Top

ಶಿರಸಿಯಲ್ಲಿ ಅಡಿಕೆ ತೋಟಕ್ಕೆ ಕೀಟಗಳ ಕಾಟ

ಶಿರಸಿಯಲ್ಲಿ ಅಡಿಕೆ ತೋಟಕ್ಕೆ ಕೀಟಗಳ ಕಾಟ
X

ಶಿರಸಿ : ರೈತರ ಬದುಕೇ ಹಾಗೆ, ಪ್ರಕೃತಿಯೊಂದಿಗಿನ ಜೂಜಾಟದ ಬದುಕು ಅವರದ್ದು. ಸದಾ ಎದುರಾಗುವ ಒಂದಿಲ್ಲೊಂದು ಸಮಸ್ಯೆಗಳಿಗೆ ಎದೆಯೊಡ್ಡಿ ಬದುಕುವ ಅನಿವಾರ್ಯತೆ ಅವರಿಗೆ. ಕಡಿಮೆ ಅಥವಾ ಅತಿಯಾದ ಮಳೆ, ಬೆಳೆಗಳನ್ನು ಹಾಳುಮಾಡುವ ರೋಗಳು, ರೋಗ ಹರಡುವ ಕೀಟಗಳು ಒಂದಲ್ಲ, ಎರಡಲ್ಲ ರೈತನ ಸಂಕಷ್ಟ. ಇದೇರೀತಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗ್ರಾಮವೊಂದರ ಅಡಕೆ ತೋಟಕ್ಕೆ ಎಂದೂ ಕಾಣದ ಅಪರೂಪದ ಕೀಟಗಳು ಲಗ್ಗೆ ಇಟ್ಟಿದ್ದು ಅದನ್ನು ಕಂಡ ಬೆಳೆಗಾರರು ತೀರಾ ಆತಂಕಕ್ಕೆ ಈಡಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪುಟ್ಟನ ಮನೆ ಗ್ರಾಮದ ಅಡಿಕೆ ತೋಟಗಳಲ್ಲಿ ಎರಡು ದಿನಗಳಿಂದ ಈ ಕೀಟಗಳು ಕಂಡುಬಂದಿದ್ದು, ಇಲ್ಲಿನ ಸುಮಾರು 1 ಎಕರೆ ಪ್ರದೇಶದ ತೋಟದ ಬೆಳೆಗಳ ಮೇಲೆ ಭಾರೀ ಪ್ರಮಾಣದಲ್ಲಿ ಬಂದು ಕುಳಿತಿವೆ. ಹಸಿರು ಎಲೆಗಳ ಮೇಲೆ ಒತ್ತಟ್ಟಿಗೆ ಕುಳಿತ ಇವು ಅಲ್ಲಿಂದ ಕದಲುತ್ತಿಲ್ಲ. ಹತ್ತಿರ ಹೋದರೆ ಕಚ್ಚುವುದಿಲ್ಲವಾದರೂ ಕೆಟ್ಟ ವಾಸನೆ ಬೀರುತ್ತ ಹೋದವರಿಗೆ ಮುತ್ತುತ್ತವೆ. ಮತ್ತೆ ಅದೇ ಗಿಡದ ಮೇಲೆ ಕುಳಿತು ಬಿಡುತ್ತವೆ. ಸಸ್ಯದ ಪತ್ರಹರಿತ್ತನ್ನು ತಿನ್ನಬಹುದು ಎನ್ನುವ ಆತಂಕ ಉಂಟಾಗಿದೆ. ಈ ಬಗ್ಗೆ ತೋಟಗಾರಿಕಾ ಇಲಾಖೆ ಯವರಿಗೆ ಮಾಹಿತಿ ನೀಡಲಾಗಿದೆ. ಇಲಾಖೆಯವರು ನೀಡಿದ ಔಷಧಿಯ ಸಿಂಪಡಿಸುವಿಕೆಯಲ್ಲಿ, ಇಲ್ಲಿನ ರೈತರು ತೊಡಗಿದ್ದಾರೆ.

ನಾವು ಅಡಿಕೆ ತೋಟದ ಸುತ್ತ ಇರುವ ಬೆಟ್ಟಗಳಲ್ಲಿ ದಟ್ಟ ಅರಣ್ಯ ಬೆಳೆಸಿದ್ದೇವೆ. ಆದರೇ ಮಳೆಗಾಲ ಆರಂಭವಾಗುತ್ತಿದ್ದಂತೆ ಲಕ್ಷ, ಲಕ್ಷ ಸಂಖ್ಯೆಯಲ್ಲಿ ಬಂದಿರುವ ಕೀಟಗಳು ಯಾವ ರೀತಿ ಹಾನಿ ಮಾಡುತ್ತವೆಯೋ ಎನ್ನುವ ಭಯ ಉಂಟಾಗಿದೆ. ತಜ್ಞರು ಸೂಚಿಸಿದ ಔಷಧಗಳನ್ನು ಸಿಂಪಡಿಸಿದರೆ ಅವು ತಕ್ಷಣ ಹಾರುವುದರಿಂದ ಅವು ಸಾಯುತ್ತಿಲ್ಲ. ಹೀಗಿದ್ದರೂ ಯಾವ ಅಧಿಕಾರಿಯೂ ಇದುವರೆಗೂ ಸ್ಥಳಕ್ಕೆ ಆಗಮಿಸಿಲ್ಲ. ಕೂಡಲೇ ನಮಗೆ ಈ ಕೀಟ ನಿಯಂತ್ರಣಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಬೆಳೆಗಾರರು ಆಗ್ರಹಿದ್ದಾರೆ.

ಮಲೆನಾಡಿನ ಭಾಗದಲ್ಲಿ ಬಿದಿರು ಹೂ ಬಿಟ್ಟಿದ್ದರಿಂದ ಭಾರೀ ಪ್ರಮಾಣದಲ್ಲಿ ಬಿದಿರು ನಾಶವಾಗಿದೆ. ಬಿದಿರು ಅಕ್ಕಿ ತಿನ್ನುವ ಹುಳುಗಳೇ ತೋಟಕ್ಕೆ ಬಂದಿವಯೇ ? ಅಥವಾ ಇದೇ ಜಾತಿಯ ಬೇರೆ ಹುಳುಗಳೇ ಎನ್ನುವುದನ್ನ ವಿಜ್ಞಾನಿಗಳೇ ಹೇಳಬೇಕು. ಒಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಎಕರೆ ಗಟ್ಟಲೆ ಪ್ರದೇಶವನ್ನು ಜೇನು ನೋಣಗಳು ಮತ್ತುವಂತೆ ಹೆಸರಿಲ್ಲದ ಕೀಟಗಳು ಆವರಿಸಿರುವುದು ಅಡಿಕೆ ಬೆಳೆಗಾರರಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ಕೊಟ್ಟು, ನಿವಾರಿಸುವ ಕಾರ್ಯ ಈಗ ಆಗಬೇಕಿದೆ.

ವರದಿ : ವಿನಾಯಕ್ ಹೆಗಡೆ, ಟಿವಿ5 ಶಿರಸಿ

Next Story

RELATED STORIES