Top

ಬಿಜೆಪಿಗೆ ಸತತ ಹಿನ್ನಡೆ: ಮುರುಳೀಧರ್ ರಾವ್ ವಿರುದ್ಧ ಹೈಕಮಾಂಡ್ ಗರಂ

ಬಿಜೆಪಿಗೆ ಸತತ ಹಿನ್ನಡೆ: ಮುರುಳೀಧರ್ ರಾವ್ ವಿರುದ್ಧ ಹೈಕಮಾಂಡ್ ಗರಂ
X

ಪವನ್ ಕುಮಾರ್

ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ವಿರುದ್ದ ಹೈಕಮಾಂಡ್ ಗರಂ ಆಗಿದೆ. ರಾಜ್ಯದಲ್ಲಿ ಬಿಜೆಪಿ ನಿರಂತರ ರಾಜಕೀಯ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮುರುಳೀಧರ್ ರಾವ್ ಕಾರ್ಯವೈಖರಿ ವಿರುದ್ಧ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ.

[story-lines]

ರಾಜರಾಜೇಶ್ವರಿ ನಗರ ಮತ್ತು ಜಯನಗರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬೆನ್ನಲ್ಲೇ, ಬಿಜೆಪಿ ಹೈಕಮಾಂಡ್​ ರಾಜ್ಯ ಉಸ್ತುವಾರಿ ಮುರಳೀಧರ ರಾವ್​ ವಿರುದ್ಧ ಗರಂ ಆಗಿದ್ದಾರೆ. ಮುರಳೀಧರ ರಾವ್​ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕಮಾಂಡ್​, ಬಿ.ಎಸ್​. ಯಡಿಯೂರಪ್ಪ ಹೇಳಿದ್ದಕ್ಕೆಲ್ಲಾ ತಲೆಯಾಡಿಸುವ ಅಗತ್ಯವಿಲ್ಲ ಎಂದಿದ್ದಾರೆ ಎನ್ನಲಾಗಿದೆ.

ಪಕ್ಷದ ಒಳಗಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಸಿಟ್ಟಿಗೆದ್ದಿರುವ ಹೈಕಮಾಂಡ್​, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್​ ಲಾಲ್​ ಮೂಲಕ ಮುರಳೀಧರ್​ ರಾವ್​ಗೆ ಬುದ್ದಿ ಹೇಳಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ರಾಮ್​ ಲಾಲ್​ ಬುಧವಾರ ರಾವ್​ಗೆ ಕರೆ ಮಾಡಿ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಪಕ್ಷದೊಳಗೆ ಒಬ್ಬೊಬ್ಬರದ್ದು ಒಂದೊಂದು ಬಣವಾಗಿದೆ. ಬಣ ರಾಜಕಾರಣಕ್ಕೆ ಬ್ರೇಕ್​ ಹಾಕಬೇಕಾದ ನೀವು ಯಡಿಯೂರಪ್ಪ ಹೇಳಿದಂತೆ ತಲೆಯಾಡಿಸುತ್ತಿದ್ದೀರಿ ಎಂದಿದ್ದಾರೆ. ಜತೆಗೆ ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಒಗ್ಗಟ್ಟು ಮೂಡಿಸುವತ್ತ ಕೆಲಸ ಮಾಡಬೇಕು ಎಂಬ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾದರೂ ಬಹುಮತ ಸಾಭೀತುಪಡಿಸಲು ಸಾಧ್ಯವಾಗಲಿಲ್ಲ. ಈಗ ಕೇವಲ ಒಬ್ಬ ನಾಯಕ ಹೇಳಿದಂತೆ ಕೇಳಿದರೆ ಉಳಿದವರಿಗೆ ಬೇಸರವಾಗುತ್ತದೆ ಎಂದು ರಾಮ್​ ಲಾಲ್​ ಹೇಳಿದ್ದಾರೆ ಎನ್ನಲಾಗಿದೆ.ಹಿರಿಯ ನಾಕರಲ್ಲಿನ ಅಸಮಾಧಾನದಿಂದ ಜಯನಗರದಲ್ಲೂ ಸೋಲು ಕಂಡಿದ್ದೇವೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂಬ ಅಭಿಪ್ರಾಯವನ್ನು ರಾಮ್​ ಲಾಲ್​ ಪಟ್ಟಿದ್ದಾರೆ ಎನ್ನಲಾಗಿದೆ. ಜತೆಗೆ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗಲೂ ಎಲ್ಲ ಮುಖಂಡರ ಅಭಿಪ್ರಾಯಗಳನ್ನು ಕೇಳಿ, ಒಬ್ಬರ ನಿರ್ಧಾರದಿಂದ ಇತರರಿಗೆ ಇರುಸುಮುರುಸಾಗುತ್ತದೆ ಎಂದಿದ್ದಾರೆ.

ಹೈಕಮಾಂಡ್​ ಮುರಳೀಧರ್​ ರಾವ್​ ಮೇಲೆ ಕೋಪ ಮಾಡಿಕೊಂಡಿರುವುದು ನಿಜವಾದರೂ, ಸಂಪೂರ್ಣ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎನ್ನಲಾಗಿದೆ. ಈ ಸಂಬಂಧ ಮಾತನಾಡಿರುವ ರಾಮ್​ ಲಾಲ್​, ನಿಮ್ಮ ಮೇಲಿನ ನಂಬಿಕೆ ಕಳೆದು ಹೋಗಿಲ್ಲ. ಲೋಕ ಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು. ಅದಕ್ಕಾಗಿ ನೀವು ಪಕ್ಷದ ನಾಯಕರಲ್ಲಿ ಒಗ್ಗಟ್ಟು ಮೂಡಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೈಕಮಾಂಡ್​ ಕರೆ ಬಂದ ಬೆನ್ನಲ್ಲೇ ಪಕ್ಷದೊಳಗಿನ ಬಿಕ್ಕಟ್ಟನ್ನು ಶಮನ ಮಾಡಲು ಮುರಳೀಧರ್​ ರಾವ್​ ಪ್ರಯತ್ನ ಆರಂಭಿಸಲಿದ್ದಾರೆ ಎನ್ನಲಾಗಿದೆ.

Next Story

RELATED STORIES