂದು ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಯಾರಿಯಲ್ಲಿದೆ. ಏಕೆಂದರೇ ಸಂಪೂರ್ಣ ಸಾಲಾಮನ್ನಾ ಮಾಡಿಲ್ಲ. ಜೆಡಿಎಸ್ ಸರ್ಕಾರದ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ. ನುಡಿದಂತೆ ನಡೆಯದ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇನ್ನೂ ರೈತರ ಸಾಲಾಮನ್ನಾ ವಿಚಾರದ ಬಗ್ಗೆಯೇ ಹೆಚ್ಚು ಒತ್ತು ಕೊಡಲಿರುವ ಪ್ರತಿಪಕ್ಷ, ಇಂದು ಉಭಯ ಸದನಗಳಲ್ಲಿ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸುವ ಸಾಧ್ಯತೆ ಇದೆ. ಈ ಮೂಲಕ ರೈತರ ಸಂಪೂರ್ಣ ಸಾಲಾಮನ್ನಾಕ್ಕೆ ಒತ್ತಾಯಿಸಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಪೆಟ್ರೋಲ್, ಡೀಸೆಲ್ ಸೆಸ್ ಬಗ್ಗೆಯೂ ಬಿಜೆಪಿ ಇಂದು ಪ್ರಸ್ತಾಪಿಸಲಿದೆ.
ರಾಜ್ಯದ 2018-19ನೇ ಬಜೆಟ್ನಲ್ಲಿ ತೆರಿಗೆ ಏರಿಕೆಯ ಬರೆಯನ್ನು ಜನಸಾಮಾನ್ಯರಿಗೆ ನೀಡಲಾಗಿದೆ. ಹೀಗೆ ಜನಸಾಮಾನ್ಯರ ಮೇಲೆ ತೆರಿಗೆಯ ಬರೆ ಎಳೆದಿರೋದನ್ನು ವಾಪಾಸು ಪಡೆಯಬೇಕು ಎಂದು ಸಹ ಇಂದಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿ ಆಗ್ರಹಿಸಲಿದೆ.
ಈ ಬಗ್ಗೆ ಈಗಾಗಲೇ ಸಾಕಷ್ಟು ಸಿದ್ದತೆ ಮಾಡಿಕೊಂಡಿರುವ ಪ್ರತಿಪಕ್ಷ ಬಿಜೆಪಿ, ಈ ನಿಟ್ಟಿನಲ್ಲಿ ತಯಾರಿ ನಡೆಸಿದ್ದರೇ, ಪ್ರತಿಪಕ್ಷದ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂದು ಸರ್ಕಾರ ಕೂಡ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿಗೆ ಎದಿರೇಟು ನೀಡಲು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ನಾಯಕರು ಸಿದ್ದರಾಗಿದ್ದಾರೆ.
ಮತ್ತೊಂದೆಡೆ ಮೇಲ್ಮನೆಯಲ್ಲೂ ಸಾಲಾಮನ್ನಾ ವಿಚಾರದ ಬಗ್ಗೆ ಇಂದು ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ. ಇಲ್ಲಿಯೂ ಸಂಪೂರ್ಣ ಸಾಲಾಮನ್ನಾಕ್ಕೆ ಆಗ್ರಹಿಸಿ, ಪ್ರತಿಭಟನೆಗೆ ಇಳಿಯಲು ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡ ಸಿದ್ದತೆ ನಡೆಸಿದೆ.
ಹೀಗಾಗಿ ಇಂದು ನಡೆಯುವ ಉಭಯ ಸದನಗಳ ಚರ್ಚೆ ಮಹತ್ವ ಪೂರ್ಣದ್ದಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳು ತಂತ್ರ ಪ್ರತಿತಂತ್ರದಲ್ಲಿ ನಿರತರಾಗಿವೆ. ಅದರಲ್ಲೂ ರೈತರ ಸಂಪೂರ್ಣ ಸಾಲಾಮನ್ನಾ ವಿಷಯವೇ ಇಂದು ಸದನಗಳೆರಡರಲ್ಲೂ ಪ್ರತಿಧ್ವನಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.