ಇ ಗವರ್ನನ್ಸ್ ಸಮಸ್ಯೆ : ನೌಕರರ ಪರಿಷ್ಕೃತ ವೇತನ ನೀಡವಲ್ಲಿ ವಿಳಂಬ
ಬೆಂಗಳೂರು : ಆರನೇ ವೇತನ ಆಯೋಗದ ಶಿಫಾರಸ್ಸು, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ, ರಾಜ್ಯ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಚುನಾವಣಾ ನೀತಿ ಸಂಹಿತೆಯ ನಡುವೆಯೂ ರಾಜ್ಯ ಸರ್ಕಾರಿ ನೌಕರರ ಸಂಬಂಳ ಹೆಚ್ಚಳಕ್ಕೆ ತಮ್ಮ ಅಭ್ಯಂತರ ಏನೂ ಇಲ್ಲ ಎಂದು ಹೇಳಿ, ಹೆಚ್ಚಳಕ್ಕೆ ಅನುಮತಿ ನೀಡಿತ್ತು.
ವೇತನ ಹೆಚ್ಚಳಕ್ಕೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವೂ, ಚುನಾವಣೆ ಮುಗಿದು, ಎರಡು ತಿಂಗಳು ಕಳೆಯುತ್ತಾ ಬಂದರೂ, ರಾಜ್ಯ ಸರ್ಕಾರಿ ನೌಕರರಿಗೆ ಇದುವರೆಗೆ ಹೆಚ್ಚುವರಿ ವೇತನ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಡಳಿತ ಮತ್ತು ಸಿಬ್ಬಂದಿ ಇಲಾಖೆಯ ಅಧಿಕಾರಿಗಳು, ಇ ಗವರ್ನನ್ಸ್ ವಿಭಾಗದ ಎಚ್.ಆರ್.ಎಂ.ಎಸ್ ಸಿಬ್ಬಂದಿಯ ವಿಳಂಬ ನೀತಿಯಿಂದಾಗಿ ಹೀಗೆ ಉಂಟಾಗಿದೆ. ಹೀಗಾಗಿ ಇದುವರೆಗೆ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ನೀಡಲಾಗಿಲ್ಲ ಎಂದು ತಿಳಿಸಿದೆ.
ಅಂದಹಾಗೇ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಆಯೋಗ ರಚನೆ ಮಾಡಿತ್ತು. ಶೇ.30ರಷ್ಟು ಸರ್ಕಾರಿ ನೌಕರರ ಸಂಬಳ ಹೆಚ್ಚಳಕ್ಕೂ ನಿರ್ಧಾರ ಕೈಗೊಂಡಿತ್ತು. ಆದ್ರೆ, ಡಿಪಿಎಆರ್ನ ಇ ಗವರ್ನನ್ಸ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನೌಕರರ ವೇತನ ಲೆಕ್ಕಾಚಾರ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳ ನೌಕರರ ವೇತನ ಇನ್ನೂ ಪಾವತಿಯಾಗಿಲ್ಲ. ಈ ತಿಂಗಳ 28ರಷ್ಟೊತ್ತಿಗೆ ಸಂಬಳ ಪಾವತಿಯಾಗುವ ನಿರೀಕ್ಷೆ ಇದೆ. ವೇತನ ಹೆಚ್ಚಳ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದೆ.