ಜಮ್ಮು-ಕಾಶ್ಮೀರ ಸರಕಾರ ಪತನ: ಮುಫ್ತಿ ಜೊತೆ ಮೈತ್ರಿ ಕಡಿದುಕೊಂಡ ಬಿಜೆಪಿ

ಜಮ್ಮು- ಕಾಶ್ಮೀರದಲ್ಲಿನ ಪಿಡಿಪಿ ಜೊತೆಗಿನ ಮೈತ್ರಿಯನ್ನು ಬಿಜೆಪಿ ಮುರಿದುಕೊಂಡಿದೆ. ಈ ಮೂಲಕ ಜಮ್ಮು-ಕಾಶ್ಮೀರದಲ್ಲಿನ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರಕಾರ ಪತನಗೊಂಡಿದೆ.

ಬಿಜೆಪಿ ದಿಢೀರನೆ ಬೆಂಬಲ ವಾಪಸ್ ಪಡೆಯುವ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುವ ಸಾಧ್ಯತೆ ಇದೆ. ಜಮ್ಮು-ಕಾಶ್ಮೀರದಲ್ಲಿ ಒಟ್ಟು 87 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ 25 ಮತ್ತು ಪಿಡಿಪಿ 28 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 12 ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 15 ಸ್ಥಾನಗಳನ್ನು ಪಡೆದುಕೊಂಡಿವೆ.

ಮಂಗಳವಾರ ಬಿಜೆಪಿ ಪಕ್ಷ ಈ ದಿಢೀರ್ ನಿರ್ಧಾರ ಕೈಗೊಂಡಿದ್ದು, ಸರಕಾರದ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇನೆ ಹಾಗೂ ಸ್ಥಳೀಯರ ನಡುವೆ ಘರ್ಷಣೆ ಹೆಚ್ಚಾಗಿದ್ದು ಒಂದು ಕಡೆಯಾದರೆ, ಭಯೋತ್ಪಾದನೆ ಹೆಚ್ಚಳ ಮುಂತಾದ ಕಾರಣಗಳನ್ನು ಬಿಜೆಪಿ ನೀಡಿದೆ.

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರ ಸಾಕಷ್ಟು ಅಭಿವೃದ್ಧಿ ಕ್ರಮ ಕೈಗೊಳ್ಳನ್ನು ಕೈಗೊಂಡಿದ್ದರೂ ಅದನ್ನು ಸಮರ್ಪಕವಾಗಿ ಜಾರಿಗೆ ತಾರದ ಹಿನ್ನೆಲೆಯಲ್ಲಿ ಬೆಂಬಲ ವಾಪಸ್ ಪಡೆಯಲಾಗಿದೆ ಎಂದು ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.