Top

ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ : ಪ್ರಭಾವಿ ಸಚಿವರ ಮಧ್ಯೆ ಪೈಪೋಟಿ

ಬೆಂಗಳೂರು : ಮೈತ್ರಿ ಸರ್ಕಾರಕ್ಕೆ ಒಂದಲ್ಲಾ ಒಂದು ತಲೆ ನೋವುಗಳು ಬರುತ್ತಲೇ ಇವೆ. ಸಚಿವ ಸ್ಥಾನ, ಖಾತೆ ಹಂಚಿಕೆ ಬಿಕ್ಕಟ್ಟುಗಳ ಬಳಿಕ ಈಗ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಸವಾಲು ಸರ್ಕಾರದ ಮುಂದೆ ನಿಂತಿದೆ. ತವರು ಜಿಲ್ಲೆಗಳಿಗೇ ಉಸ್ತುವಾರಿಗಳಾಗಲು ಪ್ರಭಾವಿ ಸಚಿವರುಗಳ ಮಧ್ಯೆಯೇ ಪೈಪೋಟಿ ನಡೆಯುತ್ತಿರೋದು ಮುಖ್ಯಮಂತ್ರಿಗಳ ನಿದ್ದೆಕೆಡಿಸಿದೆ.

ಜಿಲ್ಲಾ ಉಸ್ತುವಾರಿಗಾಗಿ ಬಿಗ್ ಫೈಟ್

ಸಂಪುಟದಲ್ಲಿ ಸ್ಥಾನ ಪಡೆದುಕೊಂಡ ಬಳಿಕ ಸಚಿವರುಗಳು ಈಗ ತಮ್ಮ ತವರು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಳ್ಳಲು ಪೈಪೋಟಿ ಆರಂಭಿಸಿದ್ದಾರೆ. ಪ್ರಭಾವಿ ಸಚಿವರುಗಳು ತಾವು ಪ್ರತಿನಿಧಿಸುವ ಜಿಲ್ಲೆಗಳ ಉಸ್ತುವಾರಿಗಳಾಗಲು ತಮ್ಮ ಸಂಪುಟ ಸಹೋದ್ಯೋಗಿ ಸಚಿವರೊಂದಿಗೆ ತೆರೆಮರೆಯಲ್ಲಿ ಜಟಾಪಟಿಗೆ ಇಳಿದಿದ್ದಾರೆ. ಸಚಿವ ಸ್ಥಾನ ಮತ್ತು ಖಾತೆ ಹಂಚಿಕೆ ಬಿಕ್ಕಟ್ಟು ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ

ಸದ್ಯಕ್ಕೆ ಮುಗಿಯಲ್ಲಾ ಜಿಲ್ಲಾ ಉಸ್ತುವಾರಿ ಗ್ರಹಣ

ರಾಜಧಾನಿ ಬೆಂಗಳೂರು ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಜಿ. ಪರಮೇಶ್ವರ್ ಭಾರಿ ಆಸಕ್ತಿ ತೋರಿಸಿದ್ದಾರೆ. ಜೊತೆಗೆ ತುಮಕೂರು ಜಿಲ್ಲೆಯ ಮೇಲೂ ತಮ್ಮ ಹಿಡಿತ ಕಳೆದುಕೊಳ್ಳದಿರಲು ಪರಮೇಶ್ವರ್ ನಿರ್ಧರಿಸಿದ್ದಾರೆ. ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಲು ಸಚಿವ ಕೆಜೆ ಜಾರ್ಜ್ ಬಯಸಿದ್ದಾರೆ ಎನ್ನಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಮೇಲೆ ಸಚಿವರಾದ ಜಿಟಿ ದೇವೇಗೌಡ ಮತ್ತು ಸಾರ ಮಹೇಶ್ ಇಬ್ಬರೂ ಕಣ್ಣು ಹಾಕಿದ್ದಾರೆ.

ರಾಮನಗರ ಜಿಲ್ಲಾ ಉಸ್ತುವಾರಿ ಹೊಣೆಗೂ ಬಾರಿ ಪೈಪೋಟಿ

ಜೆಡಿಎಸ್ ಭದ್ರಕೋಟೆ ರಾಮನಗರ ಜಿಲ್ಲಾ ಉಸ್ತುವಾರಿ ಹೊಣೆ ಜೆಡಿಎಸ್ ಗೆ ಉಳಿಸಿಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಆಸಕ್ತರಾಗಿದ್ದಾರೆ. ಕಾರಣ ರಾಮನಗರ ಸಿ ಎಂ ರಾಜೀನಾಮೆಯಿಂದ ಮತ್ತೆ ಉಪಚುನಾವಣೆ ನಡೆಯಲಿದೆ. ಈ ವೇಳೆ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ ತನ್ನ ಮುನ್ನಡೆ ಉಳಿಸಿಕೊಳ್ಳಲು ಜೆಡಿಎಸ್ ಚಿಂತಿಸಿದೆ. ಸಚಿವ ಡಿ ಕೆ ಶಿವಕುಮಾರ್ ಸಹ ತಮ್ಮ ಸಹೋದರ ಸಂಸದ ಆಗಿರುವ ಕ್ಷೇತ್ರ ಹಿಡಿತ ಬಲಗೊಳಿಸಲು ಉಸ್ತುವಾರಿ ಆಕಾಂಕ್ಷಿಯಾಗಿದ್ದಾರೆ.

ಬಜೆಟ್‌ಗೂ ಮುನ್ನಾ ಮುಗಿಯುತ್ತಾ ಉಸ್ತುವಾರಿ ಕಿರಿಕಿರಿ.?

ಸಚಿವರಾಗಿ 20 ದಿನಗಳಾದರೂ ಕೂಡ ಇನ್ನು ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಆಗಿಲ್ಲ. ಈ ವಿಳಂಬದಿಂದಾಗಿ ಜಿಲ್ಲಾಡಳಿತ ಚುರುಕು ಪಡೆದುಕೊಂಡಿಲ್ಲ. ಮಳೆ ಹನಿ, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗಳು ಕೂಡ ತೆವಳುತ್ತಾ ಸಾಗ್ತಿದೆ. ಬಜೆಟ್ ಅಧಿವೇಶನಕ್ಕೂ ಮುನ್ಮ ಜಿಲ್ಲಾ ಉಸ್ತುವಾರಿ ನೇಮಕ ಆಗುವ ಸಾಧ್ಯತೆ ಇದೆ. ಆದರೆ ಇತ್ತ ಜಿಲ್ಲೆಯ ಆಗು ಹೋಗುಗಳ ಬಗ್ಗೆ ಅಧಿಕಾರಿಗಳ ಮೇಲೆ ಸಚಿವರಿಗೆ ಹಿಡಿತ ಇಲ್ಲದೇ, ಸಾರ್ವಜನಿಕರು ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.

ವರದಿ : ಕಿರಣ.ಆರ್, ಟಿವಿ5 ಬೆಂಗಳೂರು

Next Story

RELATED STORIES