Top

ಬಲೂನ್​ ಮೂಲಕ ವೈ-ಫೈ ಸಂಪರ್ಕ: ಉತ್ತರಾಖಂಡ್​ನಲ್ಲಿ ವಿಶೇಷ ಯೋಜನೆ

ಬಲೂನ್​ ಮೂಲಕ ವೈ-ಫೈ ಸಂಪರ್ಕ:  ಉತ್ತರಾಖಂಡ್​ನಲ್ಲಿ ವಿಶೇಷ ಯೋಜನೆ
X

ಡೆಹ್ರಾಡೂನ್‌: ಬೃಹದಾಕಾರದ ಬಲೂನ್​ಗಳ ಮೂಲಕ ಗುಡ್ಡಗಾಡು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೈ-ಫೈ ಸಂಪರ್ಕ ಒದಗಿಸಲು ಉತ್ತರಾಖಂಡ್​ ಸರಕಾರ ಯೋಜಿಸಿದೆ.

[story-lines]

ಗುಡ್ಡಗಾಡು ಹಾಗೂ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ವೈಫೈ ಸೇವೆ ಒದಗಿಸಲು ಬಿಸಿ ಬಲೂನ್‌ (ಏರೋಸ್ಟಾಟ್ಸ್‌) ಬಳಸಲು ನಿರ್ಧರಿಸಿದೆ. ಪ್ರಾಯೋಗಿಕ ಹಂತದ ಈ ಯೋಜನೆಗೆ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಚಾಲನೆ ನೀಡಿದ್ದಾರೆ.

ಹೈಡ್ರೋಜನ್‌ ತುಂಬಿದ ಬಲೂನ್‌ನಲ್ಲಿ ಕ್ಯಾಮೆರಾ, ಇಂಟರ್‌ನೆಟ್‌ ವೈಫೈ ಮೋಡೆಮ್‌ ಹಾಗೂ ಟ್ರಾನ್ಸ್‌ ರಿಸೀವರ್‌ ಉಪಕರಣಗಳನ್ನು ಅಳವಡಿಸಿ, ವೈಫೈ ಸೇವೆ ನೀಡಲು ಯೋಜನೆ ರೂಪಿಸಲಾಗಿದೆ. ಏರೋಸ್ಟಾಟ್ಸ್‌ ವೈಫೈನ ಒಂದು ಯುನಿಟ್‌ಗೆ 50 ಲಕ್ಷ ರೂ. ವೆಚ್ಚವಾಗಲಿದೆ. ಮುಂಬೈನ ಐಐಟಿಯು ಹೊಸ ಯೋಜನೆಯನ್ನು ರೂಪಿಸಿದೆ.

6 ಮೀಟರ್‌ ಉದ್ದದ ಬಲೂನ್‌ 14 ದಿನಗಳವರೆಗೆ ಗಾಳಿಯಲ್ಲಿ ತೇಲಾಡುತ್ತದೆ. ಇದರಿಂದ 7.5 ಕಿ.ಮೀ. ವ್ಯಾಪ್ತಿಯಲ್ಲಿ ಇಂಟರ್ನೆಟ್‌ ಸೇವೆ ಒದಗಿಸಲು ಸಾಧ್ಯವಾಗಲಿದ್ದು, 5 ಎಂಬಿಪಿಎಸ್ ಸ್ಪೀಡ್‌ನಲ್ಲಿ ಬ್ರೌಸಿಂಗ್‌ ಮಾಡಬಹುದಾಗಿದೆ.

ಆರಂಭದಲ್ಲಿ ಉಚಿತ ವೈಫೈ ಸೇವೆ ಒದಗಿಸಲು ತೀರ್ಮಾನಿಸಲಾಗಿದ್ದು, ಪಾಸ್‌ವರ್ಡ್‌ ಇಲ್ಲದೆ, ವೈಫೈ ಲಾಗ್‌ ಇನ್‌ ಆಗಬಹುದು ಎಂದು ಯೋಜನೆಯ ಮುಖ್ಯಸ್ಥ ಹಾಗೂ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ (ಐಟಿಡಿಎ) ನಿರ್ದೇಶಕ ಅಮಿತ್‌ ಸಿನ್ಹಾ ತಿಳಿಸಿದ್ದಾರೆ.

ಹಿಮಾಲಯ ರಾಜ್ಯಗಳಲ್ಲಿನ 16,870 ಗ್ರಾಮಗಳ ಪೈಕಿ 680 ಗ್ರಾಮಗಳಿಗೆ ಮೊಬೈಲ್‌ ಸಂಪರ್ಕ ಕಷ್ಟಕರವಾಗಿದೆ. ಏರೋಸ್ಟಾಟ್‌ ಯೋಜನೆ ಜಾರಿಯಿಂದ ಗ್ರಾಮೀಣ ಭಾಗಕ್ಕೆ ಇಂಟರ್ನೆಟ್‌ ಸಂಪರ್ಕ ಸಾಧ್ಯವಾಗಲಿದೆ ಎಂದು ಉತ್ತರಾಖಂಡ್‌ ಸಿಎಂ ರಾವತ್‌ ತಿಳಿಸಿದ್ದಾರೆ.

ಕೇದಾರನಾಥದಲ್ಲಿ ಮೇಘ ಸ್ಫೋಟಗೊಂಡ ವೇಳೆ, ಪ್ರವಾಸಿಗರು ಮೊಬೈಲ್‌ ಸಂಪರ್ಕ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೊಸ ಯೋಜನೆಯಿಂದ ಸಂಪರ್ಕ ಸುಲಭವಾಗಲಿದೆ. ತುರ್ತು ಸಂದರ್ಭಗಳಲ್ಲೂ ಇವು ಹೆಚ್ಚು ಪ್ರಯೋಜನವಾಗಲಿದೆ ಎಂದು ರಾವತ್‌ ಹೇಳಿದ್ದಾರೆ.

Next Story

RELATED STORIES