Top

ಪಕ್ಷಿ ಪ್ರೇಮಿಗಳ ಸ್ವರ್ಗ "ಮಂಡಗದ್ದೆ" ಪಕ್ಷಿಧಾಮ

ಪಕ್ಷಿ ಪ್ರೇಮಿಗಳ ಸ್ವರ್ಗ ಮಂಡಗದ್ದೆ ಪಕ್ಷಿಧಾಮ
X

ವಿಶೇಷ ವರದಿ : ನವೀನ್ ಪುರದಾಳ್, ಟಿವಿ5 ಶಿವಮೊಗ್ಗ

ಇದು ಪಕ್ಷಿ ಪ್ರೇಮಿಗಳಿಗೆ ಆರಾಧ್ಯ ಸ್ಥಳ. ಅದರಲ್ಲೂ ಮೇದಿಂದ ಅಕ್ಟೋಬರ್ ತಿಂಗಳು ಕಿವಿಗೆ ಇಂಪು, ಕಣ್ಣಿಗೆ ಆನಂದ ಉಣಬಡಿಸುವ ಬಾನಾಡಿಗಳ ದೃಶ್ಯಕಾವ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಶಿವಮೊಗ್ಗದಿಂದ ಸುಮಾರು 30 ಕಿ.ಮೀ. ದೂರದ ತುಂಗೆಯ ತಟದಲ್ಲಿರುವ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲೀಗ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಬಾನಾಡಿಗಳ ಸಾಲು ಕಾಣಸಿಗುತ್ತಿದ್ದು, ನಾನಾ ದೇಶಗಳಿಂದ ವಲಸೆ ಬಂದಿರುವ ಪಕ್ಷಿಗಳು ಗೂಡು ಕಟ್ಟುವ ಕ್ರಿಯೆಯಲ್ಲಿ ತೊಡಗಿವೆ.

ಬೆಳ್ಳಕ್ಕಿ, ಇಗ್ರೇಟ್ಸ್, ಸ್ನೇಕ್ ಬರ್ಡ್ಸ್, ಕಾರ್ಮೊರೆಂಡ್ ಇಲ್ಲೀಗ ಬೀಡು ಬಿಟ್ಟಿದ್ದು, 'ಸೂರು' ನಿರ್ಮಿಸುತ್ತಿವೆ. ಪ್ರತಿ ವರ್ಷ ನಾನಾ ಕಡೆಯಿಂದ ಇಲ್ಲಿಗೆ ಬರುವ ಈ ಬಾನಾಡಿಗಳಿಗೆ ಮಂಡಗದ್ದೆ ಎಂದರೆ ಎಲ್ಲಿಲ್ಲದ ಪ್ರೀತಿ. ಪ್ರಕೃತಿ ಸಹಜ ಸೌಂದರ್ಯ, ತುಂಗೆಯ ನೀರು, ತಂಗಲು 1.14 ಎಕರೆ ಚಿಕ್ಕ ದ್ವೀಪ. ಈ ಕಾನನದ ಮಧ್ಯೆ ತಮ್ಮ ಸಂತಾನ ಕ್ರಿಯೆ ಮುಗಿಸಿ ವಾಪಸಾಗುವ ಮೂರು ತಿಂಗಳ ಅತಿಥಿಗಳ ಸೊಬಗು ಕಣ್ತುಂಬಿಕೊಳ್ಳಲು ನಾನಾ ಕಡೆಗಳಿಂದ ಜನ ತುಂಬಿರುತ್ತಾರೆ.

ಚಿಕ್ಕ ದ್ವೀಪದ ಯಾವುದೇ ಮೂಲೆಗೆ ಕಣ್ಣು ಹಾಯಿಸಿದರೂ ಮರಗಳ ಮೇಲೆ ಬರಿ ಆಕಾಶದಲ್ಲಿ ಗೋಚರಿಸುವ ಚುಕ್ಕೆಯಂತೆ ಬೆಳ್ಳಕ್ಕಿಗಳು ಕಾಣಸಿಗುತ್ತವೆ. ಹೊಳೆಲಕ್ಕಿ ಮರಗಳ ಮೇಲೆ ಗೂಡು ಕಟ್ಟಿ ಅವುಗಳನ್ನು ಸಂರಕ್ಷಿಸುವ ಕೊಕ್ಕರೆ, ನೀರು ಕಾಗೆ ಮತ್ತು ಹಾವಕ್ಕಿ ಸದ್ಯದ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಝುಳು-ಝುಳು ಹರಿಯುವ ತುಂಗಾ ನದಿಯ ನೀರಿನ ಮೇಲ್ಭಾಗದಲ್ಲಿ ಹಾರಾತ್ತ ಆಹಾರಕ್ಕಾಗಿ ಹುಡುಕಾಟ ನಡೆಸುವ ಬಾನಾಡಿಗಳ ಇಂಚರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.

ಮೇ ತಿಂಗಳು ಆರಂಭಗೊಳ್ಳುತಿದ್ದಂತೆ, ಶಿವಮೊಗ್ಗ ನಗರವಷ್ಟೇ ಅಲ್ಲದೇ ರಾಜ್ಯದ ನಾನಾ ಭಾಗಗಳಿಂದ ಪಕ್ಷಿಪ್ರೇಮಿಗಳು ಮಾರುದ್ದ ಲೆನ್ಸ್ ಹಿಡಿದು ಗಂಟೆಗಟ್ಟಲೆ 'ವೀವ್ ಪಾಯಿಂಟ್'ನಲ್ಲಿ ಮುಕ್ಕಾಂ ಹೂಡುವುದು ಸಹಜ. ಹಲವೆಡೆಯಿಂದ ಪಕ್ಷಿ ವೀಕ್ಷಣೆಗೆ ಆಗಮಿಸುತ್ತಿದ್ದು, ಮಂಡಗದ್ದೆಯಲ್ಲಿ ಹವ್ಯಾಸಿ ಛಾಯಾಗ್ರಾಹಕರು 'ಪಕ್ಷಿಗಳ ಕಾವ್ಯರಚನೆ'ಯಲ್ಲಿ ತಲ್ಲೀನರಾಗಿದ್ದಾರೆ. ಕಳೆದರಡು ವರ್ಷಕ್ಕಿಂತ ಉತ್ತಮ ಮಳೆಯಾಗಿದ್ದು, ತುಂಗಾ ನದಿ ತುಂಬಿ ಹರಿಯುತ್ತಿದ್ದು, ಪ್ರವಾಸಿಗರಿಗೆ ಕಣ್ಣಿಗೆ ಹಬ್ಬದೂಡ ಉಣಬಡಿಸಲು ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ.

ದೇಶದ 20 ಪಕ್ಷಿಧಾಮಗಳ ಪೈಕಿ ಮಂಡಗದ್ದೆಯೂ ಮುಖ್ಯವಾಗಿದ್ದು, ಪ್ರತಿವರ್ಷ ಮುಂಗಾರಿನೊಂದಿಗೆ (ಮೇ) ಆಗಮಿಸುವ ಮೇಡನ್ ಈಗ್ರೆಟ್, ಪೈಲ್ಡ್ ಕಿಂಗ್‍ಫಿಶರ್, ವೂಲಿ ನೆಕ್ ಸ್ಟಾಲ್ಕ್, ನೈಟ್ ಹಿರೋನ್, ಓಪನ್-ಬ್ಲಿಲ್ಡ್ ಸ್ಟೋಕ್ರ್ಸ್ ಸೇರಿ ನಾನಾ ಪ್ರಭೇದದ ಹಕ್ಕಿಗಳು ಇಲ್ಲಿಗೆ ವಲಸೆ ಬಂದು ಎಲೆ ಉದುರಿದ 'ಹೊಳೆಲಕ್ಕಿ' ಮರಗಳಲ್ಲಿ ಗೂಡು ಕಟ್ಟಿ ಮೊಟ್ಟೆಗಳಿಟ್ಟು ಮರಿ ಮಾಡುವ ಪ್ರಕ್ರಿಯೆ ಆರಂಭಿಸುತ್ತವೆ.

ಅನಾದಿ ಕಾಲದಿಂದಲೂ ಸೃಷ್ಟಿ ನಿರ್ಮಿತ ಮಂಡಗದ್ದೆಗೆ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ಬರುತ್ತವೆ. ನದಿಯಲ್ಲಿನ ಮೀನು, ಕೀಟ ಹಾಗೂ ಗದ್ದೆಯಲ್ಲಿನ ಧಾನ್ಯ ಮರಿಗಳಿಗೆ ಉಣಬಡಿಸುತ್ತವೆ. ಶಿವಮೊಗ್ಗದಿಂದ ಮಂಡಗದ್ದೆಗೆ ಹೋಗಬೇಕಾದರೆ, ಮಾರ್ಗ ಮಧ್ಯೆ ಗಾಜನೂರು ಜಲಾಶಯ, ತುಂಗಾ ನದಿಯ ತಟದ ಸೊಬಗನ್ನೂ ಸವಿಯಬಹುದು. ನಂತರ, ತುಂಗಾ ಹಿನ್ನೀರಿನ ತಟದಲ್ಲಿರುವ ಸಕ್ರೆಬೈಲು ಆನೆ ಬಿಡಾರ ಸಿಗುತ್ತದೆ. ಗಜ ಸಮೂಹ ವೀಕ್ಷಿಸಿದ (ಬೆಳಗ್ಗೆ 10.30ರವರೆಗೆ) ಬಳಿಕ ಮಂಡಗದ್ದೆಯ ಪಕ್ಷಿಗಳ ಇಂಚರ ಕೇಳಬಹುದು.

Next Story

RELATED STORIES