Top

ನನ್ನ ಹತ್ತಿರನೂ ಸಾಕಷ್ಟು ಡೈರಿಗಳಿವೆ: ಸಮಯ ಬಂದಾಗ ಬಿಡುಗಡೆ: ಡಿಕೆಶಿ ಬಾಂಬ್​

ನನ್ನ ಹತ್ತಿರನೂ ಸಾಕಷ್ಟು ಡೈರಿಗಳಿವೆ: ಸಮಯ ಬಂದಾಗ ಬಿಡುಗಡೆ: ಡಿಕೆಶಿ ಬಾಂಬ್​
X

ಬೆಂಗಳೂರು: ನನ್ಮ ಹತ್ರನೂ ಕೆಲವರ ಡೈರಿಗಳಿವೆ. ಯಾರ್ಯಾರಿಗೆ ಏನೇನು ಬರೆದಿದೆ ಅನ್ನೋದು ಗೊತ್ತಿದೆ. ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಯಾವುದಕ್ಕೂ ಹೆದರುವುದಿಲ್ಲ. ಸಮಯ ಬಂದಾಗ ನನ್ನ ಬಳಿ ಇರುವ ಡೈರಿಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಬಾಂಬ್ ಸಿಡಿಸಿದ್ದಾರೆ.

ಐಟಿ ಇಲಾಖೆ ಹವಾಲಾ ಸೇರಿದಂತೆ ನಾನಾ ಕಾರಣಗಳಿಗೆ ತನ್ನನ್ನು ಬಂಧಿಸಲು ಯತ್ನಿಸುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ನಾನು ಕಾನೂನಿಗೆ ಬೆಲೆ ಕೊಡುವವನು. ಪ್ರಕರಣ ನ್ಯಾಯಲಯದಲ್ಲಿ ಇರುವುದರಿಂದ ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಇಲ್ಲವಾಗಿದ್ದರೆ ನಾನೇನು ಅನ್ನೋದನ್ನ ತೋರಿಸುತ್ತಿದ್ದೆ ಎಂದು ಗುಡುಗಿದ್ದಾರೆ.

ಈಗ ಒಂದು ಐಟಿ ಕೇಸ್ ದಾಖಲಿಸಿದ್ದಾರೆ ಎಂಬ ವಿಷಯ ತಿಳಿದಿದೆ. ಆದರೆ ಸಮನ್ಸ್ ಇನ್ನೂ ಯಾವುದು ಬಂದಿಲ್ಲ. ಯಾರೋ ಏನೋ ಸ್ಟೇಟ್ ಮೆಂಟ್ ಕೊಟ್ರು ಅಂತ ನನ್ನನ್ನ ಸಿಕ್ಕಿಸೋಕೆ ಆಗಲ್ಲ. ಇದೆಲ್ಲಾ ಯಾಕೆ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಯಾಕೆ? ಬೇರೆಯವರ ಮನೆಯಲ್ಲಿ ಡೈರಿ,ಲೆಕ್ಕ ಇಟ್ಟಿದ್ದು ಗೊತ್ತಿಲ್ಲವೇ? ಅಂತವರ ಮೇಲೆ ಯಾಕೆ ದಾಳಿ ಮಾಡಲ್ಲ ಎಂದು ಡಿಕೆಶಿ ಪ್ರಶ್ನಿಸಿದರು.

ಈಗ ವಿಚಾರಣೆಗೆ ಹಾಜರಾಗಿ ಅಂತ ನೊಟೀಸ್ ಬಂದಿದೆ. ಆದರೆ ಯಾವುದೇ ಸಮನ್ಸ್ ಬಂದಿಲ್ಲ, ನಿಮಗೆ ಏನು ಅನ್ನಿಸುತ್ತೆ ಅದನ್ನ ನೀವು ಮಾಡಿ. ಅವರಿಗೆ ಏನು ಅನ್ನಿಸುತ್ತೆ ಅವರು ಮಾಡ್ತಾರೆ. ಕೊನೆಗೆ, ದೇಶ ಕಾನೂನು ಎಲ್ಲವೂ ಇದೆ. ಕಾನೂನು ಮೂಲಕ ಹೋರಾಟ ಮಾಡೋದು ಗೊತ್ತಿದೆ ಎಂದು ಅವರು ಹೇಳಿದರು.

ನನಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ನನ್ನ ಸಂಬಂಧಿಕರು, ಆಪ್ತರಿಗೂ ಕಿರುಕುಳ ಕೊಡುತ್ತಿದ್ದಾರೆ. ಇದೆಲ್ಲವೂ ಯಾಕೆ ಮಾಡ್ತಿದ್ದಾರೆ ಅಂತ ಗೊತ್ತಿದೆ. ನಾನು ಈಗ ಮಾತನಾಡಲ್ಲ. ಸಮಯ ಬಂದಾಗ ಮಾತನಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಪುನರುಚ್ಚರಿಸಿದರು.

Next Story

RELATED STORIES