ಬಾಲ್ ಬಾಯ್ ಜೊತೆ ಆಡಿ ಆಸೆ ಈಡೇರಿಸಿದ ನಡಾಲ್

ವಿಶ್ವದ ಅಗ್ರಮಾನ್ಯ ಆಟಗಾರ ಸ್ಪೇನ್ನ ರಾಫೆಲ್ ನಡಾಲ್ ಫ್ರೆಂಚ್ ಓಪನ್ಸ್ ಟೆನಿಸ್ ಟೂರ್ನಿಯಲ್ಲಿ ಬಾಲ್ ಬಾಯ್ (ಆಡುವಾಗ ಚೆಂಡು ಎತ್ತಿಕೊಡಲು ಸಹಾಯಕ) ಕನಸನ್ನು ಟೆನಿಸ್ ಕೋರ್ಟ್ನಲ್ಲಿಯೇ ಈಡೇರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಾಖಲೆಯ ಬಾರಿಗೆ ಪ್ರಶಸ್ತಿ ಗೆಲ್ಲುವ ಪ್ರಯತ್ನ ಆರಂಭಿಸಿರುವ ನಡಾಲ್ ತಮ್ಮ ಪುಟಾಣಿ ಅಭಿಮಾನಿಯೊಬ್ಬನ ಕನಸನ್ನು ನನಸು ಮಾಡಿ ಜನರ ಮನಸನ್ನು ಗೆದ್ದಿದ್ದಾರೆ.
ಫ್ರೆಂಚ್ ಓಪನ್ಸ್ನ ನಾಲ್ಕನೇ ಸುತ್ತಿನ ಪಂದ್ಯವನ್ನು ರಿಚರ್ಡ್ ಗಾಸ್ಕೆಟ್ ವಿರುದ್ಧ 6-3, 6-2, 6-2 ನೇರ ಸೆಟ್ಗಳ ಅಂತರದಲ್ಲಿ ಗೆದ್ದ ನಂತರ ಅವರ ಅಭಿಮಾನಿಯ ಕನಸು ಈಡೇರಿಸುವಲ್ಲಿಯೂ ನಡಾಲ್ ಯಶಸ್ವಿಯಾಗಿದ್ದಾರೆ.
ನಿಮಗೆ ವಿಶ್ವದಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ. ಆದರೆ ಪ್ರಸ್ತುತ ನಿಮ್ಮ ದೊಡ್ಡ ಅಭಿಮಾನಿಯೊಬ್ಬರು ಇಲ್ಲೇ ಇದ್ದಾರೆ. ಆತ ಇಲ್ಲೇ ಬಾಲ್ ಬಾಯ್ ಆಗಿದ್ದು, ಆತನಿಗೆ ನಿಮ್ಮ ವಿರುದ್ಧ ಒಂದೇ ಒಂದು ಬಾರಿ ಟೆನಿಸ್ ಆಡುವ ಆಸೆಯಿದೆ ಎಂದು ಪಂದ್ಯದ ನಂತರ ಸಂದರ್ಶಕಿ ನಡಾಲ್ಗೆ ಅವರ ಪುಟಾಣಿ ಅಭಿಮಾನಿಯ ಕುರಿತು ಹೇಳುತ್ತಾರೆ.
ತಕ್ಷಣ ನಡಾಲ್ ತನ್ನ ಕಿಟ್ ಬಳಿ ಹೋಗಿ ಎರಡು ರಾಕೆಟ್ ತಂದು ಒಂದು ರಾಕೆಟ್ ಅನ್ನು ಅಭಿಮಾನಿಗೆ ಕೊಟ್ಟು ಆಟವಾಡಲು ಕೋರ್ಟ್ಗೆ ಇಳಿಯುತ್ತಾರೆ. ಬಾಲಕನ ಜತೆ ಆಟಕ್ಕಿಳಿದ ನಡಾಲ್ ನಿಧಾನವಾಗಿ ರ್ಯಾಲಿ ಆರಂಭಿಸಿ ಆಟವಾಡಿ ತನ್ನ ಅಭಿಮಾನಿಯ ಕನಸು ಈಡೇರಿಸುತ್ತಾರೆ. ನಡಾಲ್ ವಿರುದ್ಧ ಆಟವಾಡುವಾಗ ಬಾಲಕನ ಬ್ಯಾಕ್ಹ್ಯಾಂಡ್ ಮತ್ತು ಪೋರ್ಕ್ಯಾಂಡ್ ಕೌಶಲಗಳಿಗೆ ನೆರೆದಿದ್ದ ಜನರು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹ ನೀಡಿದರು.