Top

ಫಿಲಿಫೈನ್ಸ್ ಬಾಡಿ ಬಿಲ್ಡಿಂಗ್​​​ ಚಾಂಪಿಯನ್​​ಷಿಪ್​ಗೆ ಜಿಮ್​ ರವಿ ರೆಡಿ

ಫಿಲಿಫೈನ್ಸ್ ಬಾಡಿ ಬಿಲ್ಡಿಂಗ್​​​ ಚಾಂಪಿಯನ್​​ಷಿಪ್​ಗೆ ಜಿಮ್​ ರವಿ ರೆಡಿ
X

ಆಜಾನು ಬಾಹು ಉಕ್ಕಿನ ದೇಹ.. ಹುರಿಗಟ್ಟಿದ ಮಾಂಸ ಖಂಡಗಳು.. ಪದರುಪದರಾಗಿ ಕಟ್ಟಿದ ಆಬ್ಸ್..ಎಂಟೆದೆಗಳು ಸೇರಿ ಒಂದಾದಂತೆ ಕಾಣುವ ವಿಸ್ತಾರವಾದ ಎದೆ, ಎದ್ದು ಕಾಣುವ ಭುಜ, ಮಾಂಸಖಂಡಗಳ ಗುಡ್ಡಗಳಂತೆ ಕಾಣುವ ತೋಳುಗಳು, ಬಲಭೀಮನನ್ನ ನೆನಪಿಸುವ ತೊಡೆಗಳು.. ಯೆಸ್.. ಇವ್ರೇ ಜಿಮ್ ರವಿ.

ದೇಶ ವಿದೇಶದ ಬಾಡಿ ಬಿಲ್ಡಿಂಗ್ ಚಾಂಪಿಯನ್​ ಶಿಪ್​ಗಳಲ್ಲಿ ಸ್ಪರ್ಧಿಸಿ, ಕೀರ್ತಿ ತಂದವರು ಜಿಮ್ ರವಿ. ಕೋಲಾರದ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಎ.ವಿ ರವಿ, ಜಿಮ್ ರವಿ ಅಂತ್ಲೇ ಫೇಮಸ್. ಸೆಲೆಬ್ರೆಟಿಗಳಿಗೂ ಫಿಟ್​ನೆಸ್​ ಮಂತ್ರ ಹೇಳಿಕೊಟ್ಟು, ಸೈ ಅನ್ನಿಸಿಕೊಂಡಿರೋ ಸೆಲೆಬ್ರೆಟಿ ಫಿಟ್ನೆಸ್ ಗುರು ಈ ಜಿಮ್ ರವಿ.

ಏಳನೇ ವಯಸ್ಸಿನಲ್ಲೇ ಗರಡಿ ಮನೆಯಲ್ಲಿ ಶುರುವಾದ ರವಿ ಅವರ ದೇಹದಂಡನೆ ಅಭ್ಯಾಸ, ಇಂದಿಗೂ ನಿರಂತರವಾಗಿ ಮುಂದುವರೆದಿದೆ.. ಪ್ರತಿದಿನ 7ರಿಂದ 8 ಗಂಟೆಗಳ ಕಾಲ ದೇಹ ದಂಡಿಸುವ ರವಿ, ಕಳೆದ 40 ವರ್ಷಗಳಿಂದ ಬೆಂಗಳೂರಿನ ನಾಗರಭಾವಿಯಲ್ಲಿ ಸ್ವತಃ ಜಿಮ್ ನಡೆಸುತ್ತಿದ್ದಾರೆ. ದೇಹವನ್ನ ಹುರಿಗೊಳಿಸಿಕೊಳ್ಳೋದ್ರ ಜೊತೆಗೆ ಆಸಕ್ತರಿಗೆ ಫಿಟ್ನೆಸ್ ಪಾಠ ಕೂಡ ಮಾಡುತ್ತಿದ್ದಾರೆ ರವಿ.

ಜಿಮ್ ಅಂದ್ರೆ ಏನು ಅಂತ ಬಹುತೇಕರಿಗೆ ಗೊತ್ತಿಲ್ಲದ ಕಾಲದಲ್ಲೇ ದೇಹ ಕಟ್ಟಿ, ಬಾಡಿ ಬಿಲ್ಡಿಂಗ್ ಚಾಂಪಿಯನ್​ಶಿಪ್​ಗಳಲ್ಲಿ ಸ್ಪರ್ಧಿಸಿದವರು ಜಿಮ್ ರವಿ. ಇವ್ರು ಇಷ್ಟ ಪಟ್ಟು ಬಹಳ ಕಷ್ಟ ಪಟ್ಟು, ಬಾಡಿ ಬಿಲ್ಡಿಂಗ್​ನ ಒಲಿಸಿಕೊಂಡು ಗೆದ್ದವರು.. ಈವರೆಗೆ 120ಕ್ಕೂ ಅಧಿಕ ಪದಕ ಜಯಿಸಿದ್ದು, ಅವುಗಳಲ್ಲಿ 90 ಚಿನ್ನದ ಪದಕಗಳು ಅನ್ನೋದು ವಿಶೇಷ. ತಲಾ ಮೂರು ಬಾರಿ ಮಿಸ್ಟರ್ ಇಂಡಿಯಾ, ಮಿಸ್ಟರ್ ಕರ್ನಾಟಕ ಹಾಗೂ ಮಿಸ್ಟರ್ ಬೆಂಗಳೂರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಬಹುಮುಖ ಪ್ರತಿಭೆಯಾಗಿರೋ ಜಿಮ್ ರವಿ, 100 ಕ್ಕೂ ಅಧಿಕ ಸಿನಿಮಾಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಮೂಲಕ ಸಿಪಾಯಿ ಚಿತ್ರದಿಂದ ಬಣ್ಣ ಹಚ್ಚೋಕೆ ಶುರು ಮಾಡಿದ ರವಿ, ಅವ್ರಿಂದಲೇ ಟಾಲಿವುಡ್​ನ ಮೆಗಾಸ್ಟಾರ್ ಚಿರಂಜೀವಿ ಫ್ಯಾಮಿಲಿಗೂ ಹತ್ತಿರವಾಗ್ತಾರೆ. ಇವ್ರ ಪ್ರತಿಭೆ ನೋಡಿ ಮುಂದೆ ಚಿರು, ಪವನ್ ಕಲ್ಯಾಣ್, ರಾಮ್​ಚರಣ್, ನಾಗ ಬಾಬುಗೆ ಜಿಮ್ ಟ್ರೈನರ್​ ಆಗಿ ರವಿ ಭೇಷ್ ಅನ್ನಿಸಿಕೊಂಡಿದ್ದಾರೆ.

ಏಕಲವ್ಯ ಪ್ರಶಸ್ತಿ, ರಾಜ್ಯದ ಶ್ರೇಷ್ಟ ಕ್ರೀಡಾಪಟು ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ರವಿ ಅವರನ್ನು ಅರಸಿ ಬಂದಿವೆ. ಸದ್ಯ ಬೆಂಗಳೂರಿನ ಇನ್​ಕಂ ಟ್ಯಾಕ್ಸ್ ಡಿಪಾರ್ಟ್​ಮೆಂಟ್​ನಲ್ಲಿ ಇನ್ಸ್​ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಜಿಮ್ ರವಿ, ಭಾರತದ ಬಾಡಿ ಬಿಲ್ಡಿಂಗ್ ಟೀಮ್ ಗೆ ಕೋಚ್ ಆಗಿಯೂ ನೇಮಕಗೊಂಡಿದ್ದಾರೆ.

ಅಷ್ಟೇ ಯಾಕೆ ಇದೇ ಜೂನ್ 1 ರಿಂದ 3ರವರೆಗೆ ಫಿಲಿಫೈನ್ಸ್​ನಲ್ಲಿ ನಡೆಯಲಿರೋ ವರ್ಲ್ಡ್​ ಬಾಡಿ ಬಿಲ್ಡಿಂಗ್ ಚಾಂಪಿಯನ್​ಶಿಫ್ ಕಾಂಪಿಟೇಷನ್​ನಲ್ಲಿ ಜಿಮ್ ರವಿ ಭಾರತವನ್ನ ಪ್ರತಿನಿಧಿಸುತ್ತಿದ್ದಾರೆ. ಸುಮಾರು 40ಕ್ಕೂ ಅಧಿಕ ರಾಷ್ಟ್ರಗಳ ಬಾಡಿ ಬಿಲ್ಡರ್ಸ್​ ಈ ಸ್ಫರ್ಧೆಯಲ್ಲಿ ಭಾಗವಹಿಸಲಿದ್ದು, ಭಾರತ ತಂಡದ ಕ್ಯಾಪ್ಟನ್ ಆಗಿ 32 ಮಂದಿ ಟೀಂನ ಕರೆದೊಯ್ಯುತ್ತಿದ್ದಾರೆ. ಅದೇನೇ ಇರಲಿ, ನ್ಯಾಚ್ಚುರಲ್ ಬಾಡಿ ಬಿಲ್ಡ್ ಮೂಲಕ ವಿಶ್ವದ ಗಮನ ಸೆಳೆದಿರೋ ರವಿ, ಈ ಬಾರಿಯೂ ಸಹ ಭಾರತದ ಕೀರ್ತಿ ಪತಾಕೆಯನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ, ಚಿನ್ನದ ಪದಕ ಗೆದ್ದು ಬರಲಿ ಅಂತ ಹಾರೈಸೋಣ.

Next Story

RELATED STORIES