Top

ಕೋಲಾರದಲ್ಲೊಬ್ಬ ಅಪರೂಪದ ರಾಮಭಕ್ತ : ಮುಸ್ಲಿಂ ಭಕ್ತನಿಂದ ಶ್ರೀರಾಮನ ಜಪ

ಕೋಲಾರದಲ್ಲೊಬ್ಬ ಅಪರೂಪದ ರಾಮಭಕ್ತ : ಮುಸ್ಲಿಂ ಭಕ್ತನಿಂದ ಶ್ರೀರಾಮನ ಜಪ
X

ವಿಶೇಷ ವರದಿ : ಗಂಗಾಪುರ ಕುಮಾರ್, ಟಿವಿ 5 ಕೋಲಾರ

ಕೋಲಾರ : ಹಿಂದೂಗಳ ಆರಾದ್ಯ ದೈವ ಕಲಿಯುಗ ಮಹಾ ಪುರುಷ ಶ್ರೀರಾಮನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಕೋಟ್ಯಾಂತರ ಜನ್ರು ಶ್ರೀರಾಮ ಕೋಟಿ ಬರೆಯೋ ಮೂಲಕ ದೇವರಿಗೆ ತಮ್ಮ ಭಕ್ತಿಯನ್ನ ಸಮರ್ಪಿಸ್ತಾರೆ. ಆದ್ರೆ ಇಲ್ಲೊಬ್ಬ ಮುಸಲ್ಮಾನ ವೃದ್ದ, ಶ್ರೀರಾಮನ ಜಪದಿಂದಲೇ ತಮ್ಮ ಜೀವನದ ಅಂತ್ಯಕ್ಕೆ ಬಂದು ಸೇರಿದ್ದಾರೆ. 92 ವರ್ಷವಾದ್ರು ಶ್ರೀರಾಮ ಕೋಟಿ ಬರೆಯುತ್ತಿರುವ ಇವರು ರಾಮನಿಗೆ ತಮ್ಮ ಭಕ್ತಿಯನ್ನ ಸಮರ್ಪಣೆ ಮಾಡುತಿದ್ದಾರೆ.

ಕಲಿಯುಗದ ಮಹಾ ಪುರುಷ, ವಿಷ್ಣುವಿನ 7ನೇ ಅವತಾರ ಶ್ರೀರಾಮನ ಬಗ್ಗೆ ಯಾರಿಗೇ ತಾನೆ ಗೊತ್ತಿಲ್ಲ ಹೇಳಿ. ಸಾಕ್ಷಾತ್ ದೈವಾನುದೇವತೆಗಳು ಈ ಮಹಾನುಭಾವನ ಮಹಿಮೆಗೆ ಸೋಲದವರಿಲ್ಲ. ಧರ್ಮ, ಸತ್ಯ, ನ್ಯಾಯ ಈ ಮೂರೇ ಮಾರ್ಗದಿಂದ ಜಗತ್ತೇನ್ನೇ ತಮ್ಮತ್ತ ನೋಡುವಂತೆ ಮಾಡಿದ ಕೀರ್ತಿ ಶ್ರೀರಾಮನಿಗೆ ಸಲ್ಲುತ್ತೆ ಎಂದು ಪೌರಾಣಿಕ ಕತೆಗಳಲ್ಲಿ ಉಲ್ಲೇಖಿಸಿದ್ದಾರೆ. ಹೀಗೆ ಧರ್ಮದಿಂದಲೇ ಎಲ್ಲವನ್ನು ಎದುರಿಸಿ ಅಧರ್ಮದ ನಾಶಕ್ಕಾಗಿ ಶ್ರಮಿಸಿದ ಶ್ರೀರಾಮ ಸತ್ಯ, ನ್ಯಾಯದ ದಾರಿಯಿಂದ ಸಮಾಜದಲ್ಲಿ ಶಾಂತಿ ನೆಲೆಸುವ ಮಾರ್ಗವನ್ನ ಅನುಕರಣೆ ಮಾಡಿ, ಕಲಿಯುಗದ ಮಹಾಪುರುಷ ಎಂಬ ಕೀರ್ತಿಗೆ ಪಾತ್ರರಾದ್ರು. ಹೀಗೆ ಶ್ರೇಷ್ಠ ಗುಣಗಾಣ ಮಾಡುವಂತೆ ಭಗವಾನ್ ರಾಮನನ್ನ ಒಲಿಸಿಕೊಳ್ಳೋಕೆ ಅನೇಕ ಮಾರ್ಗಗಳನ್ನ ಜನ್ರು ಅನುಸರಿಸುತ್ತಲೇ ಇರ್ತಾರೆ. ಅದ್ರಲ್ಲಿ ಪ್ರಮುಖವಾಗಿ ಶ್ರೀರಾಮನ ಜಪ ಮಾಡುತ್ತಾ, ರಾಮಕೋಟಿಯನ್ನ ಬರೆದು ಅದನ್ನ ಸ್ಮರಿಸಿದ್ರೆ ರಾಮ ಒಲಿಯುತ್ತಾನೆ ಎನ್ನುವ ನಂಬಿಕೆ ಇಂದಿಗೂ ಜೀವಂತವಾಗಿದೆ.

ಹೌದು, ನಾವು ನಿಷ್ಠೆಯಿಂದ ಯಾವುದೇ ಕೆಲಸವನ್ನ ದೃಡವಾಗಿ ನಂಬಿ ಮಾಡಿದರೆ ಅದು ಖಂಡಿತವಾಗಿ ಯಶಸ್ಸು ಸಾಧಿಸುತ್ತೆ ಎಂಬುವ ಮಾತಿದೆ. ಹಾಗಂತ ಶ್ರೀರಾಮ ಕೋಠಿಯನ್ನ ಎಲ್ಲರೂ ಬರೆಯುವಂತಿಲ್ಲ, ಬರೆಯಲು ಆರಂಬಿಸಬೇಕೆಂದ್ರೆ ಅದಕ್ಕಂತಲೇ ಕೆಲ ಮಂತ್ರ ಉಪದೇಶಗಳನ್ನ ಸ್ಮರಿಸಲೇ ಬೇಕು, ನಿಷ್ಟೆ, ಜ್ಞಾನ ಏಕಾಗ್ರತೆ ಇದ್ದರೇನೆ ರಾಮಕೋಟಿ ಬರೆಯಲು ಸಾಧ್ಯವಾಗುತ್ತೆ. ರಾಮಕೋಟಿ ಬರೆಯುವಾಗ ಪ್ರತಿ ಲಕ್ಷಕ್ಕೊಮ್ಮೆ ಶ್ರೀರಾಮನಿಗೆ ವಿಶೇಷ ಪೂಜೆಗಳನ್ನ ಸಲ್ಲಿಸುವುದು ಮತ್ತಷ್ಟು ಮಹಿಮೆಯನ್ನ ಹೆಚ್ಚಿಸುತ್ತದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿನ ಈ ವಯೋ ವೃದ್ದನೇ ಶ್ರೀರಾಮನ ಪರಮ ಭಕ್ತ. ಕಳೆದ 22ವರ್ಷಗಳಿಂದ ಶ್ರೀರಾಮನ ಜಪ ಮಾಡುತ್ತಾ ರಾಮಕೋಟಿಯನ್ನ ತಮ್ಮ ಚಿಕ್ಕ ಕೋಣೆಯಲ್ಲೇ ಬರೆಯುತ್ತಿದ್ದಾರೆ. ಸದ್ಯ ಕಾಯಕ ಶ್ರೀರಾಮ ಕೋಟಿ ಬರೆದು ಆಂದ್ರಪ್ರದೇಶದ ಭದ್ರಾಚಲಂ ಪುಣ್ಯ ಕ್ಷೇತ್ರದ ರಾಮನ ದೇಗುಲಕ್ಕೆ ಶ್ರೀರಾಮಕೋಟಿ ಪುಸ್ತಕವನ್ನ ಸಮರ್ಪಿಸುತ್ತಿದ್ದಾರೆ. ಮೂಲತಃ ಮುಸ್ಲಿಂ ಧರ್ಮದವರಾದ್ರು ಇಂದು ಪಾಚಾ ಅವ್ರು ಶ್ರೀರಾಮನ ಭಕ್ತರಾಗಿದ್ದಾರೆ.

ಪಾಚಾ ಸಾಭ್ ಹುಟ್ಟಿದ್ದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಇವತ್ತಿನ ಕುಗ್ರಾಮ ಮಾಗೊಂದಿ ಎನ್ನುವ ಊರಲ್ಲೇ. ಮೈಸೂರು ರಾಜರು ರಾಜ್ಯವನ್ನ ಮುನ್ನಡೆಸುತ್ತಿದ್ದ ಕಾಲದಲ್ಲಿ ಪಾಚಾ ಸಾಬ್‍ರಿಗೆ ಶಿಕ್ಷಣ ಭೊದನೆ ಮಾಡುವಂತೆ ಮಹಾರಾಜರು ಅಂದಿನ ಕಾಲದಲ್ಲೇ ಸೂಚಿಸಿದ್ದರು. ಅದರಂತೆ ಪಾಚಾ ಬಂಗಾರಪೇಟೆ ತಾಲೂಕಿನ ಕೆಲ ಗ್ರಾಮಗಳಿಗ ಕಾಲ್ನಡಿಗೆಯಲ್ಲೇ ತೆರಳಿ ಶಿಕ್ಷಣವನ್ನ ಭೋದನೆ ಮಾಡುತ್ತಿದ್ದರು. ಕಾಲಾನಂತರ ಕರ್ನಾಟಕ ಸರ್ಕಾರ ಪಾಚಾ ಸಾಬ್‍ರ ನಿಷ್ಟಾವಂತ ಸೇವೆಯನ್ನ ಗುರ್ತಿಸಿ ಪ್ರಾಥಮಿಕ ಶಾಲೆಯಲ್ಲಿಯೇ ಶಿಕ್ಷಕರನ್ನಾಗಿ ನೇಮಿಸಿತ್ತು.

ಹಾಗೆ ಪಾಚಾ ಸಾಬ್ ತಮ್ಮ ಹುಟ್ಟೂರು ಮಾಗೊಂದಿ ಗ್ರಾಮದ ಶಾಲಯಲ್ಲೇ ತಮ್ಮ ಶಿಕ್ಷಕ ವೃತ್ತಿ ಜೀವನವನ್ನಾ ಕಳೆದರು. ಒಮ್ಮೆ ಶಿಕ್ಷಣ ವೃತ್ತಿಯಲ್ಲಿ ಇದ್ದಾಗ್ಲೇ ಪಾಚಾ ಸಾಬ್ ಆಂದ್ರದ ಪುಣ್ಯಕ್ಷೇತ್ರ ಭದ್ರಾಚಲಂಗೆ ಕೆಲಸದ ನಿಮಿತ್ತ ತೆರಳಿದಾಗ ಅಲ್ಲಿದ್ದ ರಾಮನ ಭಕ್ತರೊಬ್ಬರು ಶ್ರೀರಾಮ ಕೋಠಿಯನ್ನ ಬರೆಯವಂತೆ ಸಲಹೆ ನೀಡಿದ್ದಾರೆ. ಅದ್ರಂತೆ ತಮ್ಮ 74 ವಯಸ್ಸಿಗೆ ರಾಮಕೋಟಿ ಬರೆಯಲು ಆರಂಭಿಸಿದ ಇವರು ಇಂದಿಗೆ 86 ಲಕ್ಷ ಬಾರಿ ರಾಮನ ಹೆಸರನ್ನ ಬರೆದು, ಇನ್ನೂ 14 ಲಕ್ಷ ಬಾರಿ ರಾಮನ ಹೆಸರು ಬರೆಯುವ ಕಾಯಕ ಮುಂದುವರೆಸಿದ್ದಾರೆ.

ಪಾಚಾ ರಾಮಕೋಟಿ ಬರೆಯುತ್ತಲೇ ನೆರೆಹೊರೆಯ ಗ್ರಾಮದಲ್ಲಿ ಉತ್ತಮ ಹೆಸರನ್ನ ಸಂಪಾದಿಸಿದ್ದಾರೆ, ಪಾಚಾ ಸಾಬ್ ಮನೆಗೆ ಬರುವ ಭಕ್ತರು ತಮ್ಮ ಭವಿಷ್ಯ, ಜಾತಕಗಳ ವಿಚಾರವನ್ನ ತಿಳಿದು ಪೂಜಾ ಸಾಮಗ್ರಿಯನ್ನ ಪಡೆದುಕೊಂಡು ಹೊಗ್ತಾರೆ. ಅಲ್ದೆ ಸಾಮಾನ್ಯ ಜನರು ಹೊರತಾಗಿ ರಾಜಕೀಯ ಮುಖಂಡರಾದ, ಮಾಜಿ ಸಚಿವ ತನ್ವೀರ್ ಸೇಠ್, ಸ್ಪೀಕರ್ ರಮೇಶ್‍ಕುಮಾರ್, ಯು.ಟಿ.ಖಾದರ್ ಸೇರಿದಂತೆ ಹಲವು ಗಣ್ಯರು ಪಾಚಾ ಸಾಬ್‍ರನ್ನ ಭೇಟಿಯಾಗಿ ಸಲಹೆ ಸೂಚನೆಗಳನ್ನ ಪಡೆದುಕೊಂಡಿದ್ದಾರೆ.

ಪಾಚಾ ಸಾಬ್‍ರಂತ ದೈವ ಭಕ್ತರನ್ನ ಗಮನಿಸಿದ ಜನರು ಗ್ರಾಮದಲ್ಲಿ ನಡೆಯುವ ಪ್ರತಿ ಪೂಜಾ ಕಾರ್ಯಕ್ರಮಗಳಿಗೂ ಮುಖ್ಯ ಅತಿಥಿಗಳಾಗಿ ಆಹ್ವಾನ ನೀಡುತ್ತಾರೆ. ಪಾಚಾ ಸಾಬ್ ಈಗಲೂ ಹಿಂದೂ ದೇಗುಲಗಳಿಗೂ ತೆರಳಿ ದೇವರಿಗೆ ನಮಸ್ಕರಿಸಿತ್ತಾರೆ. ಮುಸ್ಲಿಂ ಧರ್ಮಧ ಗುರು ಕಬೀರ್‍ದಾಸರ ಮಾತಿನಂತೆ ಭಕ್ತಿಮಾರ್ಗವನ್ನೇ ಆಯ್ಕೆಮಾಡಿಕೊಂಡು ಏಕಾಗ್ರತೆಯಿಂದ ರಾಮಕೋಟಿ ಬರೆಯೋದ್ರಲ್ಲಿ ತಲ್ಲೀನರಾಗಿದ್ದಾರೆ.

ಪಾಚಾ ಸಾಬ್ ಇವತ್ತಿಗೂ ಗ್ರಾಮದಲ್ಲಿ ಲವಲವಿಕೆಯಿಂದಲೇ ಜೀವನ ಸಾಗಿಸ್ತಿದ್ದಾರೆ. ದಿನದ 24 ಗಂಟೆಯಲ್ಲಿ 5 ಗಂಟೆ ನಿದ್ದೆ, ಉಳಿದೆಲ್ಲಾ ಸಮಯ ತಮ್ಮ ಶ್ರೀರಾಮಕೋಟಿ ಬರೆಯಬೇಕೆನ್ನುವ ಗುರಿಗೆ ಮೀಸಲಿಟ್ಟಿದ್ದಾರೆ. ಗ್ರಾಮದಲ್ಲಿ ಎಲ್ಲರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಇವರು, ಮಹಿಳೆಯರ, ಮಕ್ಕಳ ಯುವಕರ ಪಾಲಿನ ಆಶಾಕಿರಣವಾಗಿದ್ದಾರೆ. ಕಳೆದ 22 ವರ್ಷಗಳಿಂದ ಸಿಕ್ಕ ಸಣ್ಣ ಪುಟ್ಟ ಪುಸ್ತಕಗಳು, ಹಾಳೆ, ಮದುವೆ ಪತ್ರಗಳು, ಅಗಲವಾದ ಒಣ ಎಲೆಗಳು, ತಾಳೆ ಪತ್ರಗಳು, ಹೀಗೆ 86 ಲಕ್ಷ ಬಾರಿ ಶ್ರೀರಾಮ ಶ್ರೀರಾಮ ಎಂದು ಬರೆದು ತಮ್ಮ ಮನೆಯಲ್ಲಿ ಭದ್ರ ಪಡಿಸಿದ್ದಾರೆ.

ಇನ್ನೂ 14 ಲಕ್ಷ ಬಾರಿ ರಾಮನ ಹೆಸರನ್ನ ಬರೆಯಲು ತಮ್ಮ ಛಲ ಮುಂದುವರೆಸಿರುವ ಪಾಚಾ ಆಂದ್ರಪ್ರದೇಶದ ಪವಿತ್ರ ಭದ್ರಾಚಲಂ ಪುಣ್ಯಕ್ಷೇತ್ರಕ್ಕೆ ಪುಸ್ತಕಗಳನ್ನ ಸಮರ್ಪಿಸಲಿದ್ದಾರೆ. ಜೊತೆಗೆ ದೇವರ ಬಳಿ ಸಕಲ ಸೃಷ್ಟಿಯಲ್ಲಿ ಎಲ್ಲರೂ ನೆಮ್ಮದಿಯಿಂದ ಸಹಬಾಳ್ವೆಯಿಂದ, ದ್ವೇಷ ಅಸೂಯೆ ಹೊರತಾಗಿ ಜೀವಿಸಲಿ ಎಂದು ದೇವರ ಬಳಿ ತಮ್ಮ ಕೋರಿಕೆಯನ್ನ ಅರ್ಪಿಸಲಿದ್ದಾರೆ. ಜೀವನದ ಮಹದಾಸೆಯಾದ ಶ್ರೀರಾಮಕೋಟಿ ಬರೆಯೋ ಕನಸು ಇನ್ನೇನು ಒಂದು ವರ್ಷದಲ್ಲಿ ಪೂರ್ಣವಾಗಲಿದ್ದು, ಅವರ ಶಕ್ತಿ, ಸಾಮರ್ಥ್ಯಕ್ಕೆ ಭಗವಂತ ಮತ್ತಷ್ಟು ಶಕ್ತಿ ತುಂಬಲಿ ಎಂದು ಎಲ್ಲರೂ ಹಾರೈಸೋಣ.

Next Story

RELATED STORIES