Top

ಮೆಸ್ಸಿ ಸೋತಿದ್ದಕ್ಕೆ ಆತ್ಮಹತ್ಯೆಗೆ ಶರಣಾದನಾ ಅಭಿಮಾನಿ..?

ಮೆಸ್ಸಿ ಸೋತಿದ್ದಕ್ಕೆ ಆತ್ಮಹತ್ಯೆಗೆ ಶರಣಾದನಾ ಅಭಿಮಾನಿ..?
X

ಕೇರಳ: ಈಗ ಎಲ್ಲೆಡೆ ಫೀಫಾ ಫುಟ್‌ಬಾಲ್ ಟೂರ್ನಿಯದ್ದೇ ಹವಾ. ಎಲ್ಲರ ಬಾಯಲ್ಲೂ ತಮ್ಮ ತಮ್ಮ ಫೇವರೇಟ್ ಆಟಗಾರರ ಗುಣಗಾನ. ಆಟದಲ್ಲಿ ತಮ್ಮ ನೆಚ್ಚಿನ ತಂಡ ಸೋತಾಗ, ಅಭಿಮಾನಿಗಳಿಗೆ ನಿರಾಸೆಯಾಗುವುದು ಸಹಜ. ಆದರೆ ನಿರಾಸೆಗೊಂಡು ಆತ್ಮಹತ್ಯೆಗೆ ಶರಣಾಗುವ ಅಭಿಮಾನಿಗಳಿದ್ದಾರೆ ಅಂದರೆ ನೀವು ನಂಬಲೇಬೇಕು.

ಹೌದು, ಕೇರಳದ ಕೊಟ್ಟಾಯಮ್‌ನಲ್ಲಿ ದೀನು ಅಲೆಕ್ಸ್ ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಈತ ಅರ್ಜೆಂಟೀನಾ ತಂಡದ ಆಟಗಾರ ಮೆಸ್ಸಿಯ ಅಪ್ಪಟ ಅಭಿಮಾನಿಯಾಗಿದ್ದು, ನಿನ್ನೆ ಫೀಫಾ ಫುಟ್‌ಬಾಲ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಸೋತ ಕಾರಣ, ಹತಾಶೆಗೊಂಡಿದ್ದ ದೀನು ಡೆತ್‌ನೋಟ್ ಬರೆದಿಟ್ಟು, ಕಾಣೆಯಾಗಿದ್ದಾನೆ. ಆದರೆ ಡೆತ್‌ ನೋಟ್‌ನಲ್ಲಿ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾನೆ. ಇನ್ನು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು, ಈತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಪೊಲೀಸರು ಈತ ಮನೆಯ ಸಮೀಪದಲ್ಲಿರುವ ಮೀನಾಚಿಲ್ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಿದ್ದಾರೆ.

30 ವರ್ಷ ವಯಸ್ಸಿನ ದೀನು ಕೇರಳದ ಕೊಟ್ಟಾಯಮ್‌ನ ಅರುಮನೂರ್ ಗ್ರಾಮದವನು. ಈತ ಮೆಸ್ಸಿಯ ಅಪ್ಪಟ ಅಭಿಮಾನಿಯಾಗಿದ್ದು, ತನ್ನ ರೂಮ್‌ ತುಂಬ ಮೆಸ್ಸಿಯ ಫೋಟೋವನ್ನು ಹಾಕಿಕೊಂಡಿದ್ದ. ಅಲ್ಲದೇ ತನ್ನ ಬುಕ್‌ವೊಂದರಲ್ಲಿ 'ಮೆಸ್ಸಿ ನನ್ನ ಜೀವನ ನಿನಗಾಗಿ ಮುಡಿಪಾಗಿಟ್ಟಿದ್ದೇನೆ. ನೀನು ಫೀಫಾ ಪಂದ್ಯದಲ್ಲಿ ಕಪ್‌ ಹಿಡಿದು ಸಂತಸಪಡುವುದನ್ನ ಕಣ್ತುಂಬಿಕೊಳ್ಳುವುದಕ್ಕೆ ಕಾಯುತ್ತಿದ್ದೇನೆ' ಎಂದು ಬರೆದಿದ್ದ. ಆದ್ರೆ ನಿನ್ನೆ ಅರ್ಜೆಂಟೀನಾ ತಂಡ ಕ್ರೊಯೆಷಿಯಾ ತಂಡದ ಜೊತೆ ಆಟದಲ್ಲಿ ಸೋತ ಕಾರಣ, ಹತಾಶನಾದ ದೀನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಇನ್ನು ದೀನು ಪ್ರೈವೇಟ್ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ಫುಟ್‌ಬಾಲ್ ಪಂದ್ಯ ಶುರುವಾಗುವುದಕ್ಕೂ ಮುನ್ನ, ಈತ ತನ್ನ ಸಹೋದ್ಯೋಗಿಗೆ ಈ ಬಾರಿ ಫೀಫಾದಲ್ಲಿ ಅರ್ಜೆಂಟೀನಾ ತಂಡ ಗೆಲ್ಲುತ್ತದೆ. ತನ್ನ ನೆಚ್ಚಿನ ಆಟಗಾರ ಮೆಸ್ಸಿ ಕಪ್ ಹಿಡಿದು ಮಿಂಚಲಿದ್ದಾರೆ ಎಂದಿದ್ದ.ಅಲ್ಲದೇ ಮನೆಗೆ ಹೋಗುವಾಗ ಅರ್ಜೆಂಟೀನಾ ಪಂದ್ಯವನ್ನು ಪ್ರೊತ್ಸಾಹಿಸುವ ಸಲುವಾಗಿ ಅರ್ಜೆಂಟೀನಾ ತಂಡದ ಟೀಶರ್ಟ್‌ನ್ನು ಖರೀದಿಸಿದ್ದ. ಇನ್ನು ಈತ ತನ್ನ ತಂದೆ ತಾಯಿಯೊಂದಿಗೆ ರಾತ್ರಿ 11.30ರವರೆಗೆ ಪಂದ್ಯ ವೀಕ್ಷಿಸುತ್ತಿದ್ದ. ತದನಂತರ ಬೆಳಗಿನ ಜಾವ 1.30ಕ್ಕೆ ಪಂದ್ಯ ಮುಗಿದ ನಂತರ ಈತನ ಗೆಳೆಯರು ಈತನಿಗೆ ಕರೆ ಮಾಡಿದ್ದಾರೆ.ಆದರೆ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಈತನ ರೂಮ್‌ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ.

ಈ ಬಗ್ಗೆ ವಿಷಯ ತಿಳಿದ ದೀನುವಿನ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದ ಪೊಲೀಸರು, ಸದ್ಯ ದೀನುವಿಗಾಗಿ ಹುಡುಕಾಟ ನಡೆಸಿದ್ದಾರೆ.

Next Story

RELATED STORIES