Top

ಗಾನ ಗಾರುಡಿಗ ಎಸ್.ಪಿ.ಬಿಗೆ 72ನೇ ಜನ್ಮದಿನದ ಸಂಭ್ರಮ 

ಗಾನ ಗಾರುಡಿಗ ಎಸ್.ಪಿ.ಬಿಗೆ 72ನೇ ಜನ್ಮದಿನದ ಸಂಭ್ರಮ 
X

[story-lines]

ಭಾರತೀಯ ಚಿತ್ರರಂಗ ಕಂಡ ಮೇರು ಗಾಯಕ , ಪದ್ಮಭೂಷಣ ಎಸ್.ಪಿ.ಬಾಲಸುಬ್ರಮಣ್ಯಂರವರಿಗೆ 72ನೇ ಜನ್ಮದಿನದ ಸವಿಸಂಭ್ರಮ. ಬರೋಬ್ಬರಿ 50 ವರ್ಷಗಳಿಂದ ತಮ್ಮ ಗಾನ ಸೇವೆಯನ್ನು 16ಕ್ಕೂ ಹೆಚ್ಚು ಭಾಷೆಯಲ್ಲಿ 40 ಸಾವಿರಕ್ಕೂ ಅಧಿಕ ಅದ್ಭುತ ಗೀತೆಗಳ ಮೂಲಕ ಸಲ್ಲಿಸುತ್ತಿರುವವರು ಎಸ್.ಪಿ.ಬಿ.

ಆಗೊಂದು ಯುಗ, ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಗಾನ ಸಾರ್ವಭೌಮರು. ಬಾಲು ಬಂದರು ನೋಡಿ ಈ ಎಲ್ಲ ಭಾಷೆಗಳಿಗೂ ಸಾರ್ವಭೌಮರಾಗಿ ಬಿಟ್ಟರು.

ಒಮ್ಮೆ ಅವರು ತಮಿಳು ತೆಲುಗಿನಲ್ಲಿ ಒಂದೇ ದಿನದಲ್ಲಿ 19 ಗೀತೆಗಳನ್ನು ಧ್ವನಿಮುದ್ರಿಸಿದ್ದರು, ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಧ್ವನಿಮುದ್ರಿಸಿದ್ದರು, ತಮಿಳಿನಲ್ಲೂ ಒಂದೇ ದಿನ 17 ಗೀತೆಗಳನ್ನು ಮತ್ತು ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳಿಗೆ ಜೀವತುಂಬಿದವರು. ಇದು ಎಸ್ ಪಿ ಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆಗೆ ಇದ್ದ ಜೆಸ್ಟ್ ಎಗ್ಸಾಂಪಲ್.

1946 ಜೂನ್ 4ರಂದು ಎಸ್​.ಪಿ.ಬಿ ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ಬಾಲು ವ್ಯವಸ್ಥಿತವಾಗಿ ಸಂಗೀತ ಕಲಿಯಲ್ಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಶಿಖರವಾದ್ರು.

1966ರ ವರ್ಷದಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ'ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ಬಾಲು ಹೇಳುತ್ತಾರೆ 'ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ'. ಅದೇ ರೀತಿ ಮಹಮ್ಮದ್ ರಫಿ ಎಂದರೆ ಅವರಿಗೆ ಪ್ರಾಣ. ಅವರ ಹಾಡುಗಳನ್ನೂ ಎಸ್ ಪಿ ಬಿ ಜೀವ ತುಂಬಿ ಹಾಡುತ್ತಾರೆ.

ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಹಿನ್ನೆಲೆ ಗಾಯಕರು ಅಭಿನಯಿಸುವವರ ಆತ್ಮವಿದ್ದಂತೆ. ಇದನ್ನೇ ಡಾ. ರಾಜ್ ಕುಮಾರ್ ಅವರು ಒಮ್ಮೆ ಪಿ ಬಿ ಎಸ್ ಬಗ್ಗೆ ಹೇಳುತ್ತಾ ‘ಪಿ ಬಿ ಎಸ್ ನನ್ನ ಆತ್ಮ, ನಾನು ಶರೀರ’ ಎನ್ನುತ್ತಿದ್ದರು. ರಾಜ್ ಕಪೂರ್ ಮುಖೇಶ್ ಬಗ್ಗೆ ಇದನ್ನೇ ಹೇಳುತ್ತಿದ್ದರು.

ಹಾವಿನ ದ್ವೇಷ ಹನ್ನೆರಡು ವರುಷ ಎಂದು ಎಸ್. ಪಿ. ಹಾಡಿದಾಗ ವಿಷ್ಣುವರ್ಧನ್ ರಾಮಾಚಾರಿಯಾಗಿಬಿಟ್ಟರು, ಸ್ನೇಹದ ಕಡಲಲ್ಲಿ ಎಂದು ಹಾಡಿದಾಗ ಶ್ರೀನಾಥ್ ಗರಿಗೆದರಿಬಿಟ್ಟರು, ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂದು ಅನಂತ್ ನಾಗ್ ಆಕಾಶಕ್ಕೆ ಹಾರಿದರು, ನಲಿವಾ ಗುಲಾಬಿ ಹೂವೆ ಎಂದು ಶಂಕರನಾಗ್ ಭಾವಸ್ಥರಾದರು.

ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿ ಬಾಲು ಅವರದ್ದು. ಅವರ ಧ್ವನಿಯ ಮೋಡಿ ಎಂ.ಜಿ. ಆರ್, ಶಿವಾಜಿ ಗಣೇಶನ್, ಎನ್ ಟಿ ರಾಮರಾವ್, ರಾಜ್ ಕುಮಾರ್, ಅಕ್ಕಿನೇನಿ ಅಂತಹ ಹಿರಿಯರಿಗೆ ಕೂಡಾ ಆಗಾಗ ಇಣುಕಿತ್ತು. ಹಿಂದಿಯಲ್ಲಿ ಏಕ್ ದೂಜೇ ಕೆಲಿಯೇ ಬಂದಾಗ ಬಾಲು ಹಿಂದಿ ಚಿತ್ರರಂಗವನ್ನೂ ತಮ್ಮ ಮೋಡಿಗೆ ಸೆಳೆದುಕೊಂಡರು.

ಸಾಜನ್, ಮೈ ನೇ ಪ್ಯಾರ್ ಕಿಯಾ ಮುಂತಾದ ಚಿತ್ರಗಳು ಬಂದಾಗ ರಫಿ, ಕಿಶೋರ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದ ಹಿಂದಿ ಚಿತ್ರರಂಗಕ್ಕೆ ಬಾಲು ಬೆನ್ನೆಲುಬಾಗಿದ್ದರು.

16ಕ್ಕೂ ಹೆಚ್ಚು ಭಾಷೆಯಲ್ಲಿ ಹಾಡಿರುವ ಎಸ್.ಪಿ.ಬಿಯವರ ಗಾಯನಕ್ಕೆ ಎಲ್ಲಾ ಚಿತ್ರರಂಗದಲ್ಲಿ ಅಭಿಮಾನಿಗಳು ಇದ್ದಾರೆ. ಆದ್ರೆ ಕನ್ನಡದಲ್ಲಿ ಎಲ್ಲಾ ಭಾಷೆಗಳಿಗಿಂತಲೂ ಒಂದು ಪಟ್ಟು ಜಾಸ್ತಿ. ಈ ಮಾತನ್ನ ಎಷ್ಟೋ ಸಂದರ್ಶನದಲ್ಲಿ ಬಾಲಸುಬ್ರಮಣ್ಯಂರವರೇ ಹೇಳಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಂದ ನನಗೆ ಸಿಗುವ ಪ್ರೀತಿ ಬಹಳ ವಿಶೇಷವಾದದ್ದು, ಕನ್ನಡಿಗರ ಪ್ರೀತಿ ವಿಶ್ವಾಸಕ್ಕೆ ನಾನೆಂದು ಚಿರಋಣಿ ಎಂದು ಹೇಳುತ್ತಿರುತ್ತಾರೆ. ಆರುವರೆ ಕೋಟಿ ಕನ್ನಡಿಗರ ಪರವಾಗಿ ನಮ್ಮ ಕಡೆಯಿಂದ ಎಸ್.ಪಿ.ಬಿ ಯವರಿಗೆ ಜನ್ಮದಿನದ ಶುಭಾಶಯ.

Next Story

RELATED STORIES