Top

ಬೊಂಬೆ ನಗರಿಗೆ ಮುಖ ಮಾಡದ ಜನಪ್ರತಿನಿಧಿಗಳು : ಈಗ ನಾಯಕರಿಲ್ಲದೆ ಅನಾಥ.?!

ಬೊಂಬೆ ನಗರಿಗೆ ಮುಖ ಮಾಡದ ಜನಪ್ರತಿನಿಧಿಗಳು : ಈಗ ನಾಯಕರಿಲ್ಲದೆ ಅನಾಥ.?!
X

ರಾಮನಗರ : ಬೊಂಬೆಗಳಿಗೆ ಹೆಸರಾಗಿರುವ ಚನ್ನಪಟ್ಟಣ ಕ್ಷೇತ್ರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನವನ್ನ ಸೆಳೆದಿತ್ತು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ರಾಜ್ಯ ನಾಯಕರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಹಾಗೇ ಮೂರು ಪಕ್ಷದಿಂದಲೂ ಪ್ರಬಲ ಅಭ್ಯರ್ಥಿಗಳೇ ಕಣದಲ್ಲಿದ್ದರು. ಚುನಾವಣೆ ಸಂದರ್ಭದಲ್ಲಿ ಪವರ್ ಸ್ಟೇಷನ್ ಆಗಿದ್ದ ಚನ್ನಪಟ್ಟಣ ಈಗ ನಾಯಕರಿಲ್ಲದೆ ಅನಾಥವಾಗಿದೆ. ಹಾಗಾದ್ರೆ ಅದು ಯಾಕೆ ಅಂತೀರ ಈ ಸುದ್ದಿ ಓದಿ.

ಹೌದು ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗಮನವನ್ನ ಸೆಳೆದಿತ್ತು. ಜೆಡಿಎಸ್ ಪಕ್ಷದಿಂದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದರೆ, ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡಿದ್ದರು. ಇವರಿಬ್ಬರ ಮಧ್ಯೆ ಕಾಂಗ್ರೆಸ್‌ನಿಂದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಹೆಚ್.ಎಂ.ರೇವಣ್ಣ ಕಣದಲ್ಲಿದ್ದರು. ಈ ಮೂರು ಜನರ ನಡುವೆ ನಡೆದ ಪೊಲಿಟಿಕಲ್ ಫೈಟ್ ಈ ಬಾರಿ ಚನ್ನಪಟ್ಟಣ ಕ್ಷೇತ್ರವನ್ನ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿತ್ತು.

ಚುನಾವಣೆ ಸಂದರ್ಭದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಬಂದು ಕಲರ್‌ಫುಲ್ ಎಲೆಕ್ಷನ್ ಕ್ಯಾಂಪೇನ್ ಮಾಡುತ್ತ, ಕ್ಷೇತ್ರದ ಮತದಾರರಿಗೆ ಭರವಸೆಗಳ ಬುತ್ತಿಯನ್ನೆ ಕೊಟ್ಟಿದ್ದರು. ಸಿಎಂ ಹೆಚ್.ಡಿ.ಕೆ ಕ್ಷೇತ್ರಕ್ಕೆ ಬಂದಾಗ ನಾನು ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆಂದು ಮತಕೇಳಿದ್ದರು, ಅದೇ ರೀತಿ ಚನ್ನಪಟ್ಟಣದ ಜನತೆ ಅವರನ್ನ 21 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದರು. ಅದೇ ರೀತಿ ಕುಮಾರಸ್ವಾಮಿ ಈಗ ಕ್ಷೇತ್ರದ ಶಾಸಕರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಪಡೆದಿದ್ದಾರೆ.

ಆದರೆ ಈವರೆಗೂ ಕೂಡ ಒಂದು ಬಾರಿಯೂ ಚನ್ನಪಟ್ಟಣದ ಕಡೆಗೆ ಮುಖ ಮಾಡಿಲ್ಲ, ಬದಲಾಗಿ ಪತ್ನಿ ಅನಿತಾಕುಮಾರಸ್ವಾಮಿ ಚನ್ನಪಟ್ಟಣದ ಸೂಪರ್ ಎಂಎಲ್‌ಎ ಆಗಿದ್ದಾರೆ. ಮೊನ್ನೆಯಷ್ಟೆ ಚನ್ನಪಟ್ಟಣದಲ್ಲಿನ ಅಧಿಕೃತ ಸಿಎಂ ಕಚೇರಿಯನ್ನ ಅನಿತಾಕುಮಾರಸ್ವಾಮಿಯವರೇ ಉದ್ಘಾಟಿಸಿರುವುದು ಇದಕ್ಕೆ ಸಾಕ್ಷಿ.

ಇನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅಂತು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುವ ಮೂಲಕ 30 ಸಾವಿರಕ್ಕೂ ಹೆಚ್ಚು ಮತವನ್ನ ಪಡೆದು ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಸೋಲಿಗೆ ಪ್ರಮುಖ ಕಾರಣಕರ್ತರಾದರು.

ಇನ್ನು ಚುನಾವಣೆ ಪೂರ್ವದಲ್ಲಿ ನಾನು ಸೋತರು ಸರಿ ಇಲ್ಲೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆಂದು ಹೇಳಿದವರು ಸೋತ ಬಳಿಕ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಕ್ಷೇತ್ರದ ಜನರಿಗೆ ಕೃತಜ್ಞತಾ ಸಭೆಯನ್ನು ಆಯೋಜನೆ ಮಾಡದೇ ತಮಗೆ ಮತಕೊಟ್ಟವರನ್ನೇ ಮರೆತಿದ್ದಾರೆ. ಇನ್ನು ಇವರಿಬ್ಬರ ಮಧ್ಯೆ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಚುನಾವಣೆಯಲ್ಲಿ ಸೋತರು ಸಹ ಕ್ಷೇತ್ರಕ್ಕೆ ಬಂದು ತನಗೆ ಮತಕೊಟ್ಟವರಿಗೆ ಅಭಿನಂದನಾ ಸಮಾವೇಶ ನಡೆಸಿ ಕೃತಜ್ಞತೆ ಸಲ್ಲಿಸಿರುವುದು ನಿಜಕ್ಕೂ ಮೆಚ್ಚುಗೆಯ ವಿಚಾರ ಎನ್ನಬಹುದು.

ಒಟ್ಟಾರೆ ಚುನಾವಣೆಯಲ್ಲಿ ಮತಕೇಳುವಾಗ ಇಲ್ಲಸಲ್ಲದ ಭರವಸೆಗಳನ್ನ ಕೊಟ್ಟು ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುವ ರಾಜಕಾರಣಿಗಳಿಗೆ ತಮ್ಮ ಕೆಲಸವಾದ ಬಳಿಕ ತಮಗಾಗಿ ದುಡಿದವರು, ಮತದಾರರು ನೆನಪಿಗೆ ಬರೋದಿಲ್ಲ ಎಂಬುದಕ್ಕೆ ಇದೇ ನೈಜ ಉದಾಹರಣೆ. ಇನ್ನಾದರು ಕ್ಷೇತ್ರದ ಕಡೆ ಗಮನಹರಿಸಲೆಂದು ಮತದಾರ ಪ್ರಭುಗಳು ಅಭಿಪ್ರಾಯಪಟ್ಟಿದ್ದಾರೆ.

ವರದಿ : ನಟರಾಜ್ ಬೆಳಕವಾಡಿ, ಟಿವಿ5 ರಾಮನಗರ.

Next Story

RELATED STORIES