Top

ಹೆಗ್ಗಣ ಎಟಿಎಂ ದುಡ್ಡು ತಿಂದಿದ್ದು ಬೆಂಗಳೂರಿನಲ್ಲಿ ಅಲ್ಲ! ಮತ್ತೆಲ್ಲಿ ಗೊತ್ತಾ?

ಹೆಗ್ಗಣ ಎಟಿಎಂ ದುಡ್ಡು ತಿಂದಿದ್ದು ಬೆಂಗಳೂರಿನಲ್ಲಿ ಅಲ್ಲ! ಮತ್ತೆಲ್ಲಿ ಗೊತ್ತಾ?
X

ಬೆಂಗಳೂರಿನ ಮತ್ತಿಕೆರೆಯ ಎಟಿಎಂನಲ್ಲಿದ್ದ ಲಕ್ಷಾಂತರ ರೂ. ಹಣವನ್ನು ಹೆಗ್ಗಣಗಳು ತಿಂದಿವೆ ಎಂದು ಹರಡಿದ್ದ ಸುದ್ದಿ ಸುಳ್ಳು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದರು. ಆದರೆ ಇದರ ಬೆನ್ನು ಹತ್ತಿ ಹೋದ ಟಿವಿ5ಗೆ ನಿಜಾಂಶ ತಿಳಿದ ಬಂದಿದೆ. ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ ಅಲ್ಲ ಬದಲಾಗಿ ಅಸ್ಸಾಂನಲ್ಲಿ!!

ಹೌದು, ಅಸ್ಸಾಂನ ಟಿನ್​ಸುಕಿಯಾ ಜಿಲ್ಲೆಯ ಎಟಿಎಂನಲ್ಲಿದ್ದ ಹಣವನ್ನು ಹೆಗ್ಗಣಗಳು ಹರಿದು ಮುಕ್ಕಿವೆ. ಎಷ್ಟು ಅಂದರೆ 12.38 ಲಕ್ಷ ರೂ. ಮೌಲ್ಯದ ನೋಟುಗಳನ್ನು ಚಿಂದಿ ಮಾಡಿ ಪರಾಕ್ರಮ ಮೆರೆದಿವೆ. ಮೊದಲೇ ಜನ ಎಟಿಎಂನಲ್ಲಿ ದುಡ್ಡು ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದರೆ ಈ ಹೆಗ್ಗಣಗಳ ಹಾವಳಿಯಿಂದ ಈ ಅನಾಹುತ ಸಂಭವಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 500 ಮತ್ತು 2000 ರೂ. ಮುಖಬೆಲೆಯ ಈ ನೋಟುಗಳನ್ನು ಹೆಗ್ಗಣಗಳು ಪೀಸ್​ ಪೀಸ್ ಮಾಡಿವೆ. ಮೇ 19ರಂದು ಗುವಾಹಟಿ ಮೂಲದ ಕಂಪನಿ 29.48 ಲಕ್ಷ ರೂ.ವನ್ನು ಎಟಿಎಂನಲ್ಲಿ ಇರಿಸಿತ್ತು. ಆದರೆ ಮಾರನೇದಿನವೇ ದುಷ್ಕರ್ಮಿಗಳು ಇದನ್ನು ತೆರೆಯಲು ವಿಫಲ ಯತ್ನ ನಡೆಸಿದ್ದರಿಂದ ಜೂನ್ 11ರವರೆಗೆ ಈ ಎಟಿಂಎ ಕೆಲಸ ಮಾಡುತ್ತಿರಲಿಲ್ಲ.

ಅಧಿಕಾರಿಗಳು ಎಟಿಎಂ ಅನ್ನು ತೆರೆದಾಗ 12.38 ಲಕ್ಷ ಮೌಲ್ಯದ ನೋಟುಗಳು ಹರಿದು ಬಿದ್ದಿವೆ. ವಿಶೇಷ ಅಂದರೆ ಬಹುತೇಕ ಎಲ್ಲಾ 2000 ಮತ್ತು 500 ರೂ. ನೋಟುಗಳಾಗಿವೆ. ಆದರೆ ಹೆಗ್ಗಣಗಳು ಈ ಎಟಿಎಂನೊಳಗೆ ಹೇಗೆ ಪ್ರವೇಸಿದವು ಎಂಬುದು ಅಧಿಕಾರಿಗಳಿಗೆ ತಲೆನೋವು ತಂದಿದೆ.

ಅಸ್ಸಾಂನಲ್ಲಿ ಆದ ಈ ಘಟನೆಯನ್ನು ಕಿಡಿಗೇಡಿಗಳು ಬೆಂಗಳೂರಿನ ಮತ್ತಿಕೆರೆಯಲ್ಲಿ ಆಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದರು. ಇದರಿಂದ ಮತ್ತಿಕೆರೆ ಪೊಲೀಸರಿಗೆ ಮಾಧ್ಯಮಗಳು ಸೇರಿದಂತೆ ಸುಮಾರು 45 ಕರೆಗಳು ಬಂದಿದ್ದು, ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಉತ್ತರ ನೀಡಿ ಸಾಕಾಗಿ ಹೋಗಿದ್ದರು.

Next Story

RELATED STORIES