ಹಾರೋಕ್ಕೆ ರೆಡಿಯಾಗ್ತಿದೆ ಸಿಂಪಲ್ ಸುನಿ ‘ಬಜಾರ್’ ಪಾರಿವಾಳ

ಸ್ಯಾಂಡಲ್ವುಡ್ ಸಿನಿರಂಗಕ್ಕೆ ‘ಆಪರೇಷನ್ ಆಲಮೇಲಮ್ಮ ‘, ‘ಚಮಕ್’ ರೀತಿಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಂತಹ ನಿರ್ದೇಶಕ ಸಿಂಪಲ್ ಸುನಿ. ಚಮಕ್ ಸಕ್ಸಸ್ ಗುಂಗಿನಲ್ಲೇ ಬಜಾರ್ ತೆರೆದಿದ್ದ ಸುನಿ ಪಾರಿವಾಳದ ಕಥೆ ಹೇಳೊ ಸುಳಿವು ಕೊಟ್ಟಿದ್ದರು. ಸದ್ದಿಲ್ಲದೇ ಚಿತ್ರದ ಶೂಟಿಂಗ್ನಲ್ಲಿ ಮಗ್ನರಾಗಿದ್ದ ಈ ಸಿಂಪಲ್ ಡೈರೆಕ್ಟರ್, ಇದೀಗ ಕೊನೆ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಬಜಾರ್ ಚಿತ್ರ ಫೈನಲ್ ಶೆಡ್ಯೂಲ್ ಶೂಟಿಂಗ್ ನಡೀತಿದೆ.
ಪರಿವಾಳ ಸ್ಫರ್ಧೆ ಹಾಗೂ ಜೂಜಾಟದ ಬಗ್ಗೆ ಸಿಂಪಲ್ ಸುನಿ ಸ್ಪೆಷಲ್ ಸ್ಟೋರಿ ಹೆಣೆದಿದ್ದಾರೆ. ಸಿಂಪಲ್ ಸುನಿ ಬಜಾರ್ಗೆ ಹೊಸ ಪ್ರತಿಭೆ ಧನ್ವೀರ್ ಗೌಡ ಹೀರೊ. ಧನ್ವೀರ್ಗೆ ಜೋಡಿಯಾಗಿ ಅಧಿತಿ ಪ್ರಭುದೇವ ಬಜಾರ್ ಬಣ್ಣ ಹಚ್ಚಿದ್ದಾರೆ.
ಶೂಟಿಂಗ್ಗೂ ಮೊದಲೇ ಟೀಸರ್ನಿಂದ ಸದ್ದು ಮಾಡಿದ್ದ ಬಜಾರ್ ಚಿತ್ರದ ಕೊನೆಯ ಹಂತದ ಶೂಟಿಂಗ್ ಆಗುತ್ತಿದ್ದು, ನಾಯಕ ನಟನ ಬಾಲ್ಯ ದಿನಗಳನ್ನ ಕಟ್ಟಿಕೊಡ್ತಿದೆ ಚಿತ್ರತಂಡ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಕಣ್ಣಲ್ಲಿ ಬಜಾರ್ ಕಥೆ ಸೆರೆಯಾಗ್ತಿದೆ. ಉಗ್ರಂ ಖ್ಯಾತಿಯ ರವಿ ಬಸ್ರೂರ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬರಲಿವೆ. ಶೂಟಿಂಗ್ ನಂತರ ಸಾಕಷ್ಟು ಸಿಜಿ ವರ್ಕ್ ಬಾಕಿ ಇದ್ದು ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಇರಾದೆಯಲ್ಲಿ ಚಿತ್ರತಂಡವಿದೆ.