ಹಾಲಿ ಚಾಂಪಿಯನ್ ಜರ್ಮನಿ ಔಟ್: ಕೊರಿಯಾಗೆ `ಹೆಚ್ಚುವರಿ' ಜಯ

ಮಾಸ್ಕೊ: ಪಂದ್ಯದ ಕೊನೆಯ ಕ್ಷಣಗಳಲ್ಲಿ ಸತತ ಎರಡು ಗೋಲು ಬಿಟ್ಟುಕೊಟ್ಟ ಹಾಲಿ ಚಾಂಪಿಯನ್ ಜರ್ಮನಿ ತಂಡ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಈ ರೋಚಕ ಗೆಲುವಿನೊಂದಿಗೆ ದಕ್ಷಿಣ ಕೊರಿಯಾ ತಂಡ ಪ್ರೀಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿತು.
ಬುಧವಾರ ನಡೆದ ಎಫ್ ಗುಂಪಿನ ಅಂತಿಮ ಪಂದ್ಯ ಜರ್ಮನಿ ಪಾಲಿಗೆ ಮಾಡು ಇಲ್ಲವೇ ಮಡಿಯಾಗಿತ್ತು. ಪಂದ್ಯದ ಕೊನೆಯವರೆಗೂ ಉಭಯ ತಂಡಗಳು 0-0ಯಿಂದ ಸಮಬಲ ಹೊಂದಿದ್ದವು. ಆದರೆ ಪಂದ್ಯದ ಕೊನೆಯ ಹೆಚ್ಚುವರಿ 10 ನಿಮಿಷಗಳ ಆಟದಲ್ಲಿ ಜರ್ಮನಿ ಮೈಮರೆತರೆ, ಕೊರಿಯಾ ತಂಡ ಸತತ ಎರಡು ಗೋಲು ಬಾರಿಸಿ ಟೂರ್ನಿಯ ಅತೀ ದೊಡ್ಡ ಆಘಾತ ನೀಡಿತು.
ಕೊರಿಯಾ ಪರ ಕಿಮ್ ಯಂಗ್ ಗೌನ್ (90+2ನೇ ನಿಮಿಷ) ಹಾಗೂ ಸನ್ ಯ್ಯುಂಗ್ ಮಿನ್ (90+6ನೇ ನಿಮಿಷ) ಗೋಲು ಬಾರಿಸಿ ಐತಿಹಾಸಿಕ ಗೆಲುವು ದಾಖಲಿಸಿದರು. ಇದು ಜರ್ಮನಿ ವಿರುದ್ಧ ಕೊರಿಯಾಗೆ ವಿಶ್ವಕಪ್ನಲ್ಲಿ ದೊರೆತ ಮೊದಲ ಜಯ.
ಜರ್ಮನಿ ಇದೇ ಮೊದಲ ಬಾರಿ ವಿಶ್ವಕಪ್ನಲ್ಲಿ ಎದುರಾಳಿಗೆ ಸತತ ಗೋಲು ಬಿಟ್ಟಿದ್ದೂ ಅಲ್ಲದೇ ಮೊದಲ ಬಾರಿ ವಿಶ್ವಕಪ್ನ ಮೊದಲ ಸುತ್ತಿನಲ್ಲೇ ಹೊರಬಿದ್ದ ಅಪಮಾನಕ್ಕೆ ಗುರಿಯಾಯಿತು.