Top

ಭಿಕ್ಷುಕನಂತೆ ಇದ್ದವನು ರೊನಾಲ್ಡೊ ಪೆನಾಲ್ಟಿ ಕಿಕ್​ ತಡೆದು ಸ್ಟಾರ್ ಆದ!

ಭಿಕ್ಷುಕನಂತೆ ಇದ್ದವನು ರೊನಾಲ್ಡೊ ಪೆನಾಲ್ಟಿ ಕಿಕ್​ ತಡೆದು ಸ್ಟಾರ್ ಆದ!
X

ಅತ್ಯುತ್ತಮ ಫಾರ್ಮ್​ನಲ್ಲಿರುವ ಪೋರ್ಚುಗಲ್​ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ರಕ್ಷಣೆಗೆ ಕೋಟೆಯನ್ನೇ ನಿರ್ಮಿಸಿದ್ದರೂ ಅದನ್ನು ಪುಡಿಗಟ್ಟಿ ಗೋಲು ಗಳಿಸುವುದರಲ್ಲಿ ನಿಸ್ಸೀಮ. ಎಂತಹ ನಿಸ್ಸೀಮ ಗೋಲ್ ಕೀಪರ್ ಇದ್ದರೂ ಸಲೀಸಾಗಿ ಗೋಲು ದಾಖಲಿಸಬಲ್ಲ ತಾಕತ್ತು ರೊನಾಲ್ಡೊದು. ಅದಕ್ಕಾಗಿಯೇ ಅವರಿಗೆ ಪೆನಾಲ್ಟಿ ಕಿಂಗ್ ಎಂಬ ಹೆಸರು ಬಂದಿರುವುದು. ಅದರಲ್ಲೂ ಪೆನಾಲ್ಟಿ ಕಿಕ್ ಅಂದರೆ ಸುಮ್ಮನೆ ಬಿಡ್ತಾರಾ? ಗೋಲಿಯೊಬ್ಬನನ್ನು ವಂಚಿಸುವುದು ರೊನಾಲ್ಡೊಗೆ ಕಷ್ಟವೇನೂ ಆಗಿರಲಿಲ್ಲ. ಆದರೆ ಇರಾನ್ ವಿರುದ್ಧ ಮಾತ್ರ ರೊನಾಲ್ಡೊಗೆ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ.

ಹೌದು, ಇರಾನ್ ನ ಈ 25 ವರ್ಷದ ಯುವ ಗೋಲ್ ಕೀಪರ್ ಅಲೈರೆಜಾ ಭೈರವ್ ನಂಡ್ ಈಗ ರೊನಾಲ್ಡೊ ಪೆನಾಲ್ಟಿಯನ್ನೇ ತಡೆದು ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿದ್ದಾನೆ. ಆದರೆ ಈತ ಯಾವುದೇ ಗಾಡ್ ಫಾದರ್ ಅಥವಾ ಸ್ಟಾರ್ ಗಿರಿಯ ಆಟಗಾರನಲ್ಲ. ಬದಲಾಗಿ ರಸ್ತೆ ಬದಿಯಲ್ಲಿ, ಸಣ್ಣಪುಟ್ಟ ಕೆಲಸದ ಜೊತೆ ಆಟವಾಡಿಕೊಂಡು ಇದೀಗ ವಿಶ್ವಕಪ್ ಎಂಬ ಮಹಾಸಾಗರದಲ್ಲಿ ಖ್ಯಾತನಾಮರ ಸಾಲಿನಲ್ಲಿ ನಿಂತಿದ್ದಾನೆ.

6.5 ಅಡಿ ಎತ್ತರದ ಈ ಅಜಾನುಬಾಹು ಅಲೈರೆಜಾ, ಸೋಮವಾರ ನಡೆದ ಪೋರ್ಚುಗಲ್ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಬಾರಿಸಿದ ಪೆನಾಲ್ಟಿಯಲ್ಲಿ ಹಾರಿ ಚೆಂಡನ್ನು ತಡೆದು ತಂಡವನ್ನುಸೋಲಿನಿಂದ ಪಾರು ಮಾಡಿದ್ದರು. ಇದರಿಂದ ರೊನಾಲ್ಡೊ ಹಾಗೂ ಪೋರ್ಚುಗಲ್ ತಂಡ ಸಾಮಾನ್ಯ ತಂಡದ ಎದುರು ಗೆಲ್ಲಲು ಆಗದೇ 1-1ರಿಂದ ಡ್ರಾ ಮಾಡಿಕೊಂಡಿದ್ದಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾಯಿತು. ಆದರೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು ಮಾತ್ರ ಈ ಗೋಲ್ ಕೀಪರ್ ಅಲೈರೆಜಾ.

ಪಶ್ಚಿಮ ಇರಾನ್ ನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಲೈರೆಜಾ 12 ವರ್ಷದವನಿದ್ದಾಗಲೇ ಕೆಲಸ ಮಾಡುತ್ತಾ, ಫುಟ್ಬಾಲ್ ಆಟದಲ್ಲಿ ಮುಳುಗುತ್ತಿದ್ದ. ಇದನ್ನ ಗಮನಿಸಿದ ತಂದೆ ಆಡೋದು ಬಿಟ್ಟು ಕೆಲಸದ ಕಡೆ ಗಮನ ಕೊಡಲು ಹೇಳಿದರು. ಇದರಿಂದ ನೊಂದ ಅಲೈರೆಜಾ, ಸಂಬಂಧಿಯೊಬ್ಬರ ಬಳಿ ಹಣ ಪಡೆದು ಹೇಳದೇ ಕೇಳದೇ ಮನೆಬಿಟ್ಟು ಹೋದ.

ಇರಾನ್ ರಾಜಧಾನಿ ತೆಹ್ರಾನ್ ಗೆ ಬಂದ ಅಲೈರೆಜಾ, ಫುಟ್ಬಾಲ್ ಕ್ಲಬ್ ಬಳಿಯೇ ಕಾದಿದ್ದ. ಕೆಲವು ಬಾರಿ ಗೇಟ್ ಮುಂದೆ ರಸ್ತೆಯ ಬದಿಯಲ್ಲೇ ಮಲಗಿಬಿಟ್ಟಿರುತ್ತಿದ್ದ. ಆದರೆ ಬೆಳಗ್ಗೆ ಎದ್ದು ನೋಡಿದರೆ ತನ್ನ ಮುಂದೆ ಚಿಲ್ಲರೆ ಕಾಸುಗಳು ಬಿದ್ದಿರುತ್ತಿದ್ದವು.

ನಾನು ಭಿಕ್ಷುಕ ಅಂತ ಭಾವಿಸಿದ್ದರೋ ಏನೋ? ಆದರೆ ಅದರಿಂದ ನಾನು ತುಂಬಾ ದಿನಗಳ ನಂತರ ಹೊಟ್ಟೆ ತುಂಬಾ ಊಟ ಮಾಡಿದ್ದೆ. ಒಂದು ದಿನ ಕ್ಲಬ್ ನವರು ಒಳಗೆ ಬಿಟ್ಟಿದ್ದೂ ಅಲ್ಲದೇ ಎಲ್ಲರ ಜೊತೆ ಆಡಲು ಅವಕಾಶ ಮಾಡಿಕೊಟ್ಟರು. ನಂತರ ಕ್ಲಬ್​ನಲ್ಲಿ ಅವಕಾಶ ಸಿಕ್ಕರೂ ಪಿಜಾ ಬರ್ಗರ್ ತಲುಪಿಸುವುದು, ಹೋಟೆಲ್ ಹೀಗೆ ಎಲ್ಲೆಂದರಲ್ಲಿ ಕೆಲಸ ಮಾಡಿದೆ .ಹೀಗೆ ನನ್ನ ಫುಟ್ಬಾಲ್ ಜೀವನ ಆರಂಭವಾಯಿತು ಎಂದು ಅಲೈರೆಜಾ ಹೇಳಿಕೊಂಡಿದ್ದಾರೆ.

Next Story

RELATED STORIES