ಛೆಟ್ರಿ ಮನವಿಗೆ ಚಿತ್ತಾದ ಅಭಿಮಾನಿಗಳು: ಕ್ರೀಡಾಂಗಣ ಹೌಸ್ಫುಲ್

ಸೋಮವಾರ ಆಡಿದ ಐತಿಹಾಸಿಕ 100ನೇ ಪಂದ್ಯಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿ ಬೆಂಬಲಿಸಿ ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಮಾಡಿದ ಮನವಿಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದೆ.
ಸೋಮವಾರ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಕಿಕ್ಕಿರಿದು ಅಭಿಮಾನಿಗಳು ನೆರೆದಿದ್ದರು. ಇಡೀ ಕ್ರೀಡಾಂಗಣ ಹೌಸ್ಫುಲ್ ಆಗಿತ್ತು. 15 ಸಾವಿರ ಆಸನದ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದ ಸುನೀಲ್ ಛೆಟ್ರಿ, ನಾನು ನಿಮ್ಮಲ್ಲಿ ಹೆಚ್ಚಿನದ್ದು ಏನನ್ನೂ ಕೇಳುವುದಿಲ್ಲ. ನಮ್ಮನ್ನು ನಿಂದಿಸಿ, ಟೀಕೆ ಮಾಡಿ, ಏನೂ ಬೇಕಾದರೂ ಮಾಡಿ. ಆದರೆ ಕನಿಷ್ಠ ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮ್ಮನ್ನು ಬೆಂಬಲಿಸಿ ಎಂದು ಹೃದಯಸ್ಪರ್ಶಿ ಮನವಿ ಮಾಡಿದ್ದರು.
ಸುನೀಲ್ ಛೆಟ್ರಿ ಅವರ ಮನವಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವಾರು ವಿವಿಧ ಕ್ರೀಡೆಗಳ ಗಣ್ಯರು ಬೆಂಬಲ ನೀಡಿದ್ದು ಅಲ್ಲದೇ ಫುಟ್ಬಾಲ್ ಬೆಂಬಲಿಸಲು ಅಭಿಮಾನಿಗಳಿಗೆ ಕರೆ ನೀಡಿದ್ದರು.