Top

ರೈತರಿಗೆ ಟೋಪಿ ಹಾಕಿದ ಉದ್ಯಮಿ

ರೈತರಿಗೆ ಟೋಪಿ ಹಾಕಿದ ಉದ್ಯಮಿ
X

ಚಿಕ್ಕಬಳ್ಳಾಪುರ : ತರಕಾರಿ, ಹೂವು ಬೆಳೆದ್ರೆ ಕೈತುಂಬಾ ಹಣ ಸಿಗಲ್ಲ. ನಾನೇಳಿದ ಬೆಳೆ ಬೆಳೆದರೇ ಕೈತುಂಬಾ ಹಣ ಸಿಗುತ್ತೆ ಅಂತ ರೈತರನ್ನ ನಂಬಿಸಿದ ಸುಗಂಧ ದ್ರವ್ಯ ಉದ್ಯಮಿ, ರೈತರ ನೂರಾರು ಎಕರೆ ಜಮೀನಿನಲ್ಲಿ ದವಣ ಬೆಳೆ ಬೆಳೆಸಿ, ಕಟಾವು ಮಾಡಿಕೊಂಡು. ರೈತರು ಹಣ ಕೇಳಿದ್ರೆ ಇವತ್ತು ಕೊಡ್ತೀನಿ.. ನಾಳೆ ಕೊಡ್ತೀನಿ ಅಂತ ಹೇಳಿ ಕೊನೆಗೆ ಹಣ ನೀಡದೆ, ವಂಚಿಸಿರುವ ಘಟನೆ ಚಿಕ್ಕಬಳ್ಳಾಪುರದ್ಲಿಲ ನಡೆದಿದೆ.

ಕೈಗೆ ಬಂದ ತುತ್ತು ಬಾಯಿಗೆ ಬರದೆ ಸಾಲದ ಸುಳಿಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ರೈತರ ಸ್ಥಿತಿಯಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಪೂಶೇಟ್ಟಿಹಳ್ಳಿ, ಬಾಲಕುಂಟಹಳ್ಳಿ, ಗುರುಕುಲನಾಗೇನಹಳ್ಳಿ ಗ್ರಾಮಗಳ ರೈತರು ಸೇರಿದಂತೆ ಗೌರೀಬಿದನೂರು ತಾಲ್ಲೂಕಿನ ನೂರಾರು ಜನ ರೈತರು, ಈಗ ಸಂಕಷ್ಟಕ್ಕೀಡಾಗಿದ್ದಾರೆ. ಹಣ್ಣು-ಹಂಪಲು ತರಕಾರಿ ಬೆಳೆದ್ರೆ ರೇಟ್ ಸಿಗುತ್ತೋ ಇಲ್ವೋ ಅಂತ ಈ ಬಾರಿ ಹಗಲು ರಾತ್ರಿ ಕಷ್ಟ ಪಟ್ಟು ಸುಗಂಧ ದ್ರವ್ಯದ ಸಸಿ ಬೆಳೆದಿದ್ರು. ಆದ್ರೆ ರೈತರು ಬೆಳೆ ಕಟಾವು ಮಾಡಿಕೊಂಡು ಹೋದ ತಾಲ್ಲೂಕು ಮರಳಕುಂಟೆ ಗ್ರಾಮದ ಸುಗಂಧ ದ್ರವ್ಯ ಉದ್ಯಮಿ ಮುನಿರಾಜು, ರೈತರಿಗೆ ಹಣ ನೀಡದೆ ವಂಚಿಸಿದ್ದಾರೆ.

ರೈತರನ್ನು ಪುಸಲಾಯಿಸಿ ಅಷ್ಟೋ ಇಷ್ಟೋ ಅಡ್ವಾನ್ಸ್ ಕೊಟ್ಟು ಒಂದು ಕೆಜಿ ಸುಗಂಧ ದ್ರವ್ಯ ಹೂವಗೆ 11 ರೂಪಾಯಿ, ಒಂದು ಟನ್ ಹೂಗೆ 11 ಸಾವಿರ ರೂಪಾಯಿ ಅಂತ ರೇಟ್ ಫಿಕ್ಸ್ ಮಾಡಿದ್ದಾರೆ. ಬೀಜನೂ ತಾನೇ ಕೊಟ್ಟು ಒಂದು ಎಕರೆಗೆ ಮೂವತ್ತು ಟನ್ ಹೂವನ್ನು ಬೆಳೆಯಬಹುದು ಅಂತ ಆಮಿಷ ಒಡ್ಡಿದ್ದಾರೆ. ಇದಕ್ಕೆಂದೆ ಸ್ಥಳೀಯ ಏಜೆಂಟರುಗಳನ್ನು ನೇಮಕ ಮಾಡಿಕೊಂಡ ಉದ್ಯಮಿ ಮುನಿರಾಜು, ಏಜೆಂಟರ ಮೂಲಕವೇ ಸುಗಂಧ ದ್ರವ್ಯದ ಹೂಗಳನ್ನು ಖರೀದಿಸಿದ್ದಾರೆ.

ಆದರೇ, ರೈತರಿಂದ ಏಜೆಂಟರ್‌ಗಳ ಮೂಲಕ ಹೂ ಖರೀದಿಸಿದ ಹಣವನ್ನೇ ಉದ್ಯಮಿ ಮುನಿರಾಜು, ಕೊಟ್ಟಿಲ್ಲವಂತೆ. ಈಗ ನಿಮ್ಮ ಸುಗಂಧ ದ್ರವ್ಯವೇ ಬರಲಿಲ್ಲ, ಬಂದ ದ್ರವ್ಯವು ಮಾರಾಟವಾಗದೇ ಫ್ಯಾಕ್ಟರಿಯಲ್ಲೇ ಕೊಳೆಯುತ್ತಿದೆ. ಬೇಕಾದ್ರೆ ದ್ರವ್ಯ ತೆಗೆದುಕೊಂಡು ಹೋಗಿ, ನಿಮ್ಗೆ ಹಣ ಕೊಡೋಕೆ ಆಗಲ್ಲ ಅಂತ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದರಂತೆ.

ಇನ್ನೂ ಈ ಸಂಬಂಧ ರೈತರು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೋಲಿಸರು ಮುನಿರಾಜು ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿ ಜೈಲಿಗಟ್ಟಿದ್ದಾರೆ. ಇದೀಗ ರೈತರು ಬೆಳೆದಿದ್ದ ಸುಗಂಧ ದ್ರವ್ಯ ಹೂವಿನ ಹಣವೂ ಬರದೇ, ಹೂ ನಾಟಿ ಮಾಡಲು ಮಾಡಿದ ಸಾಲವೂ ತೀರದೆ ಬೀದಿಗೆ ಬಂದಿದ್ದಾರೆ. ಈಗ ಏನಿದ್ದರೂ ನ್ಯಾಯಾಲಯದ ಮೂಲಕವೇ ಹಣ ಪಡೆಯುವ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ಇದರಿಂದಾಗಿ ಸಾಲ ಸೂಲ ಮಾಡಿ ಬೆಳೆ ಬೆಳೆದ ರೈತರು, ಕೈಗೆ ಹಣ ಬರದೆ ಗೋಳಾಡುತ್ತಿದ್ದಾರೆ.

ವರದಿ : ಮುರಳಿಧರ್, ಟಿವಿ5 ಚಿಕ್ಕಬಳ್ಳಾಪುರ

Next Story

RELATED STORIES