ಚಿಕ್ಕಣ್ಣ ನಟನೆಯ ಡಬಲ್ ಇಂಜಿನ್ಗೆ ಶುರುವಾಗಿದೆ ಕಾಟ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಟಿವಿ5
[story-lines]
ಸಿನಿಮಾಗಳು ಥಿಯೇಟ್ರಿಕಲ್ ರಿಲೀಸ್ಗೂ ಮೊದಲೇ ಯೂಟ್ಯೂಬ್ನಲ್ಲಿ ಹರಿದಾಡ್ತಿರುತ್ತೆ. ಅರೇ ಅಫಿಶಿಯಲ್ ರಿಲೀಸ್ಗೂ ಮುನ್ನ ಸಿನಿಮಾ ಒಂದು ಅಂತರ್ಜಾಲದಲ್ಲಿ ಕಾಣಸಿಗೋದು ಹೇಗೆ ಸಾಧ್ಯ ಅಂತ ಹುಬ್ಬೇರಿಸ್ಬೇಡಿ. ಇತ್ತೀಚೆಗೆ ಅದೊಂದು ದಂಧೆಯಾಗಿ ಪರಿಣಮಿಸಿದೆ.
ಇದು ಅಕ್ಷರಶಃ ನಿಜ. ಇದ್ರಿಂದ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡೋರಿಗೆ ದೊಡ್ಡ ಹೊಡೆತ ಬೀಳ್ತಿದೆ. ಸಾಗರದಷ್ಟು ಕನಸು ಹೊತ್ತು ಬಂದವ್ರ ಕನಸುಗಳು ನುಚ್ಚಿ ನೂರಾಗ್ತಿವೆ. ಇಷ್ಟಕ್ಕೂ ಅಂತರ್ಜಾಲದಲ್ಲಿ ಈ ಕೃತ್ಯ ಮಾಡ್ತಿರೋರು ಯಾರು..? ಇವ್ರ ಬಗ್ಗೆ ಸೈಬರ್ ಕ್ರೈಂ ಕ್ರಮ ಕೈಗೊಳ್ಳದಿರೋದು ಯಾಕೆ..? ಹೀಗೆ ಯೋಚಿಸ್ತಾ ಹೋದ್ರೆ, ಪ್ರಶ್ನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತೆ.
ಸದ್ಯ ಡಬಲ್ ಇಂಜಿನ್ ಅನ್ನೋ ಸಿನಿಮಾಗೆ ಯೂಟ್ಯೂಬ್ ರಿಲೀಸ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೆ ಚಿಕ್ಕಣ್ಣ ಮತ್ತು ಸುಮನ್ ರಂಗನಾಥ್ ಅಭಿನಯ ಡಬಲ್ ಇಂಜಿನ್ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಸಿನಿಮಾ ಸೆನ್ಸಾರ್ ಅಂಗಳಕ್ಕೆ ಹೋಗಿ ಅಫಿಶಿಯಲ್ ರಿಲೀಸ್ ಆಗೋಕ್ಕೂ ಮುನ್ನವೇ ಯೂಟ್ಯೂಬ್ನಲ್ಲಿ ಲಭ್ಯವಾಗ್ತಿದೆ.
ಅಂದಹಾಗೆ ಯೂಟ್ಯೂಬ್ನಲ್ಲಿ ಡಬಲ್ ಇಂಜಿನ್ ಫುಲ್ ಮೂವಿ ಅಂತ ಹೊಡೆದ್ರೆ ಬರೋದು, ಡಬಲ್ ಇಂಜಿನ್ ಅಲ್ಲ. ಬದಲಿಗೆ ಬಾಂಬೆ ಮಿಠಾಯಿ. ವಿಶೇಷ ಡಬಲ್ ಇಂಜಿನ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಚಂದ್ರಮೋಹನ್ ಅನ್ನೋ ನಿರ್ದೇಶಕರೇ ಬಾಂಬೆ ಮಿಠಾಯಿ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲಿಯೂ ಇದೇ ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ.
ರಿಲೀಸ್ ಆಗದೇ ಇರೋ ಸಿನಿಮಾದ ಹಾದಿ ತಪ್ಪಿಸೋ ಕಾರ್ಯ ನಡೆಯುತ್ತಿದೆ ಅಂತ ನಿರ್ದೇಶಕ ಚಂದ್ರಮೋಹನ್ ಅಂಡ್ ಟೀಂ ಸೈಬರ್ ಕ್ರೈಂ ಮೊರೆ ಹೋಗಿದ್ದಾರೆ. ಯೂಟ್ಯೂಬ್ನಲ್ಲಿ 31 ಸಾವಿರ ವೀವ್ಸ್ ಪಡೆದಿರೋದು ನಿರ್ದೇಶಕ ಸೇರಿದಂತೆ ನಿರ್ಮಾಪಕರಲ್ಲೂ ದೊಡ್ಡ ಆತಂಕ ಸೃಷ್ಠಿಸಿದೆ.
ವೀವ್ಸ್ಗಾಗಿ ವಾಮಮಾರ್ಗ ಹಿಡಿದು ಹಣ ಸಂಪಾದಿಸೋರಿಗೆ ಸೈಬರ್ ಕ್ರೈಂ ಬ್ರೇಕ್ ಹಾಕಲೇಬೇಕಿದೆ. ಅದೂ ಅಲ್ಲದೆ, ಯಾರು ಬೇಕಾದ್ರೂ ಯೂಟ್ಯೂಬ್ ಚಾನೆಲ್ ಮಾಡಿಕೊಳ್ಳುವಂತಹ ಆಪ್ಷನ್ ಯೂಟ್ಯೂಬ್ನಲ್ಲಿದೆ. ಹಾಗಾಗಿ ಸಹಸ್ರಾರು ಅನ್ ಅಫಿಶಿಯಲ್ ಯೂಟ್ಯೂಬ್ ಚಾನೆಲ್ಗಳು ತಲೆ ಎತ್ತಿವೆ. ಇದನ್ನೆಲ್ಲಾ ಕಂಡು ಅಫಿಶಿಯಲ್ ಯೂಟ್ಯೂಬ್ ಮಂದಿ ಕೈಕಟ್ಟಿ ಕೂತಿರೋದಾದ್ರು ಯಾಕೆ ಅನ್ನೋ ಸಂದೇಹ ಕೂಡ ಮೂಡ್ತಿದೆ.
ಇನ್ನು ಈ ರೀತಿಯ ಸಮಸ್ಯೆ ಎದುರಾಗ್ತಿರೋದು ಇದೇ ಮೊದಲಲ್ಲ. ಕನ್ನಡದ ಬಹುತೇಕ ಸಿನಿಮಾಗಳಿಗೆ ಇದೇ ತಲೆನೋವಾಗಿ ಪರಿಣಮಿಸಿದೆ. ಸಿನಿಮಾ ಖರೀದಿ ಮಾಡಿದ ಕಂಪನಿಗಳು ಕೂಡ ಇದರಿಂದ ನಷ್ಟ ಅನುಭವಿಸಿದಂತಾಗ್ತಿದೆ. ಅದೇನೇ ಇರಲಿ, ಸೈಬರ್ ಕ್ರೈಂ ಈ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕಿ, ತಪ್ಪಿತಸ್ಥರನ್ನ ಶಿಕ್ಷಿಸಿದ್ರೆ, ಮುಂದೆ ಈ ರೀತಿಯ ಪ್ರಕರಣಗಳು ಕಂಡು ಬರೋದಿಲ್ಲ. ಗಾಂಧಿನಗರ ನಿರಾಳವಾಗುತ್ತೆ.