Top

ದ್ವೇಷದ ರಾಜಕಾರಣಕ್ಕೆ ಬಲಿಯಾದ "ನೀರು ಸರಬರಾಜು"

ದ್ವೇಷದ ರಾಜಕಾರಣಕ್ಕೆ ಬಲಿಯಾದ ನೀರು ಸರಬರಾಜು
X

ದಾವಣಗೆರೆ : ಮಳೆನಿಂತ್ರೂ ಮಳೆ ಹಳ್ಳಿ ನಿಲ್ಲೋಲ್ಲಾ ಎಂಬುವಂತಾಗಿದೆ ದಾವಣಗೆರೆ ರಾಜಕಾರಣ. ವಿಧಾನಸಭಾ ಚುನಾವಣೆ ಮುಗಿದು ತಿಂಗಳಾದ್ರೂ ಚುನಾವಣಾ ಇನ್ನೂ ಜೀವಂತವಾಗಿದೆ. ಚುನಾವಣೆಯಲ್ಲಿ ಗೆದ್ದು ಗದ್ದಿಗೆ ಹಿಡಿದವರು ನಗರದ ಅಭಿವೃದ್ಧಿಗಾಗೀ ಓಡಾಡಿದರೆ. ಇತ್ತ ಸೋತ ಅಭ್ಯರ್ಥಿಯ ಬೆಂಬಲಿಗರು ಮತದಾರರ ಮೇಲೆ ರಿವೇಂಜ್ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಹಾಗೀದ್ದರೇ ಸೋತ ಅಭ್ಯರ್ಥಿಗಳು ಬೆಂಬಲಿಗರು ಮಾಡುತ್ತಿರುವ ದ್ವೇಷದ ರಾಜಕಾರಣವಾದರೂ ಏನು ಅಂತಿರಾ ಈ ಸ್ಟೋರಿ ಓದಿ.

ಬೀದಿ ಯುದ್ದಕ್ಕೂ, ನಲಿಗಳ ಮುಂದೆ ಸರತಿ ಸಾಲಿನಲ್ಲಿರುವ ಕೊಡಗಳು. ನಳದಲ್ಲೇ ನೀರು ಬಾರದೇ ನೀರು ನೋಡದ ನಲ್ಲಿಗಳು. ನೀರು ಬಿಡದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿರುವ ಜನರು ದಾವಣಗೆರೆ 15 ಕ್ಕೂ ಹೆಚ್ಚು ವಾರ್ಡಗಳಲ್ಲಿ ಪ್ರತಿನಿತ್ಯ ಕಂಡು ಬರುವ ದೃಶ್ಯಗಳು. ಚುನಾವಣಾ ಪೂರ್ವದಲ್ಲಿ ದಾವಣಗೆರೆ ನಗರದಲ್ಲಿ ವಾರಕ್ಕೊಮ್ಮ ಕುಡಿಯಲು ನೀರು ಸರಬರಾಜು ಮಾಡ್ತಾ ಇದ್ದ ಮಹಾನಗರ ಪಾಲಿಕೆ ಸದಸ್ಯರು, ಈಗ ಹತ್ತು ದಿನ ಆದರೂ ನೀರು ಬಿಡುತ್ತಿಲ್ವಂತೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಮುಗಿದರೂ ಅದರ ಕಾವು ಜೋರಾಗಿಯೇ ಇದೆ. ಅದಕ್ಕೆ ಕಾರಣ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬೆಂಬಲಿತ ಕಾರ್ಪರೇಟರ್‌ಗಳು.

ದಾವಣಗೆರೆ ನಗರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮದೇ ಆದ ಛಾಪು ಹೊಂದಿದವರು. ಇಷ್ಟಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಎಸ್.ಎಸ್.ಮಲ್ಲಿಕಾರ್ಜುನ್ ಕೈಹಿಡಿಯಲಿಲ್ಲ. ಮಲ್ಲಿಕಾರ್ಜುನ್ ಸೋಲಿಗೆ ಕಾರ್ಪೊರೇಟರ್‌ಗಳೇ ಕಾರಣ ಅಂತ ಇಡೀ ದಾವಣಗೆರೆ ಮಾತಾಡಿಕೊಳ್ತಾ ಇತ್ತು. ಮಹಾನಗರ ಪಾಲಿಕೆ 41 ವಾರ್ಡ್ ಗಳ ಪೈಕಿ 39 ಕಾಂಗ್ರೆಸ್, 1 ಬಿಜೆಪಿ, 1 ಕಮ್ಯುನಿಸ್ಟ್ ಪಕ್ಷದ ಸದಸ್ಯರಿದ್ದಾರೆ. 39 ಸದಸ್ಯರಿದ್ರೂ ಗೆಲ್ಲಿಸಿಕೊಳ್ಳಲು ಆಗಲಿಲ್ಲಾ ಅಂತ ಮಲ್ಲಿಕಾರ್ಜುನ್ ಅಭಿಮಾನಿಗಳು ಕಾರ್ಪೊರೇಟರ್‌ಗಳ‌‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ಗಳಲ್ಲಿ ಎಲ್ಲೆಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಿದ್ದಿವೆಯೋ ಅಲ್ಲಿ ನೀರು ಸರಬರಾಜಲ್ಲಿ ವ್ಯತ್ಯಾಸ ಮಾಡುವ ಮೂಲಕ ರಿವೇಂಜ್ ತೀರಿಸಿಕೊಳ್ತಾ ಇದ್ದಾರೆ. ನೀರಿನ ರಾಜಕೀಯ ಮಾಡ್ತಾ ಇದ್ದಾರೆ ಅಂತ ಸ್ವತಃ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಗಂಭೀರ ಆರೋಪ ಮಾಡಿದ್ದಾರೆ.

ದಾವಣಗೆರೆ ನಗರದ ಜನತೆಗೆ ಒಂದು ದಿನಕ್ಕೆ 80 ದಶಲಕ್ಷ ಲೀಟರ್ ನೀರು(MLD) ಬೇಕು. ಈಗ 50 ದಶಲಕ್ಷ ಲೀಟರ್ ಮಾತ್ರ ಸರಬರಾಜು ಆಗ್ತಾ ಇರೋದು. ಇನ್ನೂ 30 MLD ಕೊರತೆ ಇರೋ ಕಾರಣದಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿದೆ. ಜನರೂ ಕೂಡ ನೀರಿಗಾಗೀ ಕಾದು ಕಾದು ಸುಸ್ತಾಗೀ ಇದೀಗ ಜನ ಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಆರಂಭದಲ್ಲಿ ಐದು ದಿನಕ್ಕೆ ಒಮ್ಮೆ ನೀರು ಬಿಡುತ್ತಿದ್ದರು. ಆದರೇ ಇದೀಗ 10 ರಿಂದ 15 ದಿನಕ್ಕೆ ಒಂದು ಬಾರೀ ನೀರು ಬಿಡುತ್ತಿದ್ದಾರೆ. ಅದು ಬಿಜೆಪಿ ಲೀಡ್ ಕೊಟ್ಟ ವಾರ್ಡಗಳಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸುವ ಜನರು, ನೀರಿನಲ್ಲಿ ರಾಜಕೀಯ ಬಿಟ್ಟು ಸಮರ್ಪಕ ನೀರು ಪೂರೈಕೆ ಮಾಡಲಿ ಎಂದು ಮನವಿ ಮಾಡಿದ್ದಾರೆ.

ಒಟ್ಟಾರೆ‌ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೋಲಿನ ಬಗ್ಗೆ ಲೆಕ್ಕಾಚಾರ ಮಾಡುತ್ತಿದ್ದಾರೆ. ಇತ್ತ ಮಲ್ಲಿಕಾರ್ಜುನ್ ಅವರನ್ನು ಮೆಚ್ಚಿಸಿ ಕೊಳ್ಳಲು ಕಾರ್ಪೊರೇಟರ್‌ಗಳು ಮತದಾರರ ಮೇಲೆ ರಿವೇಂಜ್ ತೀರಿಸಿಕೊಳ್ತಾ ಇದ್ದಾರೆ ಅನ್ನೋ ಮಾತು ಇಡೀ ದಾವಣಗೆರೆ ನಗರದಾದ್ಯಂತ ಹರಿದಾಡುತ್ತಿದೆ. ಅದೇನೇ ಇರಲಿ ರಾಜಕಾರಣಕ್ಕಾಗಿ ರಾಜಕೀಯ ಮಾಡಿಕೊಳ್ಳಲಿ, ಜನರಿಗೆ ಮೂಲ ಸೌಕರ್ಯ ಕಲ್ಪಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES