Top

16 ಕಳೆದ್ರೂ ಪ್ರಾರಂಭವಾಗದ ಬಸ್ ನಿಲ್ದಾಣ : ನಿತ್ಯ ಬಸ್‌ಗಾಗಿ ದಾರಿಯಲ್ಲಿ ಕಾಯುವ ಜನ

16 ಕಳೆದ್ರೂ ಪ್ರಾರಂಭವಾಗದ ಬಸ್ ನಿಲ್ದಾಣ : ನಿತ್ಯ ಬಸ್‌ಗಾಗಿ ದಾರಿಯಲ್ಲಿ ಕಾಯುವ ಜನ
X

ಚಿಕ್ಕೋಡಿ : ಬಸ್ ನಿಲ್ದಾನದಲ್ಲಿ ಎಲ್ಲೆಂದರಲ್ಲಿ ಕಸ ತುಂಬಿರುವುದು, ಕಿಟಕಿ ಗ್ಲಾಸುಗಳು ಒಡೆದು ಹೋಗಿರುವುದು, ಸರಾಯಿ ಕುಡಿದು ಬಾಟಲ್ಗಳನ್ನು ಒಗೆದಿರುವುದು ಇವೆಲ್ಲ ದೃಶ್ಯಗಳು ಕಂಡು ಬಂದಿರುವುದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ರಾಜ್ಯ ಹೆದ್ದಾರಿ ಬಳಿ ಬಸ್‌ ನಿಲ್ದಾನದಲ್ಲಿ ಕಂಡು ಬರುವ ದೃಶ್ಯಗಳು.

ಬಸ್ ನಿಲ್ದಾಣ ಸರಿಯಾಗಿ ದುರಸ್ಥಿ ಇಲ್ಲದೇ ಇರುವುದರಿಂದ‌ ಕುಡುಕರ, ಇಸ್ಪೀಟ್, ಹಾಗೂ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿದೆ. ಇದೇ ಸ್ಥಿತಿಯಲ್ಲಿ ಸುಮಾರು 16 ವರ್ಷಗಳು ಕಳೆಯುತ್ತ ಬಂದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಬಸ್ ಮಾತ್ರ ಬಸ್ ನಿಲ್ದಾಣಕ್ಕೆ ಬರದೇ ರಾಜ್ಯ ಹೆದ್ದಾರಿ ಮೂಲಕ ಹಾಗೇ ಹಾಯ್ದು ಹೋಗುತ್ತಿದ್ದು ತುಂಬಾ ತೊಂದರೆಯಾಗುತ್ತದೆ ಎಂದು ಇಲ್ಲಿನ ಗ್ರಾಮಸ್ಥರ ಅಳಲು.

ಅಂದಹಾಗೇ, ಮಾಂಜರಿ ಗ್ರಾಮಕ್ಕೆ ಒಂದೂ ಬಸ್ ನಿಲ್ದಾಣ ಇಲ್ಲದೇ ಇರುವುದರಿಂದ ಅಂದಿನ ಶಾಸಕರಾಗಿದ್ದ ಪ್ರಕಾಶ ಹುಕ್ಕೇರಿ ಅವರು 14 ಲಕ್ಷ ಅನುದಾನದಲ್ಲಿ 2002 ಸೆಪ್ಟೆಂಬರ್ 20ರಂದು ನಿರ್ಮಾಣ ಮಾಡಿದ್ದರು. ಇದನ್ನು ಅಂದಿನ ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವಿ ಎಸ್ ಕೌಜಲಗಿ, ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಸೋಹ್ರಾದಿ, ಶಾಸಕ ಪ್ರಕಾಶ ಹುಕ್ಕೇರಿ ಸೇರಿದಂತೆ ಅನೇಕ ಗಣ್ಯರು ಈ ಬಸ್ ‌ನಿಲ್ದಾನವನ್ನು ಉದ್ಘಾಟಿಸಿದರು. ಇನ್ನೇನು ಬಸ್ ನಿಲ್ದಾಣ ಉದ್ಘಾಟನೆಯಾಯಿತು. ಬಸ್‌ಗಳು ನಮ್ಮ ಗ್ರಾಮಕ್ಕೆ ಬರ್ತಾವೆ ಅಂತ ಗ್ರಾಮಸ್ಥರು ಖಷಿಯಲ್ಲಿದ್ದರು. ಆದರೇ 16 ವರ್ಷ ಕಳೆದರು, ಇನ್ನೂ ಬಸ್ ಬಂದಿಲ್ಲ.

ಬಸ್‌ಗಳು ಮಾಂಜರಿ ಗ್ರಾಮದ ಒಂದೂ ಬಸ್ ನಿಲ್ದಾಣಕ್ಕೆ ಬಾರದೇ, ರಾಜ್ಯ ಹೆದ್ದಾರಿ ಹಿಡಿದು ಸಾಗುತ್ತವೆ. ಇಂತಹ ಬಸ್‌ಗಳನ್ನು ಹಿಡಿಯೋಕೆ, ರಾಜ್ಯ ಹೆದ್ದಾರಿಯಲ್ಲೇ ಜನರು ಮಳೆಗಾಲ, ಬೇಸಿಗೆ ಎನ್ನದೇ ರಸ್ತೆ ಮೇಲೆ ನಿಂತು ಬಸ್ ಬರುವ ದಾರಿ ಕಾಯುತ್ತಲೇ‌ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳೇ ಕಾರಣ. ಇಲ್ಲವಾಗಿದ್ದರೇ ಬಸ್‌ ನಿಲ್ದಾಣಕ್ಕೆ, ಬಸ್‌ ಬಂದಿದ್ದರೇ, ದಾರಿಯಲ್ಲೇ ಕಾಯುವ ನಮ್ಮ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬಸ್ ನಿಲ್ದಾಣದ ಕುರಿತು ಅಲ್ಲಿನ ಜನರು ಅನೇಕ ಹೋರಾಟಗಳನ್ನು ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ. ಸುಸಜ್ಜಿತ ಕಟ್ಟಡವಾದ ಬಸ್‌ ನಿಲ್ದಾಣವನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಚಗೊಳಿಸ ನಿಲ್ದಾಣಕ್ಕೆ ಬಸ್ ಬರುವ ಹಾಗೇ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಜನರು ಮುಂದಾಗಲಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹಾಳು ಕೊಂಪೆಯಾಗಿರುವ ಬಸ್ ನಿಲ್ದಾಣ‌ ದುರಸ್ತಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಿ ಎಂಬುವುದು ಎಲ್ಲರ‌ ಆಶಯ.

ವರದಿ : ರವೀಂದ್ರ ಚೌಗುಲೆ, ಟಿವಿ5 ಚಿಕ್ಕೋಡಿ

Next Story

RELATED STORIES