Top

ಸೋಮವಾರ ಕರ್ನಾಟಕ ಬಂದ್..?!

ಸೋಮವಾರ ಕರ್ನಾಟಕ ಬಂದ್..?!
X

ವಿಧಾನಸಭೆ ಅಧಿವೇಶನದಲ್ಲಿಂದು ಮಾಜಿ ಸಿಎಂ ಯಡಿಯೂರಪ್ಪ ಕಾಂಗ್ರೆಸ್-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಅಲ್ಲದೇ ರೈತರ ಸಾಲಮನ್ನಾ ಮಾಡದಿದ್ದರೆ. ಸೋವವಾರ ಕರ್ನಾಟಕ ಬಂದ್ ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಬಿಎಶ್ ವೈ.

ಸಿಎಂ ವಿಶ್ವಾಸಮತಯಾಚನೆಗೆ ಅವಕಾಶ ಕೋರಿದ್ದಾರೆ, ಪ್ರಜಾತಂತ್ರ ವ್ಯವಸ್ಥೆಯ ಧಿಕ್ಕಿರಿಸಲಾಗಿದೆ, ಜನರ ಅಭಿಪ್ರಾಯವನ್ನ ಕಡೆಗಣಿಸಿ ಅವಕಾಶವಾದಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 2೦ ತಿಂಗಳ ಅವಧಿ ಸರ್ಕಾರ ಮಾಡಿದ್ದೆವು.ಆಗ ಕುಮಾರಸ್ವಾಮಿಗೆ ಒಂದು ಪ್ರಶ್ನೆಯನ್ನ ಮಾಡಿರಲಿಲ್ಲ. ಆದರೆ 2೦ ತಿಂಗಳ ಅಧಿಕಾರ ಮುಗಿದು ಅಧಿಕಾರ ವಾಪಸ್ ಕೊಡುವಾಗ ಅಪ್ಪ ಮಕ್ಕಳು ಬಂದು ಅನೇಕ ಷರತ್ತು ಹಾಕಿದ್ರು. ಅವತ್ತು ನಾನು ಅವರ ಜೊತೆ ಅಧಿಕಾರ ನಡೆಸಿದ್ದು ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ಹೊರಹಾಕಿದ್ದಾರೆ. 2೦ ತಿಂಗಳು ಆದಮೇಲೆ ಅಧಿಕಾರ ಯಾಕೆ ಕೊಡಲಿಲ್ಲ, ಅಂದು ನಮ್ಮ ಮನೆಯಲ್ಲೇ ಚರ್ಚೆಯಾಗಿತ್ತು, ನಿಮ್ಮ ಚೆಲುವರಾಯಸ್ವಾಮಿ, ಎಲ್ಲರೂ ಇರಲಿಲ್ಲವೇ, ಇದನ್ನ ನಾಡಿನ ಜನ ಗಮನಿಸಿದ್ದಾರೆ ಕುಮಾರಸ್ವಾಮಿಯವರೆ ಎಂದು ಬಿಎಸ್ ವೈ ಪ್ರಶ್ನಿಸಿದರು.

ಇನ್ನು ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಬಗ್ಗೆ ಪ್ರಶ್ನಿಸಿದ ಬಿಎಸ್ ವೈ, ೧೨೮ ಇದ್ದದ್ದು ೭೮ ಸ್ಥಾನಕ್ಕೆ ಕುಸಿದಿದ್ದೀರಿ ಕಾಂಗ್ರೆಸ್ ನವರು, ಸಿದ್ದರಾಮಯ್ಯನವರೇ ಯಾವ ರಾಜಕಾರಣ ಮಾಡಿದ್ರಿ, ನಿಮ್ಮವರೇ ನಿಮ್ಮನ್ನ ಅಪಮಾನ ಮಾಡಲಿಲ್ಲವೇ..?ಜಮೀರ್ ಕೈಕೊಟ್ರು,ಚೆಲುವರಾಯಸ್ವಾಮಿ ಕೈ ಕೊಟ್ರು. ಸ್ವಾಮಿ ಶಿವಕುಮಾರ್ ಅವ್ರೇ, ನೀವು ನಾಳೆ ಪಶ್ಚಾತ್ತಾಪ ಪಡುತ್ತೀರಿ. ಎಲ್ಲರನ್ನೂ ರಕ್ಷಣೆ ಮಾಡಿ ಜನರಿಗೆ ದ್ರೋಹ ಮಾಡಿದವರನ್ನ ಮುಖ್ಯಮಂತ್ರಿ ಮಾಡಿದ್ದೀರ. ನಾನು ಹೇಳಲ್ಲ,ಮುಂದೆ ಜನರೇ ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್ ವಿರುದ್ಧ ವಾಕ್ಪ್ರಹಾರ ನಡೆಸಿದ ಬಿಎಸ್ ವೈ, ೨೨೪ ಕಡೆ ನಿಂತು,೩೮ ಕಡೆ ಗೆದ್ದಿದ್ದೀರಿ. ೧೬ ಜಿಲ್ಲೆಗಳಲ್ಲಿ ‌ಜೆಡಿಎಸ್ ಗೆ ಒಂದು ಸೀಟಿಲ್ಲ. ಅಂಥ ಜೆಡಿಎಸ್ ನವರಿಗೆ ಮುಖ್ಯಮಂತ್ರಿ ಮಾಡಿದ್ದೀರ ಎಂದಿದ್ದಾರೆ. ಅಲ್ಲದೇ, ಸಿದ್ದರಾಮಯ್ಯ ಪರ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿದ ಯಡಿಯೂರಪ್ಪ, ಸತ್ಯಕ್ಕೆ ಅಪಚಾರ ಮಾಡುವುದು ಬೇಡ, ರಾಹುಲ್ ಗಾಂಧಿ ಮಾತನಾಡಿದ ಮೇಲೆ ನೀವು ಮಾತನಾಡ್ತಿದ್ರಿ. ಆದರೆ ಈಗ ನಿಮ್ಮನ್ನ ಹೇಗೆ ನಡೆಸಿಕೊಳ್ತಿದ್ದಾರೆ. ರಾಹುಲ್ ಗಾಂಧಿ ಕರೆದಿದ್ದು ಯಾರನ್ನ..? ಕುಮಾರಸ್ವಾಮಿಯವರನ್ನ ಕರೆದಿದ್ದು. ಸಿದ್ದರಾಮಯ್ಯನವರೇ ನಿಮಗೆ ಇದು ಗೊತ್ತಾಗುತ್ತಿಲ್ಲವೇ..? ಖರ್ಗೆಯವರಿಗೆ ಗೊತ್ತಿದೆ. ವೇದಿಕೆಯಲ್ಲಿ ಸಿದ್ದರಾಮಯ್ಯ ಮೂಲೆಯಲ್ಲಿ ಕೂರುತ್ತಾರೆ. ಇದಕ್ಕೆಲ್ಲ ಕಳನಾಯಕರು ನೀವೇ ಸ್ವಾಮಿ ಎಂದು ಡಿಕೆಶಿಗೆ ಬಿಎಸ್ ವೈ ಟಾಂಗ್ ನೀಡಿದ್ರು.ಅಲ್ಲದೇ ನಮ್ಮ ಹೋರಾಟವೇನಿದ್ದರೂ ಕಾಂಗ್ರೆಸ್ ವಿರುದ್ಧವಲ್ಲ. ನಮ್ಮದೇನಿದ್ದರೂ ಅಪ್ಪ ಮಕ್ಕಳ ವಿರುದ್ಧ ಎಂದು ಬಿಎಸ್ ವೈ ಹೇಳಿದರು.

ಬಿಎಸ್ ವೈ ಟಾಂಗ್ ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನ್ನನ್ನ ಖಳನಾಯಕ ಅಂತ ಬಿಎಸ್ ವೈ ಹೇಳಿದ್ದಾರೆ. ನಾವಿಬ್ಬರೂ ಉತ್ತಮ ಸ್ನೇಹಿತರು, ಆದರೆ ಖಳನಾಯಕ ಅಂತ ಹೇಳಿಸಿಕೊಳ್ಳಲ್ಲ. ರಾಹುಲ್ ಗಾಂಧಿ ಕೊಟ್ಟ ಕೆಲಸ ನಿರ್ವಹಿಸಿದ್ದೇನೆ. ದಯವಿಟ್ಟು ಆ ಅಪವಾದ ನಾನು ಹೊರಲ್ಲ ಎಂದು ಆಕ್ಷೇಪಿಸಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್ ವೈ, ಶಿವಕುಮಾರ್ ಆ ಮಾತನ್ನ ವಾಪಸ್ ಪಡೆಯೋಣ. ನೀವು ಖಳನಾಯಕರಲ್ಲ,ಸಿಎಂ ಆಗೋರು. ಅಲ್ಲಿದ್ದರೆ ನಿಮ್ಮನ್ನ ಸಿಎಂ ಮಾಡ್ತಾರಾ..? ಆರು ತಿಂಗಳು ನೋಡಿ ಅಪ್ಪಮಕ್ಕಳು ನಿಮ್ಮನ್ನ ಕಾಂಗ್ರೆಸ್ ನಿಂದಲೇ ದೂರಮಾಡ್ತಾರೆ ಎಂದು ಹೇಳಿದರು.

ಈ ವೇಳೆ ರೈತರ ಸಾಲಮನ್ನಾ ಬಗ್ಗೆ ಮಾತನಾಡಿದ ಬಿಎಸ್ ವೈ ಸಿಎಂ ಆಗಿ 24ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದಿದ್ದರು. ಸೋಮವಾರದೊಳಗೆ ಸಾಲಮನ್ನಾ ಮಾಡದಿದ್ದರೆ, ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ, ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿ, ಸಭಾತ್ಯಾಗ ಮಾಡಿ ಹೊರನಡೆದಿದ್ದಾರೆ.

Next Story

RELATED STORIES