Top

ಬಜೆಟ್‌ನಲ್ಲಿ ರಾಜಧಾನಿಗೆ ಸಿಕ್ಕ ಕೊಡುಗೆಗಳೇನು ಗೊತ್ತಾ.?

ಬಜೆಟ್‌ನಲ್ಲಿ ರಾಜಧಾನಿಗೆ ಸಿಕ್ಕ ಕೊಡುಗೆಗಳೇನು ಗೊತ್ತಾ.?
X

ಬೆಂಗಳೂರು : ಅಂತೂ ಇಂತೂ ಸಮ್ಮಿಶ್ರ ಸರ್ಕಾರದ ದೋಸ್ತಿ ಬಜೆಟ್‌ ಮಂಡನೆಯಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ, ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ, ಈ ಕೆಳಗಿನಂತೆ ಅನುದಾನವನ್ನು ಮೀಸಲಿಡಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ, ಟೆಲಿಕಾಮ್, ಇ-ಕಾಮರ್ಸ್‌ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇತ್ಯಾದಿ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಭಾರತದ ಐದನೇ ಅತಿದೊಡ್ಡ ನಗರ ಎಂಬ ಕೀರ್ತಿಗೂ ಪಾತ್ರವಾಗಿದೆ. ಹೀಗಾಗಿ ಬೆಂಗಳೂರು ನಗರ ದಿನೇ ದಿನೇ ಬೆಳೆಯುತ್ತಿದ್ದು, ಇದರೊಂದಿಗೆ ಸಾರಿಗೆ ವ್ಯವಸ್ಥೆ ಕೂಡ ಸಮನಾಗಿ ಬೆಳೆದಿರುವುದಿಲ್ಲ. ಹೀಗಾಗಿ ಈ ಬಾರಿಯ ದೋಸ್ತಿ ಲೆಕ್ಕದಲ್ಲಿ, ಮೊದಲು ಸಾರಿಗೆ ಸಂಪರ್ಕಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

 1. ಬೆಂಗಳೂರಿನಲ್ಲಿ ಒಂದಕ್ಕೊಂದು ಉತ್ತಮ ಸಂಪರ್ಕ ಹೊಂದಿರುವ ಆರು ಎಲಿವೇಟೆಡ್‌ ಕಾರಿಡಾರ್‌ಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಹೈಬ್ರೀಡ್‌ ಅನ್ಯೂಟಿ ಪ್ರಕಾರದಲ್ಲಿ 15 ಸಾವಿರದ 825 ಕೋಟಿ ರೂಗಳಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ.
 2. ಈ ಯೋಜನೆ ಸಂಪೂರ್ಣವಾಗಿ ಎಲಿವೇಟೆಡ್‌ ಕಾರಿಡಾರ್ ಆಗಿರುವುದರಿಂದ ಹಾಗೂ ಬೆಂಗಳೂರು ಮೆಟ್ರೋ ಯೋಜನೆಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲಾಗುವುದರಿಂದ ಬೆಂಗಳೂರು ಸಂಪರ್ಕ ವ್ಯವಸ್ಥೆಗೆ ಇದು ಅತ್ಯತ್ತಮ ಕೊಡುಗೆಯಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
 3. ಇನ್ನೂ ಈ ಯೋಜನೆಯ ಅನುಷ್ಠಾನಕ್ಕಾಗಿ KRDCL ಮುಖಾಂತರ ಹೈಬ್ರಿಡ್‌ ಅನ್ಯೂಟಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ 1000 ಕೋಟಿ ರೂಗಳನ್ನು ಒದಗಿಸಲಾಗುವುದೆಂದು ಘೋಷಿಸಿದೆ

ಬೆಂಗಳೂರು ಮೆಟ್ರೋ ರೈಲು ನಿಗಮ

ಇತ್ತೀಚಿಗೆ ನಗರದ ಟ್ರಾಫಿಕ್‌ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುವಂತೆ ಮಾಡಿದ್ದು, ನಮ್ಮ ಮೆಟ್ರೋ ಯೋಜನೆ. ಬೈಯಪ್ಪನಹಳ್ಳಿ ಟು ನಾಯಂಡನಹಳ್ಳಿ, ನಾಗಸಂದ್ರ ಟು ಯಲಚೇನಹಳ್ಳಿ ಮೆಟ್ರೋ ರೈಲು ಸಂಚಾರ ಆರಂಭವಾದ ನಂತ್ರ, ಕೊಂಚಮಟ್ಟಿಗೆ ಬೆಂಗಳೂರಿನ ಸಂಚಾರ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ. ಆದ್ರೇ, ದಿನೇ ದಿನೇ ಕೈ ಮೀರಿ ಬೆಳೆಯುತ್ತಿರುವ ಬೆಂಗಳೂರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ರೈಲು ಯೋಜನೆಯ 3 ನೇ ಹಂತದ ಶೀಘ್ರ ಅನುಸ್ಠಾನಕ್ಕೆ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ.

 1. ಈ ಬಾರಿಯ ಅಯವ್ಯಯದಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಹೊಸ ಯೋಜನೆಗಳಾದ ಜೆಪಿ ನಗರದಿಂದ ಕೆ.ಆರ್.ಪುರಂ ವರೆಗೆ, 42.75 ಕಿಮೀಗಳು, ಟೋಲ್‌ಗೇಟ್‌ನಿಂದ ಕಡಬಗೆರೆವರೆಗೆ 12.5 ಕಿಲೋಮೀಟರ್‌ಗಳು ಯೋಜನೆಗೆ ಹಣ ಮೀಸಲಿಟ್ಟಿದೆ.
 2. ಗೊಟ್ಟಿಗೆರೆಯಿಂದ ಬಸವಪುರದವರೆಗೆ 3.07 ಕಿಮಿಗಳು, ಆರ್.ಕೆ.ಹೆಗ್ಡೆ ನಗರದಿಂದ ಏರೋಸ್ಪೇಸ್‌ ಪಾರ್ಕ್‌ವರೆಗೆ 18.95 ಕಿಮೀಗಳು, ಕೋಗಿಲು ಕ್ರಾಸ್‌ನಿಂದ ರಾಜಾನುಕುಂಟೆವರೆಗೆ 10.6 ಕಿಮೀಗಳು ಮತ್ತು ಇಬ್ಬಲೂರಿನಿಂದ ಕರ್ಮಲ್‌ರಾಮ್‌ವರೆಗೆ 6.67 ಕಿಮೀಗಳ ಒಟ್ಟು 95 ಕಿಮೀಗಳ ಉದ್ದದ ಮಾರ್ಗಗಳ ಅಧ್ಯಯನ ನಡೆಸಲಾಗುತ್ತಿದೆ.
 3. ಈ ಅಧ್ಯಯನದ ವರದಿಯ ಅನುಸಾರ, ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ಯೋಜನೆಯನ್ನು ಈ ಮಾರ್ಗಗಳಲ್ಲಿಯೂ ಓಡಿಸಲು ಕಾರ್ಯ ಯೋಜನೆ ಸಿದ್ದಪಡಿಸಲು ಯೋಜನೆ ರೂಪಿಸಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಹೊತ್ತು ನೀಡದೇ ಹೋದರೂ, ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದ ಬೆಳ್ಳಂದೂರು ಕೆರೆಯ ಕಾಯಕಲ್ಪಕ್ಕೆ ಯೋಜನೆ ರೂಪಿಸಿದೆ.

 1. ಬೆಳ್ಳಂದೂರು ಕೆರೆಯ ಪುನಶ್ಚೇತನಕ್ಕಾಗಿ 50 ಕೋಟಿ ರೂಗಳನ್ನು ಒದಗಿಸಲಾಗಿದೆ.
 2. ಹಂತ ಹಂತವಾಗಿ ಬೆಳ್ಳಂದೂರು ಕೆರೆಯನ್ನು ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಹಭಾಗಿತ್ವದೊಂದಿಗೆ ಕೆರೆಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಕ್ರಮ
 3. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 5000 ಹೆಚ್ಚುವರಿ ನಿವೇಶನಗಳನ್ನು ಹಂಚಲು ಕ್ರಮ
 4. ಮೊದಲ ಹಂತದಲ್ಲಿ 2157 ನಿವೇಶನಗಳ ಹಂಚಿಕೆ. ಎರಡನೇಯ ಹಂತದಲ್ಲಿ 3000 ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ
 5. ಬೆಂಗಳೂರು ನಗರದ ಹೊರವಲಯದಲ್ಲಿ ಫೆರಿಫೆರಲ್‌ ರಿಂಗ್ ರಸ್ತೆಯನ್ನು ನಿರ್ಮಿಸಲು ಉದ್ದೇಶ
 6. 65 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಸ್ಪೆಷಲ್ ಪರ್ಪಸ್‌ ವೆಹಿಕಲ್ ಯೋಜನೆಯ ಅಡಿ ನಿರ್ಮಿಸಲು ಸಂಪನ್ಮೂಲಗಳ ಕೃಢೀಕರಣಕ್ಕೆ ಚಾಲನೆ

ಈ ಮೊದಲಾದ ಯೋಜನೆಯನ್ನು 2018-19ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅನುಷ್ಠಾನಕ್ಕೆ ತರಲು, ಅನುಧಾನವನ್ನು, ಸಂಪನ್ಮೂಲ ಕೃಢೀಕರಣವನ್ನು ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ. ಆದರೇ, ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್‌ ಸರ್ಕಾದ ಅವಧಿಯಲ್ಲಿ ಮಂಡಿಸಿದ ಬಜೆಟ್‌ನ ಅಂಶಗಳೇ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಮತ್ತೆ ಸಮ್ಮಿಶ್ರ ಸರ್ಕಾರದಲ್ಲಿ ಇಂದು ಬಜೆಟ್‌ ಮಂಡಿಸಿದ್ದಾರೆ. ಈ ಬಜೆಟ್‌ ಅವಧಿ ಮುಂದಿನ 2019ರ ಫೆಬ್ರವರಿಗೆ ಕೊನೆಯಾಗಲಿದೆ. ಈ ಅಲ್ಪ ಕಾಲಾವಧಿಯಲ್ಲಿ ಘೋಷಿಸಿದ ಯೋಜನೆಗಳು, ರೂಪಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.

ಅದೇನೇ ಆದರೂ, ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ರಾಜ್ಯದ ಚೊಚ್ಚಲ ಬಜೆಟ್‌ನನ್ನು ಇಂದು ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಬಿಡಿಎ, ಬಿಬಿಎಂಪಿ ಹಾಗೂ ನಮ್ಮ ಮೆಟ್ರೋಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ್ದಾರೆ. ಇಂತಹ ಯೋಜನೆಗಳನ್ನು ಕಾರ್ಯಗತ ಮಾಡಲಿ ಎಂಬುದು ನಮ್ಮ ಆಶಯ.

ವಸಂತ ಬಿ ಈಶ್ವರಗೆರೆ, ನ್ಯೂಸ್‌ ಡೆಸ್ಕ್‌, ಟಿವಿ5

Next Story

RELATED STORIES