Top

11 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ: ಕಾಂಗ್ರೆಸ್​- ಜೆಡಿಎಸ್ ಪೈಪೋಟಿ

11 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ: ಕಾಂಗ್ರೆಸ್​- ಜೆಡಿಎಸ್ ಪೈಪೋಟಿ
X

ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಭಾರಿ ಪೈಪೋಟಿಯೇ ನಡೆದಿದೆ. ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳ ದಂಡೇ ಇದ್ದು, ಮೇಲ್ಮನೆಯಲ್ಲಾದರೂ ಸ್ಥಾನ ಕೊಡಿಸಿ ಎಂದು ತಮ್ಮ ಆಪ್ತ ಮುಖಂಡರ ದುಂಬಾಲು ಬಿದ್ದಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಗದ್ದಲ ತಣ್ಣಗಾಗಿದೆ.ಒಂದು ಕಡೆ ಸಂಪುಟ ರಚನೆ ಕಸರತ್ತು ಜೋರಾಗಿದ್ದರೆ ಇನ್ನೊಂದು ಕಡೆ ಮೇಲ್ಮನೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.ಜೂನ್ ೧೧ ರಂದು ವಿಧಾನಸಭೆ ಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆ ವಿಚಾರವಾಗಿ ವಿವಿಧ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಮೇಲ್ಮನೆಗೆ ಹೋಗುವ ಆಸೆ ಹೊತ್ತು ಆಕಾಂಕ್ಷಿಗಳ ಮದ್ಯ ಬಹುದೊಡ್ಡ ಪೈಪೋಟಿಯೇ ಕಂಡು ಬಂದಿದೆ.ಮೂರೂ ಪಕ್ಷಗಳಲ್ಲಿ ಮೇಲ್ಮನೆಯಲ್ಲಿ ನಮಗೊಂದು ಅವಕಾಶ ಕೊಡಿಸಿ ಎಂದು ಆಕಾಂಕ್ಷಿಗಳು ತಮ್ಮ ತಮ್ಮ ಆಪ್ತ ನಾಯಕರ ದುಂಬಾಲು ಬಿದ್ದಿದ್ದಾರೆ

ವಿಧಾನಪರಿಷತ್ ಸದಸ್ಯರಾದ ಬಿಜೆಪಿಯ ಬಿ.ಜೆ. ಪುಟ್ಟಸ್ವಾಮಿ, ಡಿ.ಎಸ್.ವೀರಣ್ಣ, ಸೋಮಣ್ಣ ಬೇವಿನಮರದ್, ರಘುನಾಥ್ ಮಲ್ಲಕಾಪುರೆ, ಭಾನುಪ್ರಕಾಶ್,ಹಾಗೂ ಕಾಂಗ್ರೆಸ್‌ನ ಎಂ.ಆರ್. ಸೀತಾರಾಮ್, ಇಬ್ರಾಹಿಂ, ಮೋಟಮ್ಮ, ಕೆ. ಗೋವಿಂದರಾಜು, ಜೆಡಿಎಸ್‌ನ ಸೈಯದ್ ಮುದೀರ್ ಆಘಾ ಹಾಗೂ ಪಕ್ಷೇತರ ಅಭ್ಯರ್ಥಿ ಬೈರತಿ ಸುರೇಶ್ ಅವರ ಅವಧಿ ಇದೇ ಜೂನ್ 15 ಕ್ಕೆ ಪೂರ್ಣಗೊಳ್ಳಲಿದ್ದು, ಈ ಸ್ಥಾನಗಳಿಗೆ ಜೂ. 11 ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಸಲು ಬರುವ ಗುರುವಾರ ಮೇ 31 ಕಡೆಯ ದಿನವಾಗಿದೆ.

ವಿಧಾನ ಸಭೆ ಪ್ರಸ್ತುತ ಬಲಾಬಲ

  • ಬಿಜೆಪಿ-104
  • ಕಾಂಗ್ರೆಸ್ -77
  • ಜೆಡಿಎಸ್ - 37
  • ಬಿ.ಎಸ್.ಪಿ -1
  • ಪಕ್ಷೇತರ-2

ಪ್ರಸ್ತುತ ವಿಧಾನಸಭೆಯ 221 ಸದಸ್ಯರು ವಿಧಾನಪರಿಷತ್‌ಗೆ 11 ಮಂದಿಯನ್ನು ಆಯ್ಕೆ ಮಾಡಬೇಕಿದೆ. ಒಬ್ಬ ಅಭ್ಯರ್ಥಿ ಗೆಲ್ಲಲು 21 ಮತಗಳು ಬೇಕು. ವಿಧಾನಸಭೆಯಲ್ಲಿ ಈಗ ಬಿಜೆಪಿ 104 ಸದಸ್ಯ ಬಲ ಹೊಂದಿದ್ದು, ಐದು ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಐದನೇ ಸ್ಥಾನಕ್ಕೆ ಬಿಜೆಪಿಗೆ 1 ಮತದ ಕೊರತೆ ಇದೆ. 78 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ಗೆ 3 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ.ಆದರೆ ನಾಲ್ಕನೇ ಸ್ಥಾನಕ್ಕೆ ಆರು ಮತಗಳ ಕೊರತೆ ಇದೆ. ಜೆಡಿಎಸ್ ಪಕ್ಷ ಬಿಎಸ್‌ಪಿ ಸೇರಿದಂತೆ 3೭ ಸದಸ್ಯರನ್ನು ಹೊಂದಿದ್ದು, ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ 17 ಮತ ಉಳಿಯುತ್ತದೆ. ಇಬ್ಬರು ಪಕ್ಷೇತರರು ಜೆಡಿಎಸ್, ಕಾಂಗ್ರೆಸ್ ಬೆಂಬಲಕ್ಕೆ ಇದ್ದಾರೆ. ಹೀಗಾಗಿ ಬಿಜೆಪಿಯ 5 ಕಾಂಗ್ರೆಸ್‌ನ 4 ಮತ್ತು ಜೆಡಿಎಸ್‌ನ 2 ಸ್ಥಾನಗಳನ್ನು ಗೆಲ್ಲಬಹುದಾಗಿದೆ.

ವಿಧಾನಪರಿಷತ್‌ನ ಸ್ಥಾನಗಳಿಗೆ ಈ ಮೂರು ರಾಜಕೀಯ ಪಕ್ಷಗಳಲ್ಲಿ ಭಾರಿ ಪೈಪೋಟಿ ನಡೆದಿದಿದೆ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶಿವಮೊಗ್ಗದ ರುದ್ರೇಗೌಡ, ಕೆ.ಪಿ. ನಂಜುಂಡಿ ಅಭ್ಯರ್ಥಿಗಳಾಗುವುದು ನಿಶ್ಚಿತ. ಉಳಿದಂತೆ ಬಿ.ಜೆ. ಪುಟ್ಟಸ್ವಾಮಿ, ಡಿ.ಎಸ್. ವೀರಯ್ಯ, ಪ್ರಕಾಶ್ ಪುನರಾಯ್ಕೆ ಬಯಸಿದ್ದರೇ, ಇವರ ಜತೆಗೆ ಬಿಜೆಪಿ ವಕ್ತಾರ ಅಶ್ವತ್ಥ್‌ನಾರಾಯಣ, ತೇಜಸ್ವಿನಿ ಸೇರಿದಂತೆ ಹಲವು ಮುಖಂಡರು ವಿಧಾನಪರಿಷತ್‌ನ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಬಿಜೆಪಿಯಲ್ಲಿ ನಾಳೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ವಿಧಾನಪರಿಷತ್‌ನ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೋರ್ ಕಮಿಟಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿ, ವರಿಷ್ಠರ ಅನುಮೋದನಗೆ ಕಳುಹಿಸಲಾಗುತ್ತದೆ.

ಕಾಂಗ್ರೆಸ್‌ಗೆ ದಕ್ಕುವ ನಾಲ್ಕು ಸ್ಥಾನಗಳಿಗೆ ಮಾಜಿ ಸಚಿವ ಎಂ. ಆರ್. ಸೀತಾರಾಮ್ ಮತ್ತು ಮೋಟಮ್ಮ , ಕೆ. ಗೋವಿಂದರಾಜು, ಸಿ.ಎಂ. ಇಬ್ರಾಹಿಂ ಮರು ಆಯ್ಕೆ ಬಯಸಿದ್ದಾರೆ, ಉಳಿದಂತೆ ಎ.ಆರ್. ಸುದರ್ಶನ್, ಎಂ. ರಾಮಚಂದ್ರಪ್ಪ, ನಿವೇದಿತಾ ಆಳ್ವ, ರಾಣಿಸತೀಶ್, ನಂಜಯ್ಯನಮಠ, ಮುಖ್ಯಮಂತ್ರಿ ಚಂದ್ರು, ನಜೀರ್ ಅಹಮದ್ ಇವರುಗಳು ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.

ಜೆಡಿಎಸ್ ರಾಜ್ಯಸಭಾ ಚುನಾನಣೆಯಲ್ಲಿ ಸೋತಿದ್ದ ಉದ್ಯಮಿ ಫಾರೂಕ್ ಅವರ ಹೆಸರು ಅಂತಿಮಗೊಂಡಿದ್ದು, ಉಳಿದ ಒಂದು ಸ್ಥಾನಕ್ಕೆ ವೈ.ಎಸ್.ವಿ. ದತ್ತ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್, ಮಾಜಿ ಶಾಸಕ ಕೋನರೆಡ್ಡಿ, ಹಿರಿಯ ಮುಖಂಡ ಎಂ.ಎಸ್. ನಾರಾಯಣರಾವ್ ಆಕಾಂಕ್ಷಿಗಳಾಗಿದ್ದಾರೆ.ಇವರಲ್ಲಿ ಬಹುತೇಕ ವೈ.ಎಸ್.ವಿ. ದತ್ತ ಅವರ ಹೆಸರು ಅಂತಿಮವಾಗುವ ಸಾಧ್ಯತೆ ಇದೆ.

ಸಚಿವ ಸಂಪುಟ ರಚನೆ ಬಗ್ಗೆ ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ನಾಯಕರು ವಿಧಾನಪರಿಷತ್‌ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಈಗಾಗಲೇ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ನಾಳೆ ಇಲ್ಲವೆ ನಾಡಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ.

Next Story

RELATED STORIES