ಶಿರೂರು ಶ್ರೀಗಳಿಗೆ ಪಟ್ಟದ ದೇವರ ಹಸ್ತಾಂತರವಿಲ್ಲ: ಅಷ್ಟ ಮಠಾಧೀಶರ ತೀರ್ಮಾನ

ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸ್ವೀಕಾರ ಮಾಡದ ಹಿನ್ನೆಲೆಯಲ್ಲಿ ಶ್ರೀಗಳಿಗೆ ಅವರ ಪಟ್ಟದ ದೇವರನ್ನು ಹಸ್ತಾಂತರ ಮಾಡದೇ ಇರಲು ಉಡುಪಿಯ ಅಷ್ಟಮಠಗಳ ಉಳಿದ ಮಠಾಧೀಶರು ನಿರ್ಧರಿಸಿದ್ದಾರೆ. ಇದರೊಂದಿಗೆ ಉಡುಪಿ ಅಷ್ಟಮಠಾಧೀಶರ ನಡುವಿನ ಶೀತಲ ಸಮರ ಮತ್ತೊಮ್ಮೆ ಸ್ಫೋಟಗೊಂಡಿದೆ.
ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಷ್ಟ ಮಠದ ಮಠಾಧಿಶರು ಪಾಲಿಸಬೇಕಾದ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ಆರೋಪವಿದೆ. ಇದರ ನಡುವೆ ಶ್ರೀಗಳಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ಆದ್ದರಿಂದ ಅವರು ನಿತ್ಯವೂ ಪೂಜಿಸುವ ಪಟ್ಟದ ದೇವರನ್ನು ಅದಮಾರು ಮಠದ ಕಿರಿಯ ಶ್ರೀಗಳಿಗೆ ಹಸ್ತಾಂತರಿಸಲಾಗಿತ್ತು. ಇದೀಗ ಚೇತರಿಸಿಕೊಂಡಿರುವ ಶ್ರೀಗಳಿಗೆ ಮತ್ತೆ ಪಟ್ಟದ ದೇವರನ್ನು ಹಸ್ತಾಂತರಿಸಲು ಅವರು ಶಿಷ್ಯ ಸ್ವೀಕಾರ ಮಾಡುವಂತೆ ಷರತ್ತು ಹಾಕಲಾಗಿದೆ.
ಈ ನಡುವೆ "ತಾನು ಚೇತರಿಸಿಕೊಂಡಿದ್ದು ಪಟ್ಟದ ದೇವರನ್ನು ಮರಳಿ ಕೇಳುತ್ತಿದ್ದೇನೆ.ಹಾಗೊಮ್ಮೆ ಕೊಡಲು ಒಪ್ಪದೆ ಹೋದಲ್ಲಿ ಕಾನೂನು ಹೋರಾಟ ನಡೆಸಲಾಗುತ್ತದೆ" ಎಂದು ಶಿರೂರು ಶ್ರೀಗಳು ಹೇಳಿದ್ದಾರೆ.
ಶಿಷ್ಯ ಸ್ವೀಕಾರ ವಿಚಾರವನ್ನು ಮುಂದೆ ಗಮನಿಸುತ್ತೇನೆ ಎಂದಿರುವ ಶ್ರೀಗಳಿಗೆ ಅವರು ಶಿಷ್ಯ ಸ್ವೀಕಾರ ಮಾಡುವವರೆಗೆ ದೇವರನ್ನು ಹಸ್ತಾಂತರಿಸದೆ ಇರಲು ಮಠಾಧೀಶರು ತೀರ್ಮಾನಿಸಿದ್ದಾರೆ. ಅಲಿಯವರೆಗೆ ಪಟ್ಟದ ದೇವರಿಗೆ ಕೃಷ್ಣಮಠದಲ್ಲಿಯೇ ಪೂಜೆ ನಡೆಯಲಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಧುಮುಕಲು ಮುಂದಾಗಿದ್ದ ಶಿರೂರು ಶ್ರೀಗಳು ಕಡೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದಿದ್ದರು. ಆ ವೇಳೆಯಲ್ಲಿಯೇ ಸ್ವಾಮೀಜಿಯ ಶಿಷ್ಯ ಸ್ವೀಕಾರದ ಕುರಿತು ಚರ್ಚೆ ಆರಂಭವಾಗಿತ್ತು ಇದೀಗ ಮತ್ತೆ ಚರ್ಚೆ ಮುನ್ನಲೆಗೆ ಬಂದಿದ್ದು ಸ್ವಾಮೀಜಿ ಕಡ್ಡಾಯವಾಗಿ ಶಿಷ್ಯ ಸ್ವೀಕಾರ ಮಾಡಬೇಕೆಂಬ ವಿಚಾರಕ್ಕೆ ಮತ್ತೆ ಜೀವ ಬಂದಿದೆ.
ಪರ್ಯಾಯ ಸ್ವೀಕರಿಸುವ ಶ್ರೀಗಳೇ ಪಟ್ಟದ ದೇವರ ಪೂಜೆ ಮಾಡಬೇಕೆನ್ನುವುದು ಅಷ್ಟಮಠಗಳ ನಿಯಮವಾಗಿದ್ದು ಒಂದು ವೇಳೆ ಶ್ರೀಗಳಿಗೆ ಅನಾರೋಗ್ಯವಾದರೆ ಅವರ ಶಿಷ್ಯ ದೇವರ ಪೂಜೆ ನೆರವೇರಿಸಬೇಕಾಗುವುದು.