Top

ಮಂಡ್ಯ ಲೋಕಸಭಾ ಉಪಚುನಾವಣೆ : ಹೆಚ್ಚಾಯ್ತು ಜೆಡಿಎಸ್ ಆಕಾಂಕ್ಷಿತರ ಪಟ್ಟಿ

ಮಂಡ್ಯ ಲೋಕಸಭಾ ಉಪಚುನಾವಣೆ : ಹೆಚ್ಚಾಯ್ತು ಜೆಡಿಎಸ್ ಆಕಾಂಕ್ಷಿತರ ಪಟ್ಟಿ
X

ಮಂಡ್ಯ : ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ರಾಜೀನಾಮೆಯಿಂದ ತೆರವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಶೀಘ್ರವೇ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಇತ್ತ ಉಪ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್ ನಲ್ಲಿ ಟಿಕೆಟ್ ಆಕಾಂಕ್ಷಿತರ ಸಂಖ್ಯೆ ಹೆಚ್ಚಾಗ್ತಿದ್ರೆ, ಕಾಂಗ್ರೆಸ್‌ನಲ್ಲಿ ಯಾರೂ ಸಹ ಚುನಾವಣೆಗೆ ಸ್ಪರ್ಧಿಸಲು ಉತ್ಸಾಹವೇ ತೋರ್ತಿಲ್ಲ. ಬಿಜೆಪಿ ಮಾತ್ರ ಒಂದು ವೇಳೆ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಾದ್ರೆ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕೆಂಬ ನಿರ್ಧಾರಕ್ಕೆ ಬಂದಿದೆ.

ಸಚಿವ ಸಿ ಎಸ್ ಪುಟ್ಟರಾಜು ರಾಜೀನಾಮೆ, ಶೀಘ್ರವೇ ಉಪಚುನಾವಣೆ

ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಸಿ.ಎಸ್.ಪುಟ್ಟರಾಜು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆಯಿಂದ ಸ್ಪರ್ಧಿಸಿ ವಿಜಯಶಾಲಿಯಾದ್ರು. ಈ ನಿಟ್ಟಿನಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಹ ಕೊಟ್ರು. ಲೋಕಸಭೆಗೆ ಉಪಚುನಾವಣೆ ನಡೆದರೆ ಮತ್ತೆ ಮಾಜಿ ಸಂಸದೆ ರಮ್ಯಾ ಕಾಂಗ್ರೆಸ್ ನಿಂದ ಸ್ಪರ್ಧಿಸಬಹುದೆಂಬ ಹಿನ್ನಲೆಯಲ್ಲಿ ಜೆಡಿಎಸ್ ಸಹ ಮಹಿಳಾ ಅಭ್ಯರ್ಥಿಯನ್ನೇ ಅಖಾಡಕ್ಕಿಳಿಸಲು ತೀರ್ಮಾನಿಸಿತ್ತು.

ದಿನೇ ದಿನೇ ಹೆಚ್ಚಾಗುತ್ತಿದೆ ಜೆಡಿಎಸ್‌ ಆಕಾಂಕ್ಷಿತರ ಪಟ್ಟಿ

ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಯಾಗಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಲಕ್ಷ್ಮಿ ಅಶ್ವಿನ್ ಗೌಡರನ್ನ ಕೆಲ್ಸಕ್ಕೆ ರಾಜೀನಾಮೆ ಕೊಡಿಸಿ ಚುನಾವಣೆಗೆ ಸಿದ್ದವಾಗುವಂತೆ ಸೂಚಿಸಿದ್ದ ಜೆಡಿಎಸ್ ವರಿಷ್ಠರು ಇದೀಗ ಲಕ್ಷ್ಮಿಗೆ ಟಿಕೆಟ್ ಕೊಡುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಹಾಗಿದ್ರೂ ಸಹ ಲಕ್ಷ್ಮಿ ಅಶ್ವಿನ್ ಗೌಡ ಜೆಡಿಎಸ್ ಟಿಕೆಟ್ ಪಡೆಯಲು ಕಸರತ್ತು ಆರಂಭಿಸಿದ್ದು, ಜಿಲ್ಲಾ ಪ್ರವಾಸ ಮಾಡ್ತಿದ್ದಾರೆ.

ಲಕ್ಷ್ಮಿ ಜೊತೆಗೆ ಲೋಕಸಭೆ ಪ್ರವೇಶಿಸಬೇಕೆಂಬ ಪಣ ತೊಟ್ಟಿರುವ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಸಹ ಬೆಂಗಳೂರಿನಿಂದ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರಕ್ಕೆ ಕೊಟ್ಟಿದ್ದ ಟಿಕೆಟ್ ತ್ಯಜಿಸಿ ಮಂಡ್ಯದತ್ತ ಮುಖ ಮಾಡಲು ತೀರ್ಮಾನಿಸಿದ್ದಾರೆ. ಇತ್ತ ಮಾಜಿ ಸಚಿವ ಎಸ್.ಡಿ.ಜಯರಾಂ ಪುತ್ರ ಅಶೋಕ್ ಜಯರಾಂ ಸಹ ಎಂಪಿ ಟಿಕೆಟ್ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಒಂದು ವೇಳೆ ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಾದ್ರೆ ಕಾಂಗ್ರೆಸ್ ಜೊತೆಗೆ ಮುನಿಸಿಕೊಂಡು ಅಂತರ ಕಾಯ್ದುಕೊಂಡಿರುವ ಮಾಜಿ ಸಚಿವ ಅಂಬರೀಷ್‌ರನ್ನ ಜೆಡಿಎಸ್‌ಗೆ ಕರೆತಂದು ಮತ್ತೆ ಸಂಸತ್‌ಗೆ ಕಳುಹಿಸಬೇಕೆಂಬ ಲೆಕ್ಕಾಚಾರ ಹಾಕಿದ್ದಾರೆ ದೊಡ್ಡಗೌಡ್ರು ಮತ್ತು ಸಿಎಂ ಎಚ್ಡಿಕೆ.

ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಯಾರಲ್ಲೂ ಉತ್ಸಾಹವಿಲ್ಲ

ಇದು ಜೆಡಿಎಸ್‌ನ ಕತೆಯಾದ್ರೆ ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮುಂದುವರೆಸೋದಾಗಿ ಹೇಳಿದೆ. ಹೀಗಾಗಿ ಉಪಚುನಾವಣೆಗೆ ಅಭ್ಯರ್ಥಿ ಹಾಕೋದು ಬಹುತೇಕ ಅನುಮಾನ. ಆದ್ರೆ ಕಾರ್ಯಕರ್ತರು ಮಾತ್ರ ಇದಕ್ಕೆ ಒಪ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲದ ಕಾರಣ, ಜೆಡಿಎಸ್ ಹಾಗೂ ಕಾಂಗ್ರೆಸ್ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು. ನಮ್ಮ ಅಸ್ತಿತ್ವ ಉಳಿವಿಗೆ ಉಪಚುನಾವಣೆಯಲ್ಲಾದ್ರೂ ಅಭ್ಯರ್ಥಿ ಹಾಕಲೇಬೇಕೆಂಬ ಒತ್ತಡವನ್ನ ರಾಜ್ಯ ನಾಯಕರಿಗೆ ಏರುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ನಲ್ಲಿ ಮಾತ್ರ ಯಾರು ಸಹ ಟಿಕೆಟ್ ಗಾಗಿ ಉತ್ಸಾಹವೇ ತೋರ್ತಿಲ್ಲ.

ಸ್ವತ: ಮಾಜಿ ಸಂಸದೆ ರಮ್ಯಾ ಅವರೇ ಜಿಲ್ಲೆಯಿಂದ ಸಂಪೂರ್ಣ ದೂರ ಉಳಿದಿದ್ದು, ಎಂ.ಎಲ್.ಎ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೂ ಬಂದಿರಲಿಲ್ಲ. ಅವರ ಸ್ಪರ್ಧೆ ಈ ಬಾರಿ ಅನುಮಾನ. ಮಂಡ್ಯ ಜಿಲ್ಲೆಯ ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರದಲ್ಲೂ ಹೀನಾಯ ಸೋಲುಂಡಿರುವ ಕಾಂಗ್ರೆಸ್ ಒಂದು ವೇಳೆ ಅಭ್ಯರ್ಥಿಯನ್ನ ಹಾಕಬೇಕಾದ ಪರಿಸ್ಥಿತಿ ಬಂದ್ರೆ ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿಯನ್ನೋ, ಅಥವಾ ಕೇಂದ್ರದ ಮಾಜಿ ಸಚಿವ ಹಾಗೂ ಅಲ್ಪ ಸಂಖ್ಯಾತ ನಾಯಕ ರೆಹಮಾನ್ ಖಾನ್ ಅಖಾಡಕ್ಕಿಳಿದರೂ ಅಚ್ಚರಿ ಇಲ್ಲ.

ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳನ್ನು ನೋಡಿ ಬಿಜೆಪಿ ಅಭ್ಯರ್ಥಿ ಕಣಕ್ಕೆ

ಇನ್ನು ಬಿಜೆಪಿ ಸಹ ಈ ಬಾರಿ ಕಾಂಗ್ರೆಸ್ - ಜೆಡಿಎಸ್ ಮಂಡ್ಯದಲ್ಲಿ ಒಗ್ಗಟ್ಟಾಗುವ ಸಾಧ್ಯತೆ ಇದ್ದು, ಒಗ್ಗಟ್ಟಾದ್ರೆ ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಆಗ ಕಾಂಗ್ರೆಸ್ ನ ಸಾಂಪ್ರದಾಯಕ ಮತಗಳು ಜೆಡಿಎಸ್‌ಗೆ ಹೋಗದ ಕಾರಣ ನಾವು ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಿದರೆ ಗೆಲ್ಲುವ ಕನಸು ಕಾಣಬಹುದೆಂಬ ಯೋಚನೆಯಲ್ಲಿದೆ. ಈ ನಿಟ್ಟಿನಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವ ಮಂಡ್ಯ ಜಿಲ್ಲೆಯಲ್ಲಿ ಪ್ರಭಾವಿ ಒಕ್ಕಲಿಗ ನಾಯಕನನ್ನೇ ಈ ಬಾರಿ ಕಣಕ್ಕಿಳಿಸಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಈ ನಿಟ್ಟಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಜಿಲ್ಲೆಗೆ ಬರಬಹುದು. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರ ಮಟ್ಟದಲ್ಲಿ ಚರ್ಚೆ ಕೂಡ ನಡೆಯುತ್ತಿದೆ.

ಒಟ್ಟಾರೆ ಕಳೆದ ಬಾರಿಯ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ರಾಜ್ಯದ ಗಮನ ಸೆಳೆದಿತ್ತು. ಹಾಗೆಯೇ ಈ ಬಾರಿಯ ಉಪಚುನಾವಣೆ ಸಹ ರಾಜ್ಯದ ಗಮನ ಸೆಳೆಯುತ್ತಾ ಎಂಬುದನ್ನು ತಿಳಿಯಲು ಚುನಾವಣೆ ಘೋಷಣೆಯಾಗಿ ಅಭ್ಯರ್ಥಿಗಳು ಅಂತಿಮವಾಗಬೇಕಿದೆ. ಈ ಮೂಲಕ ಮಂಡ್ಯ ಲೋಕಸಭಾ ಉಪಚುನಾವಣಾ ಕಣ, ಮತ್ತೆ ರಂಗಪಡೇಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

ವರದಿ : ಎಂ.ಕೆ.ಮೋಹನ್ ರಾಜ್, ಟಿವಿ5 ಮಂಡ್ಯ

Next Story

RELATED STORIES